ಬುಧವಾರ, ಏಪ್ರಿಲ್ 21, 2021
23 °C

ಹಣಕಾಸು ಸ್ಥಿತಿ: ಶ್ವೇತಪತ್ರಕ್ಕೆ ಕಾಂಗ್ರೆಸ್ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶ್ವೇತಪತ್ರ ಹೊರಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಆಗ್ರಹಿಸಿದರು.

ಜಗಳೂರಿಗೆ ಚುನಾವಣಾ ಪ್ರಚಾರಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಸ್ಥಿತಿ ಕುರಿತು ಮುಖ್ಯಮಂತ್ರಿ ಅವರು ನೀಡಿರುವ ಹೇಳಿಕೆ ನಗೆಪಾಟಲಿಗೀಡಾಗಿದೆ. ಅದು ಕೇವಲ ಅಂಕಿ-ಸಂಖ್ಯೆಗಳ ಕಂತೆ ಎಂದು ಟೀಕಿಸಿದರು.ಹಣಕಾಸು ಸ್ಥಿತಿ ಉತ್ತಮವಾಗಿದ್ದರೆ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿಸಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದ ಅವರು, ` 3ರಿಂದ 4 ಸಾವಿರ ಕೋಟಿ  ಬಿಲ್‌ಗಳು ಬಾಕಿ ಉಳಿದಿವೆ. ಬಿಬಿಎಂಪಿಯೊಂದರಲ್ಲೇ ` 2,500 ಕೋಟಿ ಗುತ್ತಿಗೆದಾರರಿಗೆ ಹಣ ನೀಡಬೇಕಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಹಾನ್ ಸುಳ್ಳುಗಾರ. ಆದ್ದರಿಂದಲೇ ಆರ್ಥಿಕ ಪರಿಸ್ಥಿತಿ ಸದೃಢ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.ಲೋಕಪಾಲ್ ಮಸೂದೆಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ಪರಮೇಶ್ವರ್, ಈಗಿರುವ ಕಾನೂನುಗಳು ಲೋಕಪಾಲ್‌ಗಿಂತಲೂ ಉತ್ತಮವಾಗಿವೆ. ಅವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಅಧಿಕಾರ ನೀಡಬೇಕು. ರಾಜ್ಯದಲ್ಲೂ ಸಂಪೂರ್ಣವಾಗಿ ಅಧಿಕಾರ ಚಲಾಯಿಸಲು ಲೋಕಾಯುಕ್ತವನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು. ಸರ್ಕಾರಿ ಆಸ್ಪತ್ರೆಗಳನ್ನು ಮಠಕ್ಕೆ ವಹಿಸುವ ಸರ್ಕಾರದ ನಿರ್ಧಾರ ನಾಚಿಕೆಗೇಡಿತನದ ಸಂಗತಿ. ಮಠಗಳ ಬಗ್ಗೆ ತಮಗೆ ಗೌರವವಿದೆ. ಮಠಗಳು ತಮ್ಮದೇ ಆದ ರೀತಿಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿವೆ. ಆದರೆ, ಆಸ್ಪತ್ರೆಗಳನ್ನು ಮಠಗಳಿಗೆ ವಹಿಸುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಆರೋಗ್ಯ ಇಲಾಖೆಯಲ್ಲಿನ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿದರು.ಉಪಚುನಾವಣೆಯಲ್ಲಿ ಜನತೆ ಬದಲಾವಣೆ ಬಯಸುತ್ತಿದ್ದಾರೆ. ಈ ಬಾರಿ ಚುನಾವಣೆ ಫಲಿತಾಂಶ ಮುಖ್ಯಮಂತ್ರಿ ಮತ್ತು ಅವರು ಮಾಡಿರುವ ಭ್ರಷ್ಟಾಚಾರದ ಬಗ್ಗೆ ಜನಾಭಿಪ್ರಾಯವನ್ನು ಬಿಂಬಿಸಲಿದೆ ಎಂದು ನುಡಿದರು. ಚುನಾವಣೆಯಲ್ಲಿ ಅಕ್ರಮಗಳನ್ನು ಮಾಡುವುದನ್ನೇ ಕರಗತ ಮಾಡಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದುವರೆಗಿನ ಚುನಾವಣೆಗಳನ್ನು ಹಣ ಬಲದಿಂದಲೇ ಎದುರಿಸಿದ್ದಾರೆ. ಆದರೆ, ಈ ಬಾರಿ ಮತದಾರರು ಜಾಗೃತರಾಗಿದ್ದಾರೆ. ಹಣ ಪಡೆದರೂ ತಮಗೆ ಬೇಕಾದ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.