ಮಂಗಳವಾರ, ಮೇ 18, 2021
31 °C

ಹಡಗಲಿ, ಉಡುಪಿ ಮಲ್ಲಿಗೆಗೆ ರಾಷ್ಟ್ರೀಯ ಮಾನ್ಯತೆ

ಪ್ರಜಾವಾಣಿ ವಾರ್ತೆ / -ಕೆ.ಸೋಮಶೇಖರ್ Updated:

ಅಕ್ಷರ ಗಾತ್ರ : | |

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಬೆಳೆಯುವ ಪರಿಮಳ ಭರಿತ ಮಲ್ಲಿಗೆ ಹೂವಿಗೆ ಕೇಂದ್ರ ಸರ್ಕಾರ ರಾಷ್ಟ್ರೀಯ ಮಾನ್ಯತೆ ನೀಡಿದೆ.ತೋಟಗಾರಿಕೆ ಇಲಾಖೆಯು ಹಡಗಲಿ ಮಲ್ಲಿಗೆ ಹೂವಿಗೆ ರಾಷ್ಟ್ರೀಯ ಮಾನ್ಯತೆ ನೀಡುವಂತೆ ಕೋರಿತ್ತು. ಈ ಸಂಬಂಧ ಕೇಂದ್ರ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಜತೆಗೆ ಉಡುಪಿಯ ಮಲ್ಲಿಗೆಗೂ ರಾಷ್ಟ್ರೀಯ ಮಾನ್ಯತೆ ದೊರೆತಿದೆ.ಇದುವರೆಗೆ ನಂಜನಗೂಡಿನ ರಸಬಾಳೆ, ಮೈಸೂರಿನ ವೀಳ್ಯದೆಲೆ, ಮೈಸೂರು ಮಲ್ಲಿಗೆ, ಸಾಗರದ ಅಪ್ಪೆಮಿಡಿ ಮಾವು, ಗುಲ್ಬರ್ಗ ಜಿಲ್ಲೆಯ ಕಮಲಾಪುರದ ಕೆಂಪು ಬಾಳೆಗೆ ರಾಷ್ಟ್ರೀಯ ಮಾನ್ಯತೆ ಇತ್ತು. ಈ ಬಾರಿ ಹಡಗಲಿ ಮತ್ತು ಉಡುಪಿಯ ಮಲ್ಲಿಗೆಗೆ ಈ ಅವಕಾಶ ದೊರೆತಿದೆ ಎಂದು ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ. ಡಿ.ಬಿ. ಯೋಗಾನಂದ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ರಾಷ್ಟ್ರೀಯ ಮಾನ್ಯತೆ ದಕ್ಕಿರುವುದರಿಂದ ಹಡಗಲಿ ಮಲ್ಲಿಗೆಯ ಘಮ ಘಮ ಪರಿಮಳ ಅಂತರರಾಷ್ಟ್ರೀಯ ಮಾರುಕಟ್ಟೆಗೂ ವ್ಯಾಪಿಸಲಿದೆ. ಉದ್ದೇಶಿತ ದಾವಣಗೆರೆ ಅಂತರರಾಷ್ಟ್ರೀಯ ಹೂ ಹರಾಜು ಕೇಂದ್ರದ ಮೂಲಕ ಬೆಳೆಗಾರನಿಂದ ನೇರವಾಗಿ ಖರೀದಿದಾರನಿಗೆ ಮಲ್ಲಿಗೆ  ಪೂರೈಕೆ ವ್ಯವಸ್ಥೆ ಜಾರಿಗೆ ಬರಲಿದೆ. ಮಧ್ಯವರ್ತಿಗಳ ಹಾವಳಿ ತಪ್ಪುವುದರಿಂದ ಬೆಳೆಗಾರರಿಗೆ ಹೆಚ್ಚು ಬೆಲೆ ಸಿಗಲಿದೆ.ನಾಗತಿ ಬಸಾಪುರ ಗ್ರಾಮದಲ್ಲಿ 4 ಲಕ್ಷ ರೂಪಾಯಿ ವೆಚ್ಚದಲ್ಲಿ ತರಬೇತಿ ಮತ್ತು ಮಾರಾಟ ಮಳಿಗೆ, ಒಂದು ಲಕ್ಷ ರೂಪಾಯಿ ವೆಚ್ಚದಲ್ಲಿ ಕ್ರಾಪ್ ಮ್ಯೂಸಿಯಂ ನಿರ್ಮಿಸಲಾಗುತ್ತದೆ. ಸಂಶೋಧನೆ, ವಿಚಾರ ಸಂಕಿರಣ, ಮಲ್ಲಿಗೆ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಕೆಗೆ ಸಂಬಂಧಿಸಿದಂತೆ ವಾರ್ಷಿಕ 3 ಲಕ್ಷ ರೂಪಾಯಿ ಖರ್ಚು ಮಾಡಲಾಗುವುದು. ಸಾಂಪ್ರದಾಯಿಕ ಕೃಷಿ ಪದ್ಧತಿಯ ಜತೆಗೆ ವೈಜ್ಞಾನಿಕ ಬೆಳೆ ಪದ್ಧತಿ ಪರಿಚಯಿಸಿ, ಅಧಿಕ ಇಳುವರಿ ಕೊಡುವ ಹೊಸ ಆವಿಷ್ಕಾರ ನಡೆಸಲು ತೋಟಗಾರಿಕೆ ಇಲಾಖೆ ಯೋಜಿಸಿದೆ.ಹಿಂದೆ ಸಾವಿರಾರು ಎಕರೆಯಲ್ಲಿ ಬೆಳೆಯುತ್ತಿದ್ದ ಮಲ್ಲಿಗೆಯ ಕೃಷಿ ಇದೀಗ 160 ಎಕರೆಗೆ ಸೀಮಿತಗೊಂಡಿದೆ. ಅಂತರ್ಜಲ ಕುಸಿತ ಮತ್ತು ಹೂವು ಕೀಳುವ ಆಳುಗಳ ಕೊರತೆಯಿಂದಾಗಿ ತೋಟಗಳು ಕ್ರಮೇಣ ಕಡಿಮೆಯಾಗುತ್ತಿವೆ. ನಶಿಸುತ್ತಿರುವ ಹಡಗಲಿಯ ವಸಂತ, ಸೂಜಿ, ದುಂಡು ಮತ್ತು ಕಾಕಡಾ ತಳಿಯ ಮಲ್ಲಿಗೆಗೆ ಮತ್ತೆ ಗತವೈಭವ ನೀಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಕಾರ್ಯ ಯೋಜನೆ ರೂಪಿಸಿದೆ.ರಾಷ್ರೀಯ ತೋಟಗಾರಿಕೆ ಮಿಷನ್ ಮತ್ತು ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿ ಮಲ್ಲಿಗೆ ಬೆಳೆಗಾರರಿಗೆ ಗರಿಷ್ಠ ಪ್ರೋತ್ಸಾಹ ಧನ ನೀಡುವ ಮೂಲಕ ಉತ್ತೇಜನ ನೀಡಲಾಗುತ್ತದೆ. ವಿಜಯನಗರ ಅರಸರ ಕಾಲದಿಂದ ತುಂಗಭದ್ರಾ ನದಿಯಲ್ಲಿ ದೋಣಿ, ತೆಪ್ಪಗಳ ಮೂಲಕ ಇಲ್ಲಿನ ಪರಿಮಳಯುಕ್ತ ಮಲ್ಲಿಗೆಯನ್ನು ಹಂಪಿ ವಿರೂಪಾಕ್ಷ,  ಪಂಪಾಂಬಿಕೆಯರ ಪೂಜೆಗೆ ಕಳುಹಿಸಿ ೊಡಲಾಗುತ್ತಿತ್ತು. ಹಿಂದಿನಿಂದಲೂ ಇಲ್ಲಿ ಮಲ್ಲಿಗೆ ಹೂಗಳನ್ನು ವಿಪುಲವಾಗಿ ಬೆಳೆಯುವುದರಿಂದ ಹಡಗಲಿಗೆ `ಹೂವಿನಹಡಗಲಿ' ಎಂಬ ಹೆಸರು ಬಂದಿರುವುದಾಗಿ ಇತಿಹಾಸಕಾರ ಕೆ.ವಿರೂಪಾಕ್ಷಗೌಡ ಹೇಳುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.