ಗುರುವಾರ , ಮೇ 26, 2022
23 °C

ಹಣಕ್ಕಿಂತ ರೋಗಿಗಳ ಆರೋಗ್ಯ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: `ವೈದ್ಯರು ಹಣ ಸಂಪಾದನೆಯನ್ನೇ ಗುರಿಯಾಗಿಸಿ ಕೊಳ್ಳದೆ ಸೇವಾ ಮನೋಭಾವದಿಂದ ರೋಗಿಗಳನ್ನು ಗುಣಪಡಿಸುವ ಮೂಲಕ ಮಾದರಿ ವೈದ್ಯರಾಗಬೇಕು ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು.ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆಯಲ್ಲಿ ಕುಸುಮ (ಹಿಮೋಫಿಲಿಯಾ) ರೋಗಿಗಳ ಚಿಕಿತ್ಸಾ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.`ವೈದ್ಯರು ರೋಗಿಗಳ ಜತೆ ಪ್ರೀತಿಯಿಂದ ಮಾತನಾಡಿ ಸಂತೈಸದಿದ್ದರೆ, ಆತ ಮತ್ತಷ್ಟು ಕುಗ್ಗಿ ಹೋಗುತ್ತಾನೆ. ಆದ್ದರಿಂದ ವೈದ್ಯರು ಔಷಧಗಳ ಜತೆಗೆ ಪ್ರೀತಿ ವಾತ್ಸಲ್ಯವನ್ನು ಬೆರೆಸಿ ರೋಗಿಗಳು ಗುಣಮುಖರಾಗಲು ಶ್ರಮಿಸಬೇಕು' ಎಂದರು.ರಾಜ್ಯ ಹಿಮೋಫಿಲಿಯ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ಡಾ.ಸುರೇಶ ಹನಗವಾಡಿ ಮಾತನಾಡಿ, ಹೊಸದುರ್ಗ ಹಾಗೂ ಹಿರಿಯೂರಿನಲ್ಲಿ ಹಲವರು ಕುಸುಮ ರೋಗದಿಂದ ಬಳಲುತ್ತಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಸೇವೆ ಸಿಗದೇ ದಾವಣಗೆರೆಗೆ ಹೋಗುತ್ತಿದ್ದರು.ಇದನ್ನು ಗಮನಿಸಿದ ನಂತರ ಬಸವೇಶ್ವರ ಆಸ್ಪತ್ರೆಯಲ್ಲಿ ಕುಸುಮ ರೋಗ ಚಿಕಿತ್ಸಾ ವಿಭಾಗವನ್ನು ಪ್ರಾರಂಭಿಸಬೇಕು ಎಂದು ಶಿವಮೂರ್ತಿ ಶರಣರನ್ನು ಕೇಳಿಕೊಂಡೆವು. ಅದಕ್ಕೆ ಅವರು ಸಮ್ಮತಿಸಿ ಇಲ್ಲಿನ ಜನತೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ' ಎಂದರು.ಕಾರ್ಯಕ್ರಮದಲ್ಲಿ ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಪ್ರೊ.ಈ. ಚಿತ್ರಶೇಖರ್, ಪ್ರಾಂಶುಪಾಲ ಡಾ.ಮಹೇಶ್, ವೈದ್ಯಕೀಯ ಅಧೀಕ್ಷಕ ಡಾ.ಫಾಲಾಕ್ಷಯ್ಯ ಹಾಜರಿದ್ದರು.  ಈ ಸಂದರ್ಭ ಡಾ.ಸುರೇಶ್‌ಬಾಬು, ಡಾ.ಸಾಂಬಾಜಿರಾವ್, ಡಾ.ಅಶೋಕ್‌ರೆಡ್ಡಿ, ಡಾ.ಕದಂ ಸತ್ಯನಾರಾಯಣ ರಾವ್, ಡಾ.ವೀರಭದ್ರಪ್ಪ ಅವರನ್ನು ಸನ್ಮಾನಿಸಲಾಯಿತು.ಡಾ.ಮಹೇಶ್ ಸ್ವಾಗತಿಸಿದರು. ಡಾ.ಸುಮಾ ಪಾಟೀಲ್ ಪ್ರಾರ್ಥಿಸಿದರು. ಡಾ.ನಾರಾಯಣಮೂರ್ತಿ ಮತ್ತು ಡಾ.ಗೀತಾ ಪಾಲಾಕ್ಷಯ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.