ಬುಧವಾರ, ಏಪ್ರಿಲ್ 14, 2021
24 °C

ಹಣದುಬ್ಬರ: ವೆಚ್ಚಕ್ಕೆ ಕಡಿವಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗರಿಷ್ಠ ಪ್ರಮಾಣದ ಹಣದುಬ್ಬರ ಮತ್ತು  ಹೆಚ್ಚಿದ ಇಂಧನ ವೆಚ್ಚದ ಫಲವಾಗಿ ಮಧ್ಯಮ ವರ್ಗದ ಜನರು ತಮ್ಮ ಹಲವರು ವೆಚ್ಚಗಳಿಗೆ ಅನಿವಾರ್ಯವಾಗಿ ಕಡಿವಾಣ ವಿಧಿಸುವಂತಾಗಿದೆ. ಮಧ್ಯಮ ವರ್ಗದವರು ಮನರಂಜನೆ, ವಿಹಾರ ಮತ್ತು ವಾರಾಂತ್ಯದ ಇತರ ಚಟುವಟಿಕೆಗಳ ವೆಚ್ಚದಲ್ಲಿ ಎರಡು ಮೂರಾಂಶದಷ್ಟು ಕಡಿತ ಮಾಡಿರುವುದು ವಾಣಿಜ್ಯೋದ್ಯಮ ಮಹಾಸಂಘವು (ಅಸೋಚಾಂ) ದೇಶದ ಪ್ರಮುಖ ಮಹಾನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.ಮಧ್ಯಮ ಆದಾಯದ ಸಮೂಹವು (ಎಂಐಜಿ) ಮನರಂಜನೆ, ಹೋಟೆಲ್ ಊಟ ಮತ್ತಿತರ ವೆಚ್ಚಗಳಲ್ಲಿ ಕಳೆದ 12 ತಿಂಗಳಲ್ಲಿ ಶೇ 65ರಷ್ಟು ಕಡಿತ ಮಾಡಿದೆ. ಇದಕ್ಕೆ ಗರಿಷ್ಠ ಹಣದುಬ್ಬರ ದರ ಮತ್ತು ಇಂಧನ ವೆಚ್ಚ ಹೆಚ್ಚಳವೇ ಮುಖ್ಯ ಕಾರಣ.ಮಧ್ಯಮ ವರ್ಗದ ಕುಟುಂಬವೊಂದು ಸರಕು ಖರೀದಿ, ಮನರಂಜನೆ ಮತ್ತು ಹೋಟೆಲ್ ಊಟಕ್ಕೆ  ತಿಂಗಳಿಗೆ ಸರಾಸರಿ ್ಙ 4000 ದಿಂದ ್ಙ 6000ವರೆಗೆ ವೆಚ್ಚ ಮಾಡುತ್ತದೆ. ಆದರೆ, ಕಳೆದ ಫೆಬ್ರುವರಿ ತಿಂಗಳಿನಿಂದ ಸಮಗ್ರ ಹಣದುಬ್ಬರವು ಶೇ  8ಕ್ಕಿಂತ ಹೆಚ್ಚಿಗೆ ಇರುವ ಕಾರಣಕ್ಕೆ ಈ ವೆಚ್ಚದಲ್ಲಿ ಗಮನಾರ್ಹ ಕಡಿತ ಕಂಡು ಬಂದಿದೆ.

ಆಹಾರ ಹಣದುಬ್ಬರವೂ ಕಳೆದ ಕೆಲ ತಿಂಗಳುಗಳಿಂದ ಗರಿಷ್ಠ ಪ್ರಮಾಣದಲ್ಲಿಯೇ ಇದ್ದು, ಇಳಿಯುವ ಯಾವುದೇ ಸೂಚನೆಗಳಿಲ್ಲ. ಹೀಗಾಗಿ ಮಧ್ಯಮ ವರ್ಗದ ಬವಣೆಯು ತಕ್ಷಣಕ್ಕಂತೂ ದೂರವಾಗುವ ಸಾಧ್ಯತೆಗಳು ಇಲ್ಲ. ಈ ಸಮೀಕ್ಷೆಯನ್ನು ಜನವರಿಯಿಂದ ಮಾರ್ಚ್ ತಿಂಗಳವರೆಗೆ ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈಗಳಲ್ಲಿ ನಡೆಸಲಾಗಿದೆ. ಪ್ರತಿಯೊಂದು ನಗರದಲ್ಲಿ 500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.  ವೆಚ್ಚಕ್ಕೆ ಕಡಿವಾಣ ವಿಧಿಸುವಲ್ಲಿ ದೆಹಲಿಯ ನಾಗರಿಕರು ಮುಂಚೂಣಿಯಲ್ಲಿದ್ದು, ನಂತರದ ಸ್ಥಾನದಲ್ಲಿ ಅಹ್ಮದಾಬಾದ್, ಚಂಡೀಗಡ, ಮುಂಬೈ ಮತ್ತು ಚೆನ್ನೈ ನಗರಗಳಿವೆ.

ಮಧ್ಯಮ ವರ್ಗದ ಕುಟುಂಬಗಳ ಪೈಕಿ ಶೇ 50ರಷ್ಟು ಕುಟುಂಬಗಳು ಸರಕುಗಳ ಖರೀದಿಯನ್ನೇ ಮುಂದೂಡಿದ್ದರೆ, ಅನೇಕರು ಅಗತ್ಯ ವಸ್ತುಗಳ ಖರೀದಿಗಷ್ಟೇ ವೆಚ್ಚ ಸೀಮಿತಗೊಳಿಸಿದ್ದಾರೆ.ಶ್ರೀಮಂತರಿಗೆ ತಟ್ಟದ ಬಿಸಿ: ಹಣದುಬ್ಬರ ಪ್ರಭಾವ, ಅಗತ್ಯ ವಸ್ತುಗಳ ಬೆಲೆ ಏರಿಕೆಯು ಶ್ರೀಮಂತರು ಮಾಡುವ ವೆಚ್ಚದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರಿಲ್ಲ.

ಗರಿಷ್ಠ ಆದಾಯ ಸಮೂಹದ ಕುಟುಂಬಗಳ ಆದಾಯ ಮತ್ತು  ವರಮಾನದಲ್ಲಿ ಹಣದುಬ್ಬರವು ಯಾವುದೇ ಅಸಮತೋಲನ ಮಾಡದಿರುವುದರಿಂದ ಅವರು ಮಾಡುವ ವೆಚ್ಚದಲ್ಲಿ ಇಳಿಕೆಯಾಗಿಲ್ಲ.ಜೀವನಾವಶ್ಯಕ ಸರಕುಗಳ ಹೆಚ್ಚುತ್ತಿರುವ ಬೆಲೆಗಳು ನಗರ ಪ್ರದೇಶಗಳಲ್ಲಿನ ಸಿರಿವಂತರ ಮೇಲೆ ಪ್ರತಿಕೂಲ ಪ್ರಭಾವ ಬೀರದಿರುವುದು ಸಮೀಕ್ಷೆಯಲ್ಲಿ ದೃಢಪಟ್ಟಿದೆ.ಶ್ರೀಮಂತ ಕುಟುಂಬಗಳು ಖರೀದಿ, ಮನರಂಜನೆ, ವಿಹಾರ, ಔತಣಕೂಟ ಮತ್ತಿತರ ಉದ್ದೇಶಕ್ಕೆ ತಿಂಗಳಿಗೆ ಸರಾಸರಿ ರೂ.10 ಸಾವಿರದಿಂದ ರೂ.20 ಸಾವಿರದವರೆಗೆ ವೆಚ್ಚ ಮಾಡುತ್ತವೆ. ಹಣದುಬ್ಬರವು ಶೇ  7ರಷ್ಟು ಇರುವಾಗಲೂ ಈ ವೆಚ್ಚದ ಪ್ರಮಾಣವು ಇಷ್ಟೇ ಇತ್ತು.ಗರಿಷ್ಠ ಆದಾಯದ ಸಮೂಹದಲ್ಲಿ (ಎಚ್‌ಐಜಿ) ಯುವಕರು ಮತ್ತು ದುಡಿಯುವ ದಂಪತಿ, ಬಟ್ಟೆ, ಷೂ, ಚಲನಚಿತ್ರ ವೀಕ್ಷಣೆ, ಚಲನಚಿತ್ರ ಮತ್ತು ಹಾಡುಗಳ ಸಿ.ಡಿ. ಮತ್ತು ಹೋಟೆಲ್‌ಗಳಲ್ಲಿ ಊಟ ಮಾಡಲು ತಮ್ಮ ಆದಾಯದ ಬಹುತೇಕ ಮೊತ್ತವನ್ನು ವೆಚ್ಚ ಮಾಡುತ್ತಾರೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.