ಹಠದಿಂದ ಸರ್ಕಾರ ಮಣಿಸಲು ಅಸಾಧ್ಯ

ಬುಧವಾರ, ಜೂಲೈ 17, 2019
23 °C

ಹಠದಿಂದ ಸರ್ಕಾರ ಮಣಿಸಲು ಅಸಾಧ್ಯ

Published:
Updated:

ಬೆಂಗಳೂರು: `ಈ ಹಿಂದೆ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಎಲ್ಲರೂ ನಿರ್ದಿಷ್ಟ ವಿಚಾರಗಳನ್ನು ಇಟ್ಟುಕೊಂಡೇ ಸರ್ಕಾರಗಳನ್ನು ಮಣಿಸುತ್ತಿದ್ದರು. ಆದರೆ, ಈಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಠಮಾರಿತನದಿಂದ ಮಣಿಸಲು ಯತ್ನಿಸುತ್ತಿದ್ದಾರೆ.ಹೀಗೆ ಮಾಡುವುದರಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಬಹುದೆಂದು ಅವರು ಕನಸು ಕಾಣುತ್ತಿದ್ದರೆ, ಅದು ಎಂದೂ ಈಡೇರುವುದಿಲ್ಲ~ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ. ಪುಟ್ಟಸ್ವಾಮಿ ಶನಿವಾರ ಟೀಕಿಸಿದರು.ವಿಧಾನಮಂಡಲ ಅಧಿವೇಶನ ಬಹಿಷ್ಕರಿಸಿರುವ ಪ್ರತಿಪಕ್ಷಗಳ ನಿರ್ಧಾರವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಕಟುವಾಗಿ ಟೀಕಿಸಿದರು.`ಶಾಸಕರ ಅನರ್ಹತೆ ರದ್ದು ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನೇ ದಾಳ ಮಾಡಿಕೊಂಡು ಅಧಿವೇಶನ ಬಹಿಷ್ಕಾರ ಸರಿಯಲ್ಲ. ಆ ಕುರಿತು ನಿಯಮ 60ರ ಅಡಿ ಅಲ್ಲದಿದ್ದರೆ ಬೇರೆ ರೂಪದಲ್ಲಿಯಾದರೂ ಚರ್ಚಿಸಬಹುದು. ಆ ಕೆಲಸ ಮಾಡುವುದು ಬಿಟ್ಟು ಹೇಡಿಗಳಂತೆ ಪಲಾಯನ ಮಾಡುವುದು ಎಷ್ಟರಮಟ್ಟಿಗೆ ಸರಿ~ ಎಂದು ತರಾಟೆಗೆ ತೆಗೆದುಕೊಂಡರು.`ಸಿದ್ದರಾಮಯ್ಯ ಅವರು ನಿಜವಾದ ಪ್ರತಿಪಕ್ಷ ನಾಯಕರಾಗಬೇಕಾದರೆ ವಾಸ್ತವ ಸ್ಥಿತಿ ಏನು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಎಲ್ಲವನ್ನೂ ಅಧ್ಯಯನ ಮಾಡಿ, ನಂತರ ಬಹಿಷ್ಕಾರದಂತಹ ತೀರ್ಮಾನಕ್ಕೆ ಬರಬೇಕು~ ಎಂದು ಹೇಳಿದರು.ಹಣ ಸಕ್ರಮ ಮಾಡಲು  ಬಂಡವಾಳ ಹೂಡಿಕೆ

ಬೆಂಗಳೂರು:
`ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಕುಟುಂಬದ ಸದಸ್ಯರು ಅಕ್ರಮವಾಗಿ ಸಂಪಾದಿಸಿದ ಹಣವನ್ನು ಸಕ್ರಮ ಮಾಡಿಕೊಳ್ಳಲು 25 ವಿವಿಧ ಕಂಪೆನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ~ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಶನಿವಾರ ಇಲ್ಲಿ ಆರೋಪ  ಮಾಡಿದರು.`ಕಸ್ತೂರಿ ಮೀಡಿಯಾ ಲಿಮಿಟೆಡ್, ಚನ್ನಾಂಬಿಕ ಫಿಲಂ, ಚನ್ನಾಂಬಿಕ ಚಿತ್ರ ವಿತರಕರು, ಚನ್ನಾಂಬಿಕ ಎಂಟರ್‌ಪ್ರೈಸಸ್, ಚನ್ನಾಂಬಿಕ ಎಕ್ಸಿಬಿಟರ್ಸ್‌, ಅಮೋಘ್ ಬ್ರಾಡ್‌ಬ್ಯಾಂಡ್ ಸರ್ವೀಸಸ್, ರಾಘವೇಂದ್ರ ಎಂಟರ್‌ಪ್ರೈಸಸ್, ಡೆಕ್ಕನ್ ನೆಟ್‌ವರ್ಕ್, ಬಿಎಸ್‌ಕೆ ಟ್ರೇಡಿಂಗ್ ಕಂಪೆನಿ, ನಿಖಿಲ್ ಅಂಡ್ ಕಂಪೆನಿ, ಡೆಕ್ಕನ್ ನೆಟ್‌ವರ್ಕ್ ಇಂಕ್, ಪ್ರಧಾನ್ ಇನ್ಫೋಟೆಕ್, ಏಷ್ಯಾ ಪೆಸಿಫಿಕ್ ಇಂಡಿಯಾ... ಇವುಗಳ ಪೈಕಿ ಬಹುತೇಕ ಸಂಸ್ಥೆಗಳಲ್ಲಿ ದೇವೇಗೌಡರ ಕುಟುಂಬದವರು ಷೇರು ಹೊಂದಿದ್ದಾರೆ. ಇನ್ನೂ ಕೆಲ ಸಂಸ್ಥೆಗಳ ಮಾಲೀಕತ್ವ ಹೊಂದಿದ್ದಾರೆ ಎಂದು ಅವರು ದೂರಿದ್ದಾರೆ.ಗೌಡರ ಕುಟುಂಬಕ್ಕೆ ಸಕ್ಕರೆ ಕಾರ್ಖಾನೆ ಇರುವುದಾಗಿ ಹೇಳಲಾಗಿದೆ. ಆದರೆ, ದಾಖಲೆಗಳಲ್ಲಿ 1007 ರೂಪಾಯಿ ಷೇರು ಇರುವುದು ಮಾತ್ರ ಪತ್ತೆಯಾಗಿದ್ದು, ಅದು ಬಿಟ್ಟು, ಅದರ ಹೆಸರಾಗಲಿ ಅಥವಾ ಮಾಲೀಕತ್ವದ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry