ಹಣಕಾಸು ಬಿಕ್ಕಟ್ಟು: ವೆಚ್ಚಕ್ಕೆ ಕೇಂದ್ರ ಕತ್ತರಿ

7

ಹಣಕಾಸು ಬಿಕ್ಕಟ್ಟು: ವೆಚ್ಚಕ್ಕೆ ಕೇಂದ್ರ ಕತ್ತರಿ

Published:
Updated:

ನವದೆಹಲಿ (ಪಿಟಿಐ): ರಾಷ್ಟ್ರವು ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವುದರಿಂದ ಯೋಜನೇತರ ವೆಚ್ಚವನ್ನು ಶೇ 10ರಷ್ಟು ತಗ್ಗಿಸುವ ಸಲುವಾಗಿ ಅಧಿಕಾರಿಗಳ ವಿದೇಶ ಪ್ರವಾಸ, ಹೊಸ ಹುದ್ದೆಗಳ ಸೃಷ್ಟಿ, ಪಂಚತಾರಾ ಹೋಟೆಲ್‌ನಲ್ಲಿ ಸಭೆ– ಸಮಾವೇಶಗಳಿಗೆ ಕಡಿವಾಣ ಸೇರಿದಂತೆ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.ಆದರೆ ಈ ಕಡಿತವು ರಕ್ಷಣಾ ವೆಚ್ಚ, ವೇತನ ಪಾವತಿ, ಪಿಂಚಣಿ ಇನ್ನಿತರ ಅನುದಾನಗಳಿಗೆ ಅನ್ವಯವಾಗದು. ಸಾಲದ ಮೇಲಿನ ಬಡ್ಡಿಯೂ ಇದರಲ್ಲಿ ಸೇರುವುದಿಲ್ಲ ಎಂದು ಹಣಕಾಸು ಸಚಿವಾಲಯ ಬುಧವಾರ ಸಂಜೆ ಪ್ರಕಟಣೆ ಯಲ್ಲಿ ತಿಳಿಸಿದೆ.ಮುಂದಿನ ಆದೇಶ ಹೊರಡಿಸುವ ತನಕ ಹೊಸ ವಾಹನಗಳನ್ನು ಖರೀದಿಸದಂತೆ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚಿಸಲಾಗಿದೆ. ಒಂದು ವರ್ಷಕ್ಕಿಂತ ಹೆಚ್ಚು ಅವಧಿಯಿಂದ ಖಾಲಿಯಿರುವ ಹುದ್ದೆಗಳಿಗೆ ನೇಮಕ ಮಾಡದಂತೆಯೂ  ಆದೇಶಿಸಲಾಗಿದೆ.ದೇಶೀಯ ಪ್ರವಾಸದ ವೇಳೆ ಉನ್ನತ ಅಧಿಕಾರಿಗಳು ಮಾತ್ರ ಎಕ್ಸಿಕ್ಯುಟಿವ್‌ ದರ್ಜೆಯಲ್ಲಿ ವಿಮಾನ ಪ್ರಯಾಣ ಮಾಡಬಹುದು. ಉಳಿದಂತೆ ಬೇರೆಲ್ಲಾ ದರ್ಜೆಯ ಅಧಿಕಾರಿಗಳು ‘ಎಕಾನಮಿ’ ದರ್ಜೆಯಲ್ಲೇ ತೆರಳಬೇಕು. ವಿದೇಶಕ್ಕೆ ನಿಯೋಗದಲ್ಲಿ ತೆರಳುವವರ ಸಂಖ್ಯೆ ತುಂಬಾ ಕಡಿಮೆ ಇರಬೇಕು ಎಂದೂ ನಿರ್ದೇಶನ ನೀಡಿದೆ.2013–14ನೇ ಸಾಲಿನಲ್ಲಿ ವಿತ್ತೀಯ ಕೊರತೆಯನ್ನು ಒಟ್ಟಾರೆ ರಾಷ್ಟ್ರೀಯ ಉತ್ಪಾದನೆಯ (ಜಿಡಿಪಿ) ಶೇ 4.8 ರಷ್ಟಕ್ಕೆ ಸೀಮಿತಗೊಳಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.ಪ್ರಸಕ್ತ ಸಾಲಿಗೆ ಬಜೆಟ್‌ನಲ್ಲಿ ನಿಗದಿ ಮಾಡಲಾಗಿರುವ ವಿತ್ತೀಯ ಕೊರತೆಯ ಶೇ 62.8ರಷ್ಟು ಕೇವಲ ಐದೇ ತಿಂಗಳ ಅವಧಿಯಲ್ಲಿ ಎದುರಾಗಿರುವುದು ಈ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಕಾರಣವಾಗಿದೆ.ಕಳೆದ ವರ್ಷ ಕೂಡ ವೆಚ್ಚ ಕಡಿತ ಕೈಗೊಂಡಿದ್ದ ಸರ್ಕಾರ ಯೋಜನಾ ವೆಚ್ಚದಲ್ಲಿ ` 93,000 ಕೋಟಿಗಳಷ್ಟು ಭಾರಿ ಮೊತ್ತವನ್ನು ಕಡಿತಗೊಳಿಸಿತ್ತು.‘ಜೂನ್‌ ಕೊನೆಗೊಂಡ ತ್ರೈಮಾಸಿಕದಲ್ಲಿ ಜಿಡಿಪಿ ಶೇ 4.4ಕ್ಕೆ ಕುಸಿದಿರುವುದರಿಂದ ಹೂಡಿಕೆಗೆ ಉತ್ತೇಜನ ನೀಡಬೇಕಾಗಿದೆ. ಹೀಗಾಗಿ ಕಳೆದ ವರ್ಷದಂತೆ ಈ ಸಲ ಯೋಜನಾ ವೆಚ್ಚವನ್ನು ಕಡಿತಗೊಳಿಸಲು ಆಗದು’  ಎಂದು ಹಣಕಾಸು ಸಚಿವ ಪಿ. ಚಿದಂಬರಂ ಸಮರ್ಥಿಸಿಕೊಂಡಿದ್ದಾರೆ.ತಾನು ಕೈಗೊಳ್ಳುವ ಈ ಕ್ರಮಗಳಿಂದ ಎಷ್ಟು ಉಳಿತಾಯವಾಗುತ್ತದೆ ಎಂಬುದನ್ನು ಸರ್ಕಾರ ತಿಳಿಸಿಲ್ಲ. ಮಿತವ್ಯಯ ಕ್ರಮ ಆಕಾಶವಾಣಿ ಸೇರಿದಂತೆ ಎಲ್ಲಾ ಸ್ವಾಯತ್ತ ಸಂಸ್ಥೆಗಳಿಗೂ ಅನ್ವಯವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry