ಶುಕ್ರವಾರ, ಏಪ್ರಿಲ್ 16, 2021
21 °C

ಹಡಗಲಿಯಲ್ಲಿ ರಂಗಮಂದಿರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಬೆಂಗಳೂರು: ‘ರಾಜಕೀಯದಲ್ಲಿ ಎಂತಹ ಬಿಕ್ಕಟ್ಟು ತಲೆದೋರಿದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸುವ ಶಕ್ತಿ ಎಂ.ಪಿ. ಪ್ರಕಾಶ್ ಅವರಿಗೆ ಮಾತ್ರ ಇತ್ತು. ಅಂತಹ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡು ರಾಜ್ಯ ರಾಜಕೀಯ ಮತ್ತು ಸಾಹಿತ್ಯ ವಲಯ ಇಂದು ಬರಡಾಗಿದೆ’ ಎಂದು ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಅಭಿಪ್ರಾಯಪಟ್ಟರು.ಪ್ರಣವ ಪ್ರತಿಷ್ಠಾನವು, ವಕೀಲರ ಬಳಗ ಮತ್ತು ಎಂ.ಪಿ.ಪ್ರಕಾಶ್ ಅಭಿಮಾನಿಗಳ ಬಳಗದ ಸಹಯೋಗದೊಂದಿಗೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಎಂ.ಪಿ.ಪ್ರಕಾಶ್: ಒಂದು ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದರು.‘ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರಕಾಶ್ ಅವರ ಊರಾದ ಹೂವಿನ ಹಡಗಲಿಯಲ್ಲಿ ಒಂದು ರಂಗಮಂದಿರ ಸ್ಥಾಪಿಸಲು ಅನುದಾನ ಮೀಸಲಿಡಲಾಗಿದೆ. ಆದರೆ ಈ ರಂಗಮಂದಿರ ಆದಷ್ಟು ಬೇಗ ಸ್ಥಾಪನೆಯಾಗಿ ಪ್ರಕಾಶ್ ಅವರ ನಾಟಕ ಪ್ರದರ್ಶನಗೊಳ್ಳಲಿ’ ಎಂದು ಅವರು ಆಶಿಸಿದರು. ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ವಿ.ಎಸ್.ಮಳಿಮಠ ಮಾತನಾಡಿ, ‘ಪ್ರಕಾಶ್ ಉತ್ತಮ ಸಂಸದೀಯಪಟುವಾಗಿದ್ದರು. ರಾಜ್ಯದ ಯಾವುದೇ ಮೂಲೆಯ ಸಮಸ್ಯೆ ಮತ್ತು ಅದಕ್ಕಿರುವ ಪರಿಹಾರ ಕುರಿತ ವಿಚಾರವನ್ನು ಅಧಿವೇಶನದಲ್ಲಿ  ವಿವರವಾಗಿ ಮಂಡಿಸುತ್ತಿದ್ದರು. ವೃತ್ತಿಯಲ್ಲಿ ವಕೀಲರಾದ ಅವರು ರಾಜಕೀಯದಲ್ಲಿ ತೊಡಗಿಸಿಕೊಂಡಾಗಲು ಭ್ರಷ್ಟಾಚಾರದೊಂದಿಗೆ ಎಂದಿಗೂ ರಾಜಿಯಾಗಿರಲಿಲ್ಲ’ ಎಂದು ತಿಳಿಸಿದರು.ಎಂ.ಪಿ. ಪ್ರಕಾಶ್ ಅವರ ಅಳಿಯ ಡಾ.ಮಹಾಂತೇಶ್ ಚರಂತಿಮಠ ಮಾತನಾಡಿ, ‘ಬಡತನವಿದ್ದಾಗ ಸಿಟ್ಟಾಗಬೇಡ, ಸಿರಿತನವಿದ್ದಾಗ ಮರೆಯಬೇಡ, ಮದಬೇಡ ಎಂಬ ವಚನವನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಆಳವಡಿಸಿಕೊಂಡಿದ್ದರು’ ಎಂದು ತಿಳಿಸಿದರು.ಹಿರಿಯ ಸಾಹಿತಿ ಸಾ.ಶಿ.ಮರುಳಯ್ಯ ಮಾತನಾಡಿ, ‘ರಾಜಕೀಯದಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯದ ಅಸ್ತಿತ್ವವಿದ್ದಾಗ ಮಾತ್ರ ರಾಜಕೀಯ ಸ್ಥಿತಿ ಉನ್ನತಿಗೊಳ್ಳುತ್ತದೆ. ಅಂತಹ ರಾಜಕೀಯವನ್ನು ಅನುಸರಿಸಿದವರಲ್ಲಿ ಪ್ರಕಾಶ್ ಮೊದಲಿಗರು’ ಎಂದು ತಿಳಿಸಿದರು.ರೋಹಿಣಿ ಗಂಗಾಧರ್ ಅವರು ಗೀತ ನಮನ ಕಾರ್ಯಕ್ರಮ ನಡೆಸಿಕೊಟ್ಟರು. ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಪುಟ್ಟೇಗೌಡ, ಕರ್ನಾಟಕ ಬಾರ್ ಕೌನ್ಸಿಲ್ ಅಧ್ಯಕ್ಷ ಜಯಕುಮಾರ್ ಪಾಟೀಲ್, ಅನಿಲ್‌ಕುಮಾರ್ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.