ಭಾನುವಾರ, ಜೂನ್ 20, 2021
28 °C

ಹಟ್ಟಿ: ನೀರಿಗಾಗಿ ಹಾಹಾಕಾರ

ಪ್ರಜಾವಾಣಿ ವಾರ್ತೆ/ಎಂ. ಖಾಸಿಂ ಅಲಿ ಹಟ್ಟಿ Updated:

ಅಕ್ಷರ ಗಾತ್ರ : | |

ಹಟ್ಟಿ ಚಿನ್ನದ ಗಣಿ: ಈ ಸಲ ಮಳೆ ಕೊರತೆಯಿಂದಾಗಿ ಅಂತರ್ಜಲ ತೀರ ಕುಸಿದಿದ್ದ ಪರಿಣಾಮ ಹಟ್ಟಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ತೀವ್ರ ನೀರಿನ ಅಭಾವ ಉಂಟಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೀರಿನ ಬವಣೆಯನ್ನು ನೀಗಿಸಲು ಸರ್ಕಾರ ಸಮರೋಪಾದಿಯಲ್ಲಿ ಕ್ರಮಜರುಗಿಸುವುದಾಗಿ ಹೇಳುತ್ತಿದೆ. ಆದರೆ ಈಗಾಗಲೇ ಬೇಸಿಗೆ ಆರಂಭಗೊಂಡಿದೆ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೀರಿನ ಕೊರತೆ ಎದುರಿಸುತ್ತಿರುವ ಗ್ರಾಮೀಣ ಜನತೆ ಆತಂಕ ಪಡುವಂತೆ ಮಾಡಿದೆ.ತಾಲ್ಲೂಕಿನ ಹಟ್ಟಿ ಗ್ರಾಮ ಸೇರಿದಂತೆ ಆನ್ವರಿ, ಹಿರೇ ನಗನೂರು, ವೀರಾಪುರ, ಯಲಗಟ್ಟಾ, ಹೊಸಗುಡ್ಡ, ಪರಸಪ್ಪನದೊಡ್ಡಿ, ಪ್ರತಾಪನದೊಡ್ಡಿ, ಮರಿಯಪ್ಪನದೊಡ್ಡ, ಗುರುಗುಂಟಾ, ರೋಡಲಬಂಡಾ, ಕಡ್ಡೋಣಿ, ತವಗ, ಮೇದಿನಾಪೂರ, ವಂದಲಿ ಹೊಸೂರು ಗ್ರಾಮಗಳಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ನೀರಿನ ತೊಂದರೆ ಉಂಟಾಗಿದೆ.ಆನ್ವರಿ ಗ್ರಾಮದ ಜನತೆ ಮತ್ತು ಜಾನುವಾರು ತತ್ತರಿಸಿ ಹೋಗಿದ್ದಾರೆ. ಮಹಿಳೆಯರು, ಮಕ್ಕಳು ಕೊಡ ನೀರಿಗಾಗಿ ಗ್ರಾಮದ ಪಕ್ಕದ ತೋಟದ ಬಾವಿಗಳು ಹಳೆಯ ಬಾವಿಗಳು ಅಲೆಯುವ ಪರಿಸ್ಥಿತಿ ಬಂದೊದಗಿದೆ. ನೀರಿಗಾಗಿ ಮಹಿಳಾ ಸಂಘಟನೆಗಳು ಗ್ರಾಪಂ ಮುಂದೆ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

 

ಒಟ್ಟಾರೆ ನಮ್ಮಗೋಳು ಕೇಳುವವರಿಲ್ಲ ಎಂದು ಆನ್ವರಿ ಗ್ರಾಮದ ಬಾಷಾ ಸಾಬ್, ಚಂದಪ್ಪ, ಅಮರೇಶ, ಅಯ್ಯಪ್ಪ ದೂರುತ್ತಾರೆ. ಪಂಪ್‌ಸೆಟ್ ಕೆಟ್ಟಿದೆ, ಬಾವಿಯಲ್ಲಿ ನೀರಿಲ್ಲ. ಪೈಪ್ ಲೈನ್ ಒಡೆದಿದೆ ಎಂಬ ಕುಂಟು ನೆಪ ಗ್ರಾಪಂ ಆಡಳಿತ ಜಾರಿಕೊಳ್ಳುತ್ತಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ತಾರಕಕ್ಕೇರಿದರೂ ಗ್ರಾಪಂ ಆಡಳಿತ ಪರಿಯಾಯ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ.ಹಟ್ಟಿ ಚಿನ್ನದ ಗಣಿಗೆ ಹೊಂದಿಕೊಂಡಿರುವ ಹಟ್ಟಿ ಗ್ರಾಮವು ತಾಲ್ಲೂಕಿನಲ್ಲಿ ಎರಡನೇ ಅತಿ ದೊಡ್ಡ ಗ್ರಾಮ ಪಂಚಾಯಿತಿ ಹೊಂದಿದೆ. ಇಲ್ಲಿ ಸುಮಾರು 25 ಸಾವಿರ ಜನಸಂಖ್ಯೆ ವಾಸವಿದೆ. ಹಲವು ವರ್ಷಗಳಿಂದ ಇಲ್ಲಿ ತೀವ್ರ ನೀರಿನ ಸಮಸ್ಯೆ ಇದೆ.  ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಒಂದು ವರ್ಷದ ಹಿಂದೆ ಜಿಲ್ಲಾಡಳಿತ ಸುಮಾರು 16 ಲಕ್ಷ ರೂಪಾಯಿಗಳ ತಾತ್ಕಾಲಿಕ ಸರಬರಾಜು ಯೋಜನೆ ಹಾಕಿಕೊಂಡಿತು.

 

ಇಲ್ಲಿವರೆಗೆ ಈ ಕಾಮಗಾರಿ ಪೂರ್ಣಗೊಂಡಿಲ್ಲ. ಜನತೆ ದಿನ ನಿತ್ಯ ನೀರಿಗಾಗಿ ಪರದಾಡುವುದು ನಿಂತಿಲ್ಲ. ಗ್ರಾಪಂ ಹಾಗೂ ಜಿಲ್ಲಾಡಳಿತ ಈ ಕಾಮಗಾರಿಯನ್ನು ಪೂರ್ಣಗೊಳಿಸುವ ಗೋಜಿಹೋಗುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.ರಸ್ತೆ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಹೊಸಗುಡ್ಡ ತಾಂಡದ ಕಿರು ನೀರು ಸರಬರಾಜು ಯೋಜನೆಯ ಪೈಪ್ ಲೈನ್ ಮುರಿದಿದೆ. ಬೇರೆ ಪೈಪ್‌ಲೈನ್ ಹಾಕಿ ಕೊಡುವುದಾಗಿ ಗುತ್ತಿದಾರರು ಆಶ್ವಾಸನೆ ನೀಡಿದ್ದರು. ಆದರೆ ಮೂರು ತಿಂಗಳುಗಳು ಗತಿಸಿದರೂ ದುರಸ್ತಿ ಮಾಡಿಲ್ಲ.

 

ಸುಮಾರು 1.5 ಕಿ.ಮೀ. ದೂರದ ನೀರಲ ಹಳ್ಳದಿಂದ ನೀರು ತರಬೇಕಾಗಿದೆ. ನಾರಾಯಣಪುರ ಬಲದಂಡೆ ಕಾಲುವೆಯ ಬಸಿ ನೀರು ಈ ಹಳ್ಳಕ್ಕೆ ಬರುತ್ತವೆ. ಕಾಲುವೆಗೆ ನೀರು ಬಿಡುವುದು ನಿಲ್ಲಿಸಿದರೆ ಹಳ್ಳದ ನೀರು ಬತ್ತುತ್ತದೆ. ಪರ್ಯಾಯ ವ್ಯವಸ್ಥೆ ಮಾಡುವಂತೆ ಗೌಡೂರು ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಮರಿಯಪ್ಪ, ಗೋಪಲ, ರಾಮಪ್ಪ ಚೌವಾಣ ಮತ್ತು ಅಮರಪ್ಪ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.