ಹಣಕಾಸು ಅವ್ಯವಹಾರ: ಆರೋಪ

7

ಹಣಕಾಸು ಅವ್ಯವಹಾರ: ಆರೋಪ

Published:
Updated:

ಮಧುಗಿರಿ: ಪಟ್ಟಣದ ಇತಿಹಾಸ ಪ್ರಸಿದ್ಧ ದಂಡಿನಮಾರಮ್ಮನ ದೇವಸ್ಥಾನದ ಆಡಳಿತವನ್ನು ಸರ್ಕಾರ ವಹಿಸಿಕೊಂಡ ನಂತರ ಈಚಿನ ಆಡಳಿತಾಧಿಕಾರಿಗಳ ಅವಧಿಯಲ್ಲಿ ಹಣಕಾಸು ಅವ್ಯವಹಾರ ನಡೆದಿವೆ ಎಂದು ದಂಡಿನ ಮಾರಮ್ಮನ ಉತ್ಸವ ಸಮಿತಿ ಅಧ್ಯಕ್ಷ ಎಚ್.ಬಿ.ತಿಮ್ಮೇಗೌಡ ಆರೋಪಿಸಿದರು.ಹಿಂದಿನ ಆಡಳಿತಾಧಿಕಾರಿ ಅನುರಾಗ್ ತಿವಾರಿ, ಈಗಿನ ಆಡಳಿತಾಧಿಕಾರಿ ಸಿ.ಅನಿತಾ ಉತ್ಸವ ಸಮಿತಿಯವರೊಂದಿಗೆ ಯಾವುದೇ ವಿಚಾರ ಚರ್ಚಿಸದೆ ಅಧಿಕಾರಿಗಳಿಗೆ ಸ್ವಾತಂತ್ರ್ಯ ನೀಡಿದ್ದು ಇದರಿಂದ ಸಾಕಷ್ಟು ಅವ್ಯವಹಾರ ನಡೆದಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.ನಾಲ್ಕು ತಿಂಗಳಿಗೊಮ್ಮೆ ಹುಂಡಿ ಹಣ ಲೆಕ್ಕ ಮಾಡಿದಾಗ ಕನಿಷ್ಠ ರೂ.5ಲಕ್ಷ ಸಂಗ್ರಹವಾಗಿದೆ. ಆದರೆ ಬ್ಯಾಂಕಿಗೆ ಜಮಾ ಮಾಡುವಾಗ ತಾಳೆ ಇಲ್ಲ. ಉತ್ಸವದ ದೇವರನ್ನು ಯಾರಿಗೆ ಬೇಕಾದರೂ ಎಲ್ಲಿಗೆ ಬೇಕಾದರೂ ಸಾವಿರಾರು ರೂಪಾಯಿ ಪಡೆದು ನೀಡುತ್ತಾರೆ. ಇದು ಸಂಪ್ರದಾಯಕ್ಕೆ ವಿರೋಧ. ಇದನ್ನೂ ಕೂಡ ಲೆಕ್ಕದಲ್ಲಿ ತೋರಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಕಾರ್ಯದರ್ಶಿ ಹರಿನಾಥ್‌ಗೌಡ ಮಾತನಾಡಿ, ದೇವಸ್ಥಾನಕ್ಕೆ ಸೇರದ ಕಲ್ಯಾಣಿ ಅಭಿವೃದ್ಧಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು, ಭಕ್ತರು ದೇವರಿಗೆ ನೀಡುವ ಮುಖವಾಡ, ಬಸವಣ್ಣ, ಕಣ್ಣು ಮತ್ತಿತರ ಬೆಳ್ಳಿ ಸಾಮಗ್ರಿ ಲೆಕ್ಕಕ್ಕೆ ಇಲ್ಲದಿರುವುದು, ರಥೋತ್ಸವದ ಹಣ ದುರುಪಯೋಗ, 2 ಲಕ್ಷ ರೂಪಾಯಿಯಲ್ಲಿ ಮುಗಿಯುವ ಜಾತ್ರೆಗೆ 5ರಿಂದ 6ಲಕ್ಷ ಲೆಕ್ಕ ತೋರಿಸುವುದು.

ಜಾತ್ರೆ ಸಂದರ್ಭ ಪ್ರತಿ ದಿನ ನಡೆಯುವ ಉತ್ಸವಗಳನ್ನು ಆಯಾ ಉತ್ಸವ ಮಂಡಳಿಯವರೆ ಖರ್ಚು ವೆಚ್ಚ ವಹಿಸಿಕೊಂಡು ಮಾಡಿದರೂ; ಲೆಕ್ಕಕ್ಕೆ ಸೇರಿಸಿಕೊಳ್ಳುವುದು, ದೇವಸ್ಥಾನದ ಮುಂಭಾಗದ ರಸ್ತೆ ಅಭಿವೃದ್ಧಿ, ರಂಗ ಮಂದಿರ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ 4 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದರೂ ಕಾಮಗಾರಿಗೆ ಆಡಳಿತಾಧಿಕಾರಿ ಅಡ್ಡಿಪಡಿಸಿ ಹಣ ಸರ್ಕಾರಕ್ಕೆ ಹಿಂದಿರುಗುವಂತೆ ಮಾಡಿದ್ದಾರೆ ಎಂದು ದೂರಿದರು.ಉತ್ಸವ ಸಮಿತಿಯಿಂದ ಮಹಾದ್ವಾರ, ಬಾನದ ಮನೆ, ಚಂಡಿ ಚಾಮುಂಡಿ, ಮಹಿಷಾಸುರ ವಿಗ್ರಹ ನಿರ್ಮಾಣ, ಜನರೇಟರ್ ಕೊಠಡಿ, ನೂತನ ಕೊಳವೆ ಬಾವಿ ಕೊರಸಿ, ಬೆಳ್ಳಿಪಲ್ಲಕ್ಕಿ ತಂಗುದಾಣ, ಹೊಸತೇರು, ತೇರಿನ ತಂಗುದಾಣ, ದೇವಾಲಯದ ಮೇಲೆ ರಾಜಗೋಪುರ ನಿರ್ಮಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.ನಿವೃತ್ತ ಶಿಕ್ಷಕ ಚಿಕ್ಕಣ್ಣ ಮಾತನಾಡಿ ಈಚೆಗೆ ಕಾರ್ತೀಕ ಮಾಸದ ಅಂಗವಾಗಿ ಜಿಲ್ಲೆಯ ಎಡೆಯೂರು, ಗೊರವನಹಳ್ಳಿ, ಸಿದ್ದರಬೆಟ್ಟ, ವಡ್ಡಗೆರೆ, ಸಿದ್ದಗಂಗೆಯಲ್ಲಿ ನಡೆದ ದೀಪೋತ್ಸವಗಳಂತೆ ಸಮಿತಿ ವತಿಯಿಂದ ಇಲ್ಲಿನ ದಂಡಿನ ಮಾರಮ್ಮನ ದೇವಸ್ಥಾನದಲ್ಲಿ ಭಕ್ತರ ಸಹಕಾರದಿಂದ ಲಕ್ಷ ದೀಪೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ನಡೆಸಲು ಅನುಮತಿ ಪಡೆದಿಲ್ಲ ಎಂದು ಆಡಳಿತಾಧಿಕಾರಿಗಳು ನಮ್ಮಗಳ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಿದ್ದಪ್ಪ, ರಾಮಕೃಷ್ಣಪ್ಪ, ಇತರೆ ಉತ್ಸವ ಸಮಿತಿಯವರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry