ಮಂಗಳವಾರ, ಮಾರ್ಚ್ 9, 2021
23 °C

ಹಣದುಬ್ಬರ ಗುರಿ ಶೇ 4ಕ್ಕೆ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಣದುಬ್ಬರ ಗುರಿ ಶೇ 4ಕ್ಕೆ ನಿಗದಿ

ನವದೆಹಲಿ (ಪಿಟಿಐ): ಹಣಕಾಸು ನೀತಿ ಸುಧಾರಣಾ ಕ್ರಮದ ಅಂಗವಾಗಿ, ಕೇಂದ್ರ ಸರ್ಕಾರವು ಮುಂದಿನ 5 ವರ್ಷಗಳವರೆಗೆ ಹಣದುಬ್ಬರವನ್ನು ಶೇ 4ಕ್ಕೆ ನಿಗದಿಪಡಿಸಿದೆ.2021ರವರೆಗೆ ಈ ಗುರಿ ನಿಗದಿಪಡಿಸಲಾಗಿದೆ. ಈ ಗುರಿ ಸಾಧನೆಯಲ್ಲಿ ಶೇ 2ರಷ್ಟು ಆಚೀಚೆ  ಆಗಬಹುದಾಗಿದ್ದು,  ಗರಿಷ್ಠ  ಮಟ್ಟವು ಶೇ 6 ಮತ್ತು ಕನಿಷ್ಠ ಮಟ್ಟವು ಶೇ 2ರಷ್ಟು ಇರಲಿದೆ.ಆರ್ಥಿಕತೆಯು ದಿನೇ ದಿನೇ ಸಂಕೀರ್ಣಗೊಳ್ಳುತ್ತಿರುವುದರ ಸವಾಲುಗಳನ್ನು ಪರಿಗಣಿಸಿ ಮತ್ತು ಆರ್ಥಿಕ ಬೆಳವಣಿಗೆಗೆ ಮಹತ್ವ ನೀಡಿ ಹಣದುಬ್ಬರ ಗುರಿ ನಿಗದಿ ಮಾಡಲಾಗಿದೆ.ಇದೊಂದು ಶಾಸನಾತ್ಮಕ ಬೆಂಬಲ ಪಡೆದ ಮಹತ್ವದ ಹಣಕಾಸು ಸುಧಾರಣಾ ಕ್ರಮವಾಗಿದೆ ಎಂದು ಹಣಕಾಸು ಇಲಾಖೆಯು ತಿಳಿಸಿದೆ.ಭಾರತೀಯ ರಿಸರ್ವ್‌ ಬ್ಯಾಂಕ್‌ ಜತೆಗೆ ಕೇಂದ್ರ ಸರ್ಕಾರವು ಕಳೆದ ವರ್ಷ ಮಾಡಿಕೊಂಡಿರುವ ಹಣಕಾಸು ನೀತಿ ಒಪ್ಪಂದದ ಅನ್ವಯ, ಸರ್ಕಾರವು ಗ್ರಾಹಕರ ಬೆಲೆ ಸೂಚ್ಯಂಕದ (ಸಿಪಿಐ) ಗುರಿಯನ್ನು ಶೇ 4ಕ್ಕೆ ನಿಗದಿ ಮಾಡಿದೆ.ಜೂನ್‌ ತಿಂಗಳಲ್ಲಿ ‘ಸಿಪಿಐ’ ಶೇ 5.77ಕ್ಕೆ ಏರಿಕೆಯಾಗಿದ್ದು, 22 ತಿಂಗಳಲ್ಲಿನ ಅತ್ಯಂತ ವೇಗದ ಏರಿಕೆ ಇದಾಗಿತ್ತು. ಹೊಸದಾಗಿ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಹಣದುಬ್ಬರವನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.ಸತತ ಮೂರು ತ್ರೈಮಾಸಿಕ ಅವಧಿಗಳಿಗೆ ಸರಾಸರಿ ಹಣದುಬ್ಬರವು ಗರಿಷ್ಠ ಶೇ 6ಕ್ಕಿಂತ ಹೆಚ್ಚು ಅಥವಾ ಕನಿಷ್ಠ ಶೇ 2ಕ್ಕಿಂತ ಕಡಿಮೆ ಇದ್ದರೆ, ಅದೊಂದು ಹಣದುಬ್ಬರ ಗುರಿ ಸಾಧನೆಯ ವೈಫಲ್ಯ ಎಂದೇ ಪರಿಗಣಿಸಲಾಗುತ್ತಿದೆ.ಜೇಟ್ಲಿ -ರಾಜನ್‌ ಭೇಟಿ

ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌  ರಘುರಾಂ ರಾಜನ್‌ ಅವರು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಕೇಂದ್ರ ಸರ್ಕಾರವು ಹಣದುಬ್ಬರ ಗುರಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಈ ಭೇಟಿ  ನಡೆದಿದೆ.

ಆರ್‌ಬಿಐನ ಹೊಸ ಬಡ್ಡಿ ದರ ನಿಗದಿಪಡಿಸಲಿರುವ ಸಮಿತಿಯು ಈ ಗುರಿ ಆಧರಿಸಿಯೇ ನಿರ್ಧಾರಕ್ಕೆ ಬರಲಿದೆ.  ಇದೇ 9ರಂದು ಆರ್‌ಬಿಐ ತನ್ನ ಹಣಕಾಸು ನೀತಿ ಪರಾಮರ್ಶಿಸಲಿದ್ದು, ಇಬ್ಬರೂ ಆ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.