ಹಠಾತ್ ಕುಸಿದ ಶಿಕ್ಷಣ ಸಚಿವ

7

ಹಠಾತ್ ಕುಸಿದ ಶಿಕ್ಷಣ ಸಚಿವ

Published:
Updated:

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ ಪ್ರಥಮ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಉನ್ನತ ಶಿಕ್ಷಣ ಸಚಿವ ಡಾ.ವೇದವ್ಯಾಸ ಶ್ರೀನಿವಾಸ ಆಚಾರ್ಯ (71) ಅವರು ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ರಾಜ್ಯ ಸರ್ಕಾರಿ ಕಾಲೇಜು ಪ್ರಾಂಶುಪಾಲರ ವೇದಿಕೆ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ವೇದಿಕೆಯತ್ತ ಧಾವಿಸುತ್ತಿದಂತೆಯೇ ಹೃದಯಾಘಾತದಿಂದ ಹಠಾತ್ತನೆ ಕುಸಿದುಬಿದ್ದರು. ತಕ್ಷಣ ಅವರನ್ನು ಕಾರಿನಲ್ಲಿ ಮಲ್ಲಿಗೆ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆದರೆ ಆ ವೇಳೆಗಾಗಲೇ ಅವರ ಹೃದಯ ಬಡಿತ ನಿಂತು ಹೋಗಿತ್ತು. ಮೃತರು ಪತ್ನಿ ಶಾಂತಾ, ನಾಲ್ವರು ಪುತ್ರರು, ಒಬ್ಬ ಪುತ್ರಿಯನ್ನು ಅಗಲಿದ್ದಾರೆ.ಮೃತರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ಸಂಜೆ ಉಡುಪಿಗೆ ತೆಗೆದುಕೊಂಡು ಹೋಗಲಾಯಿತು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೇರಿದಂತೆ ಹಲವು ಸಚಿವರು ವಿಮಾನದಲ್ಲಿಯೇ ಉಡುಪಿಗೆ ತೆರಳಿದರು.ಬೆಳಿಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ ಬಂದ ಆಚಾರ್ಯ ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸರ್ಕಾರಿ ವಿಜ್ಞಾನ ಕಾಲೇಜಿಗೆ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಬರುವುದು ತಡವಾಗಿದೆ ಎಂಬ ಕಾರಣದಿಂದ ಅವರು ಸರಸರನೆ ವೇದಿಕೆಯತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಕುಸಿದುಬಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry