ಹಣದುಬ್ಬರ ಇಳಿಕೆ ವಿಶ್ವಾಸ

7

ಹಣದುಬ್ಬರ ಇಳಿಕೆ ವಿಶ್ವಾಸ

Published:
Updated:
ಹಣದುಬ್ಬರ ಇಳಿಕೆ ವಿಶ್ವಾಸನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ)  ಶೇ 8.2ರಷ್ಟಾಗಲಿದ್ದು, ಹಣದುಬ್ಬರ ದರ ಶೇ 6.5ಕ್ಕೆ ಇಳಿಕೆ ಕಾಣಲಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಹೇಳಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸಕ್ತ ಅವಧಿಯಲ್ಲಿ ಕೃಷಿ ಮತ್ತು ಕೈಗಾರಿಕೆ  ಕ್ಷೇತ್ರಗಳು ಇಳಿಮುಖ ಪ್ರಗತಿ ದಾಖಲಿಸಲಿವೆ. ಆದರೆ, ಸೇವಾ ಕ್ಷೇತ್ರ ವೇಗವಾಗಿ ಚೇತರಿಸಿಕೊಳ್ಳಲಿದೆ ಎಂದು ಸಲಹಾ ಸಮಿತಿ ತನ್ನ `2011-12ನೇ ಸಾಲಿನ ಆರ್ಥಿಕ ಮುನ್ನೋಟ ವರದಿ~ಯಲ್ಲಿ ಹೇಳಿದೆ.2011-12ನೇ ಸಾಲಿನಲ್ಲಿ ಸರ್ಕಾರ ಶೇ 9ರಷ್ಟು ವೃದ್ಧಿ ದರ ಅಂದಾಜಿಸಿತ್ತು. ಆದರೆ ಇದು ಶೇ 8.2ಕ್ಕೆ ಇಳಿಕೆಯಾಗಲಿದೆ ಎಂದು ಸಲಹಾ ಸಮಿತಿ ಹೇಳಿದೆ. `ಹಣದುಬ್ಬರ ಒತ್ತಡ ಹೆಚ್ಚುತ್ತಿರುವುದು ಮತ್ತು ಹೂಡಿಕೆ ಕಡಿಮೆಯಾಗಿರುವುದು ನಿರೀಕ್ಷಿತ ಪ್ರಗತಿಗೆ ತಡೆಯೊಡ್ಡಿದೆ. ವರ್ಷಾಂತ್ಯಕ್ಕೆ ಅಂದಾಜಿಸಿರುವ ಶೇ 8.2ರಷ್ಟು ವೃದ್ಧಿ ದರ, ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ.ಆದರೆ, ಜಾಗತಿಕ ಸಂಗತಿಗಳ ಹಿನ್ನೆಲೆಯಲ್ಲಿ ನೋಡಿದರೆ ಇದು ಉತ್ತಮ ಪ್ರಗತಿ~ ಎಂದು ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ. ಪ್ರಸಕ್ತ ವರ್ಷ  ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳು ಕ್ರಮವಾಗಿ  ಶೇ 3, ಶೇ 7 ಮತ್ತು ಶೇ 10ರಷ್ಟು ಪ್ರಗತಿ ದಾಖಲಿಸಲಿವೆ ಎಂದು ಸಲಹಾ ಸಮಿತಿ ಹೇಳಿದೆ.ಪ್ರಸಕ್ತ ಜುಲೈ-ಅಕ್ಟೋಬರ್ ತ್ರೈಮಾಸಿಕ ಅವಧಿಯಲ್ಲಿ ಒಟ್ಟಾರೆ ಹಣದುಬ್ಬರ ದರ ಶೇ 9ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ  ಇರಲಿದೆ. ನವೆಂಬರ್ ನಂತರ ಸ್ವಲ್ಪ ಇಳಿಕೆ ಕಾಣಬಹುದು. ಹಣದುಬ್ಬರ ಇಳಿಕೆಯಾಗುವ ಸೂಚನೆಗಳು ಕಾಣುವವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಬಿಗಿ ವಿತ್ತೀಯ ನೀತಿ ಮುಂದುವರೆಸಬೇಕು ಎಂದು ಸಮಿತಿ ಹೇಳಿದೆ.ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 4.7ರಷ್ಟು ವಿತ್ತೀಯ ಕೊರತೆ ಸರಾಸರಿ ಕಾಯ್ದುಕೊಳ್ಳುವುದು ಕಷ್ಟ. ಪೆಟ್ರೋಲಿಯಂ ಉತ್ಪನ್ನಗಳಿಗೆ ಗರಿಷ್ಠ ಮಟ್ಟದ  ಸಬ್ಸಿಡಿ ಕಲ್ಪಿಸಿರುವುದು ವಿತ್ತೀಯ ಕೊರತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.ಪ್ರಣವ್ ಪ್ರತಿಕ್ರಿಯೆ: ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜಿಸಲಾಗಿರುವ ಶೇ 8.2ರಷ್ಟು ವೃದ್ಧಿ ದರ ತೀರಾ ನಿರಾಶದಾಯ ಸ್ಥಿತಿ ಅಲ್ಲ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ. ಜಾಗತಿಕ ಆರ್ಥಿಕ ಅಸ್ಥಿರತೆ ಮುಂದುವರೆದಿರುವ ಸಂದರ್ಭದಲ್ಲಿ  ಶೇ 8.2ರಷ್ಟು `ಜಿಡಿಪಿ~ ದೇಶದ ಉತ್ತಮ ಪ್ರಗತಿಯನ್ನು ಬಿಂಬಿಸುತ್ತದೆ. ಇದು ಖಂಡಿತ ನಿರಾಶದಾಯಕ ಸ್ಥಿತಿ ಅಲ್ಲ ಎಂದು ಪ್ರಣವ್ ಹೇಳಿದ್ದಾರೆ.

ಮುಖ್ಯಾಂಶಗಳು

* 2011-12ನೇ ಸಾಲಿನಲ್ಲಿ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 8.2* ಮಾರ್ಚ್ ಅಂತ್ಯದ ವೇಳೆಗೆ ಹಣದುಬ್ಬರ ಶೇ 6.5ರಷ್ಟಕ್ಕೆ ಇಳಿಕೆ* ವಿತ್ತೀಯ ನೀತಿಯಲ್ಲಿ ಹಣದುಬ್ಬರ ತಗ್ಗಿಸಲು ಆದ್ಯತೆ* ಶೇ 3ರಷ್ಟು ಕೃಷಿ ಮತ್ತು ಶೇ 7ರಷ್ಟು ಕೈಗಾರಿಕೆ ಪ್ರಗತಿ ಅಂದಾಜು* ಶೇ 36.7ರಷ್ಟು ಹೂಡಿಕೆ ವೃದ್ಧಿ ನಿರೀಕ್ಷೆ* ರೂ. 2,43,000 ಕೋಟಿ ವ್ಯಾಪಾರ ಕೊರತೆ ಅಂದಾಜು* ರೂ.1,57,500 ಕೋಟಿ ವಿದೇಶಿ ನೇರ ಬಂಡವಾಳ ಹೂಡಿಕೆ ಸಾಧ್ಯತೆ* ರೂ. 63,000 ಕೋಟಿ ವಿದೇಶಿ  ಸಾಂಸ್ಥಿಕ ಹೂಡಿಕೆ ನಿರೀಕ್ಷೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry