ಬುಧವಾರ, ಜುಲೈ 28, 2021
21 °C

ಹಣದುಬ್ಬರ: ಉಳಿತಾಯ ತೀವ್ರ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಅಗತ್ಯ ವಸ್ತುಗಳ ಬೆಲೆ ಏರಿಕೆ, ದುಬಾರಿಯಾಗಿರುವ ಶಿಕ್ಷಣ, ಇಂಧನ ಇತ್ಯಾದಿ ಕಾರಣಗಳಿಂದ ಕಳೆದ ಆರು ವರ್ಷಗಳಿಂದ ವೃತ್ತಿಪರರ ಸರಾಸರಿ ‘ಕೌಟುಂಬಿಕ ಉಳಿತಾಯ’ ಶೇ 45ರಷ್ಟು ಕುಸಿತ ಕಂಡಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ನಡೆಸಿದ ಸಮೀಕ್ಷೆ ತಿಳಿಸಿದೆ.

ಸುಮಾರು 5 ಸಾವಿರ ಜನ ಉದ್ಯೋಗಿಗಳು ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಇವರಲ್ಲಿ ಹೆಚ್ಚಿನವರು  ಹಣದುಬ್ಬರ ದರ ಏರಿಕೆ ತಮ್ಮ ‘ಕೌಟುಂಬಿಕ ಉಳಿತಾಯ’ ಪ್ರಮಾಣ ತಗ್ಗಿಸಿದೆ ಎಂದು ಹೇಳಿದ್ದಾರೆ. ಅಲ್ಲದೆ, ಬೆಲೆ ಏರಿಕೆಯಿಂದ ಜೀವನ ಮಟ್ಟ ಕೂಡ ಕೆಳಮಟ್ಟಕ್ಕೆ ಇಳಿದಿದೆ ಎನ್ನುತ್ತಾರೆ.‘ಕಳೆದ ಆರು ವರ್ಷಗಳಲ್ಲಿ ಜನಸಾಮಾನ್ಯರ ವೇತನ ಶೇ 30ರಷ್ಟು ಹೆಚ್ಚಾಗಿರುವುದೇನೋ ನಿಜ. ಆದರೆ, ಅಗತ್ಯ ವಸ್ತುಗಳಿಗೆ ಬಳಸುವ ವೆಚ್ಚ ಶೇ 35ರಷ್ಟು ಹೆಚ್ಚಿದೆ. ಆದಾಯಕ್ಕಿಂತಲೂ ಖರ್ಚುಗೆ ಹೆಚ್ಚು ಹಣ ಮೀಸಲಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಅನೇಕರು. ಸರಾಸರಿ ರೂ. 40 ಸಾವಿರ   ವೇತನ ಇರುವ ವ್ಯಕ್ತಿ ವಿವೇಚನೆಗೆ ಒಳಪಟ್ಟ ಖರ್ಚುಗಳಿಗೆ  ಬಳಸುವ  ಮೊತ್ತ ರೂ. 17 ಸಾವಿರವನ್ನು ದಾಟುವುದಿಲ್ಲ. ಮನೆ ಬಾಡಿಗೆ ಅಥವಾ ಬ್ಯಾಂಕ್ ಸಾಲ ಪಾವತಿಗಾಗಿ ರೂ. 6ರಿಂದ ರೂ. 8 ಸಾವಿರ  ಖರ್ಚು ಮಾಡುತ್ತಾನೆ. ದ್ವಿಚಕ್ರವಾಹನ ಮತ್ತು ಕಾರಿನ ಸಾಲ ಪಾವತಿಗೆ ರೂ. 5 ಸಾವಿರ ಖರ್ಚಾಗುತ್ತದೆ. ಆದರೆ, ಸುಮಾರು ರೂ. 7 ರಿಂದ ರೂ. 10 ಸಾವಿರ ಮಕ್ಕಳ ಶಿಕ್ಷಣ ಮತ್ತು ಶೀಘ್ರ ವಿಲೇವಾರಿಯಾಗುವ ಗ್ರಾಹಕ ವಸ್ತುಗಳಿಗೆ ವ್ಯಯವಾಗುತ್ತದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಕಳೆದರೆ ಆತನ ‘ಮನೆ ಉಳಿತಾಯ’ ಪ್ರಮಾಣ ತುಂಬಾ ಕಡಿಮೆ ಎನ್ನುತ್ತದೆ ‘ಅಸೋಚಾಂ’

ಏರುತ್ತಿರುವ ಹಣದುಬ್ಬರ ದರ ಉದ್ಯೋಗಿಗಳಿಗೆ ಮಾತ್ರವಲ್ಲ ಕಂಪೆನಿಗಳಿಗೂ ಬಿಸಿ ಮುಟ್ಟಿಸಿದೆ. ನೌಕರರ ವೇತನವನ್ನು ದುಪ್ಪಟ್ಟು ಹೆಚ್ಚಿಸಬೇಕು ಎನ್ನುವ ಒತ್ತಡ ಕಂಪೆನಿಗಳ ಮೇಲೆ ಹೆಚ್ಚುತ್ತಿದೆ. ತರಕಾರಿ, ಹಣ್ಣು, ಇಂಧನ, ಬಾಡಿಗೆ ಎಲ್ಲವುಗಳ ದರವೂ ಹೆಚ್ಚಿದೆ. ಆ ಹಿನ್ನೆಲೆಯಲ್ಲಿ ಉಳಿತಾಯ ಕಡಿಮೆಯಾಗಿದ್ದು, ಖರ್ಚು ಹೆಚ್ಚಾಗಿದೆ ಎನ್ನತ್ತಾರೆ ವೃತ್ತಿಪರರು.

ಮಾರ್ಚ್ ತಿಂಗಳಲ್ಲಿ ಸಗಟು ಸೂಚ್ಯಂಕ ಆಧರಿಸಿದ ಆಹಾರ ಹಣದುಬ್ಬರ ದರ ಶೇ 8.98ರಷ್ಟಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.