ಹಣಕಾಸು ನೆರವಿಗೆ ಕೇಂದ್ರಕ್ಕೆ ಪ್ರಸ್ತಾವನೆ

7

ಹಣಕಾಸು ನೆರವಿಗೆ ಕೇಂದ್ರಕ್ಕೆ ಪ್ರಸ್ತಾವನೆ

Published:
Updated:

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಾರ್ಡ್‌ಗೊಂದು ಆಸ್ಪತ್ರೆ ಸ್ಥಾಪಿಸುವುದಕ್ಕೆ 150ರಿಂದ 200 ಕೋಟಿ ರೂಪಾಯಿ ಬೇಕಾಗಲಿದೆ. ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ್ ಶುಕ್ರವಾರ ಇಲ್ಲಿ ತಿಳಿಸಿದರು.ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.ಈ ಹಣವನ್ನು ಆಸ್ಪತ್ರೆ ನಿರ್ಮಾಣ ಮತ್ತು ಮೂಲಸೌಲಭ್ಯ ಕಲ್ಪಿಸುವುದಕ್ಕೆ ಬಳಸಲಾಗುವುದು. ಕೆಲವು ಕಡೆ ಈಗಾಗಲೇ ಆಸ್ಪತ್ರೆ ಕಟ್ಟಡ ಇದ್ದು, ಅದನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಅವರು ಹೇಳಿದರು.ಗ್ರಾಮೀಣ ಆರೋಗ್ಯ ಮಿಷನ್ ಮಾದರಿಯಲ್ಲೇ ನಗರ ಆರೋಗ್ಯ ಮಿಷನ್ ಸ್ಥಾಪಿಸುವ ಸಂಬಂಧ ಫೆಬ್ರುವರಿ ವೇಳೆಗೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಏಪ್ರಿಲ್ ನಂತರ ಯೋಜನೆ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ಸಮಗ್ರವಾದ ವರದಿಯನ್ನು ಸಿದ್ಧಪಡಿಸಿ, ಕೇಂದ್ರಕ್ಕೆ ಕಳುಹಿಸಲಾಗುವುದು. ಇದರಲ್ಲಿ ನಗರದ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಇತ್ಯಾದಿ ಎಲ್ಲ ಅಂಶಗಳೂ ಸೇರಿರುತ್ತವೆ ಎಂದರು.ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ  ವಾರ್ಡ್ ಮಟ್ಟದ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಹಂತದ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುತ್ತದೆ. ಅದು ಉಚಿತವಾಗಿ ಇರಬೇಕು ಎಂದೂ ಅದು ಅಪೇಕ್ಷೆ ಪಟ್ಟಿದೆ. ಆದರೆ, ಯಾವ ವರ್ಗದವರಿಗೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಬಿಬಿಎಂಪಿ `ಆರೋಗ್ಯ ಕಾರ್ಡ್' ನೀಡುತ್ತಿದ್ದು, ಅಂತಹ ಎಲ್ಲರಿಗೂ ಈ ಸೌಲಭ್ಯ ವಿಸ್ತರಿಸುವ ಚಿಂತನೆ ನಡೆದಿದೆ ಎಂದು ಹೇಳಿದರು.ಚಿಕಿತ್ಸೆ ಜತೆಗೆ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಜನ ಎದುರಿಸುವ ಸಮಸ್ಯೆಗಳ ಬಗ್ಗೆ ಕೌನ್ಸೆಲಿಂಗ್ ನೀಡುವ ವ್ಯವಸ್ಥೆ ಕೂಡ ವಾರ್ಡ್ ಮಟ್ಟದ ಆಸ್ಪತ್ರೆಗಳಲ್ಲಿ ಇರುತ್ತದೆ. ಸಣ್ಣಪುಟ್ಟ ಕಾಯಿಲೆಗಳ ಪತ್ತೆಗೆ ಬೇಕಾಗುವ ಪ್ರಯೋಗಾಲಯದ ವ್ಯವಸ್ಥೆ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಿಂತಲೂ ಯಾವ ವಿಧದಲ್ಲೂ ಕಡಿಮೆ ಇಲ್ಲದ ಹಾಗೆ ವಾರ್ಡ್ ಮಟ್ಟದ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಅವರು ವಿವರಿಸಿದರು.ವಾರ್ಡ್ ಮಟ್ಟದ ಆಸ್ಪತ್ರೆಗಳಲ್ಲದೆ, ವಲಯ ಮಟ್ಟದಲ್ಲೂ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳನ್ನು ತೆರೆಯಲಾಗುವುದು. ಇಂತಹ ಎಂಟು ಆಸ್ಪತ್ರೆಗಳ ಪೈಕಿ ಈಗಾಗಲೇ ನಾಲ್ಕು ಆಸ್ಪತ್ರೆಗಳನ್ನು ಬೆಂಗಳೂರಿನಲ್ಲಿ ತೆರೆಯಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry