ಗುರುವಾರ , ಅಕ್ಟೋಬರ್ 17, 2019
22 °C

ಹಠಯೋಗಿಯ ಕೋಟಿಜಪ ಸಮಾರೋಪ

Published:
Updated:

ಚಿಂಚೋಳಿ: ತಾಲ್ಲೂಕಿನ ರಟಕಲ್ ಬಳಿಯ ಸುಕ್ಷೇತ್ರ ರೇವಣಸಿದ್ದೇಶ್ವರ ಪಾದಗಟ್ಟಿಯಲ್ಲಿ ಭಕ್ತಂಪಳ್ಳಿಯ ಶಿವಕುಮಾರ ಶಿವಾಚಾರ್ಯರು ಒಂದು ವರ್ಷದಿಂದ ನಡೆಸುತ್ತಿರುವ ಮೌನ ಉಪವಾಸ ಅನುಷ್ಠಾನ, ಕೋಟಿ ಜಪ ಹಾಗೂ ತ್ರಿಕಾಲ ಪೂಜೆಯನ್ನು ಭಾನುವಾರ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸಮಾರೋಪಗೊಂಡಿತು.ಪ್ರಯುಕ್ತ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರನ್ನು ಸಾರೋಟಿನಲ್ಲಿ ಪೀಠಾಶೀನರಾಗಿಸಿದ ಭಕ್ತರು, ಪದಗಟ್ಟಿಯಿಂದ ರಟಕಲ್‌ವರೆಗೆ ಸುಮಂಗಲೆಯರ ಪೂರ್ಣಕುಂಭ ಕಳಸದೊಂದಿಗೆ ಭವ್ಯ ಮೆರವಣಿಗೆ ನಡೆಸಿದರು.ಗ್ರಾಮದ ಮುಖ್ಯಬೀದಿಗಳಲ್ಲಿ ಸಂಚರಿಸಿದ ಸಾರೋಟಿ ತಮ್ಮ ಮನೆಯ ಎದುರು ಬರುತ್ತಿದ್ದಂತೆ ಹೆಂಗಳೆಯರು ಪಾದಪೂಜೆ ನಡೆಸಿ, ತೆಂಗು ಕಾಯಿ ಸಮರ್ಪಿಸಿ ತಮ್ಮ ಹರಕೆ ಸಲ್ಲಿಸಿದರು.ನಂತರ ಪಾದಗಟ್ಟಿಗೆ ಆಗಮಿಸಿದ ಬಳಿಕ ನೆರೆದ ನೂರಾರು ಭಕ್ತರ ಸಮ್ಮುಖದಲ್ಲಿ ಶಿವಕುಮಾರ ಸ್ವಾಮೀಜಿ 5ಕೆಜಿ ಭಾರದ ಲಿಂಗದ ಕೈಯಲ್ಲಿಟ್ಟುಕೊಂಡು ತಾವೇ ನಿರ್ಮಿಸಿದ ತೀರ್ಥಗುಂಡದಲ್ಲಿ ನೀರಿಗಿಳಿದು ಹಠಯೋಗ ಧ್ಯಾನದಲ್ಲಿ ನಿರತರಾದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಭಾಷ್ ರಾಠೋಡ್, ರವಿರಾಜ ಕೊರವಿ, ಶರಣಬಸಪ್ಪ ಮಮಶೆಟ್ಟಿ ಮುಂತಾದವರು ಸ್ವಾಮೀಜಿಗೆ ಪುಷ್ಪಾರ್ಚನೆ ಮಾಡಿದರು.  ನೀರಿನ ಮೇಲೆ ಕೈ ಕಾಲುಗಳನ್ನು ಬಡಿಯದೇ, ವಿವಿಧ ಭಂಗಿಗಳಲ್ಲಿ ಓಂ ನಮ: ಶಿವಾಯ ಮಂತ್ರ ಜಪಿಸುತ್ತ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು.ನಂತರ ಸ್ವಾಮೀಜಿಯನ್ನು ತೀರ್ಥಗುಂಡದ ಎದುರು ಕೂಡಿಸಿ ಭಕ್ತರು ಪಂಚಾಮೃತದಿಂದ ಅಭಿಷೇಕ ನಡೆಸಿದರು.

ನಂತರ ಧರ್ಮ ಸಭೆ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ಮಠಾಧೀಶರು ಶಿವಕುಮಾರ ಶಿವಾಚಾರ್ಯರನ್ನು ಸತ್ಕರಿಸಿದರು. ಮಲ್ಲಿಕಾರ್ಜುನ ವಟವಟಿ, ಅಡೆಪ್ಪಗೌಡ, ಶಶಿಕಲಾ ಘಾಳಯ್ಯ ಹಿರೇಮಠ ಸೇರಿದಂತೆ ನೂರಾರು ಭಕ್ತರು ಹಾಜರಿದ್ದರು.

Post Comments (+)