ಹಣದುಬ್ಬರ ತಡೆಗೆ ಕಠಿಣ ಕಾನೂನು ಜಾರಿಗೊಳಿಸಿ

7

ಹಣದುಬ್ಬರ ತಡೆಗೆ ಕಠಿಣ ಕಾನೂನು ಜಾರಿಗೊಳಿಸಿ

Published:
Updated:

ಬಳ್ಳಾರಿ: ಭ್ರಷ್ಟಾಚಾರ ಮತ್ತು ಹಣದುಬ್ಬರ ತಡೆಗೆ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಸಿಪಿಎಂ ಸಂಸದ ಬಸುದೇವ್ ಆಚಾರ್ಯ ಆಗ್ರಹಿಸಿದರು.ನಗರದ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಹಣದುಬ್ಬರ ಮಿತಿ ಮೀರಿ ಅಗತ್ಯ ವಸ್ತುಗಳ ಬೆಲೆ ಜನಸಾಮಾನ್ಯರ ಕೈಗೆ ನಿಲುಕುತ್ತಿಲ್ಲ. ಈ ಸಮಸ್ಯೆಯಿಂದ ಜನ ಕಂಗೆಟ್ಟಿದ್ದು ಕಠಿಣ ಕಾನೂನು ಕ್ರಮದಿಂದ ಇವುಗಳನ್ನು ತಡೆಯಬೇಕಾಗಿದೆ ಎಂದರು. ನ್ಯಾಯಾಧೀಶರನ್ನು ನ್ಯಾಯಾಧೀಶರೇ ನೇಮಿಸುವ ಪದ್ಧತಿ ಹೋಗಬೇಕು. ನ್ಯಾಯಾಧೀಶರ ನೇಮಕಕ್ಕೆ ವಿಶೇಷ ಆಯೋಗ ರಚಿಸಬೇಕು. ರಾಷ್ಟ್ರೀಯ ನ್ಯಾಯಾಂಗ ಆಯೋಗದ ಮೂಲಕ ನ್ಯಾಯಾಧೀಶರ ನೇಮಕವಾಗಬೇಕು ಎಂದು ಒತ್ತಾಯಿಸಿದರು. ದೇಶದಲ್ಲಿ ಭ್ರಷ್ಟ ರಾಜಕಾರಣಿಗಳು, ಆಡಳಿತಶಾಹಿ ಮತ್ತು ಕಾರ್ಪೊರೇಟ್ ವಲಯದ ನಡುವಿನ ಸಂಬಂಧ ದೇಶದಲ್ಲಿ ಸಮಸ್ಯೆಗಳನ್ನು ಹುಟ್ಟಿಹಾಕಿದೆ.ಈ ಅವ್ಯವಸ್ಥೆ ಹೋಗಲಾಡಿಸಬೇಕು. ಇಂತಹ ಅಕ್ರಮ ಸಂಬಂಧವನ್ನು ತಡೆಯಬೇಕು. ಆದಾಯ ತೆರಿಗೆ 80ಜಿಯನ್ನು ಕೇಂದ್ರ ಸರಕಾರ ತಿದ್ದುಪಡಿ ಮಾಡಬೇಕು. ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಸಂಸ್ಥೆಗಳು ನೀಡುವ ದೇಣಿಗೆಗೆ ಆದಾಯ ತೆರಿಗೆ ಮಿತಿ ನೀಡಲು ಅವಕಾಶ ಕಲ್ಪಿಸಿರುವುದು ಆತಂಕದ ವಿಷಯ ಎಂದರು.

 

ದೇಶದಲ್ಲಿ ನಡೆದ ದೊಡ್ಡ ಹಗರಣಗಳ ಪೈಕಿ 2ಜಿ ತರಂಗಾತರ ಹಗರಣ ಬಹುಮುಖ್ಯವಾಗಿದೆ. ಕೇಂದ್ರ ಸರಕಾರದ ಭೌಗೋಳೀಕರಣ, ಖಾಸಗೀಕರಣ, ಉದಾರೀಕರಣ ನೀತಿಗಳಿಂದಾಗಿ ಭ್ರಷ್ಟಾಚಾರ ಎಲ್ಲೆಡೆ ತನ್ನ ಬಾಹುಗಳನ್ನು ಚಾಚಿಕೊಂಡಿದೆ. ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ 1.77ಲಕ್ಷ ಕೋಟಿ ರೂ. ಸರಕಾರಕ್ಕೆ ನಷ್ಟವಾಗಿದೆ.ಹಗರಣದಲ್ಲಿ ಈವರೆಗೆ ಸಂಸದರೂ ಸೇರಿದಂತೆ ಒಟ್ಟು 27 ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಹೆಸರು ಕೇಳಿಬರುತ್ತಿರುವುದರಿಂದ ಇದರ ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.ಭ್ರಷ್ಟಾಚಾರ ನಿಯಂತ್ರಣಕ್ಕೆ ಬಲಿಷ್ಠ ಜನ ಲೋಕಪಾಲ ಬಿಲ್ ಜಾರಿಗೊಳಿಸಬೇಕು. ಪ್ರಧಾನಮಂತ್ರಿ, ಜನಪ್ರತಿನಿಧಿಗಳು, ಅಧಿಕಾರಿಗಳು, ಕಾರ್ಪೊರೇಟ್ ಸಂಸ್ಥೆಗಳನ್ನು ಇದರ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಸಂಸದ ಬಾಲಗೋಪಾಲನ್, ಜಿ.ಎನ್. ನಾಗರಾಜ್, ಎಸ್. ಪ್ರಸನ್ನಕುಮಾರ್, ಯು. ಬಸವರಾಜ್, ಸತ್ಯಬಾಬು ಇತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry