ಹಣದ ಎದುರು ಅಂಪೈರ್ ಕ್ಲೀನ್‌ಬೌಲ್ಡ್

7

ಹಣದ ಎದುರು ಅಂಪೈರ್ ಕ್ಲೀನ್‌ಬೌಲ್ಡ್

Published:
Updated:

ಬೌಲರ್ ಎಸೆದ ಚೆಂಡು ಬ್ಯಾಟ್ಸ್‌ಮನ್‌ನ ಪ್ಯಾಡ್‌ಗೆ ಅಪ್ಪಳಿಸುತ್ತದೆ. ಆ ಬೌಲರ್, ವಿಕೆಟ್ ಕೀಪರ್ ಹಾಗೂ ಕ್ಷೇತ್ರರಕ್ಷಕರು ಅಂಪೈರ್‌ನತ್ತ ತಿರುಗಿ ಒಕ್ಕೊರಲಿನಿಂದ ಔಟ್‌ಗಾಗಿ ಮನವಿ ಸಲ್ಲಿಸುವರು. ಅಂಪೈರ್ `ಔಟ್~ ಅಥವಾ `ನಾಟೌಟ್~ ಎಂಬ ತೀರ್ಪು ನೀಡುವರು.ಅಂಪೈರ್ ನೀಡಿದ ತೀರ್ಪು ಸರಿಯೋ, ತಪ್ಪೋ ಎಂಬುದರ ಬಗ್ಗೆ ಕ್ರಿಕೆಟ್ ಪ್ರಿಯರು ಚರ್ಚೆ ನಡೆಸುವುದು ವಾಡಿಕೆ. ಇನ್ನು ಮುಂದೆ ಈ ರೀತಿಯ ಚರ್ಚೆಯಲ್ಲಿ ಹೊಸ ವಿಷಯವೂ ಸೇರಿಕೊಳ್ಳಲಿದೆ. `ಆ ಅಂಪೈರ್ ಹಣ ಪಡೆದಿದ್ದಾರೆಯೇ~ ಎಂಬುದಕ್ಕೆ ಕೂಡಾ ಚರ್ಚೆಯಲ್ಲಿ ಸ್ಥಾನ ದೊರೆಯಬಹುದು.***ಹೌದು. ಆಟಗಾರರಿಗೆ ಮಾತ್ರ ಸೀಮಿತಗೊಂಡಿದ್ದ ಮೋಸದಾಟದ `ಭೂತ~ ಇದೀಗ ಅಂಪೈರ್‌ಗಳನ್ನೂ ತನ್ನ ಹಿಡಿತಕ್ಕೆ ಪಡೆದುಕೊಂಡಿದೆ. ಇದು ಕ್ರಿಕೆಟ್‌ನ ದೊಡ್ಡ ದುರಂತವೇ ಸರಿ. ಕಳೆದ ವಾರ ನಡೆದ ಬೆಳವಣಿಗೆ ಕ್ರಿಕೆಟ್ ವಲಯದಲ್ಲಿ ತಲ್ಲಣ ಉಂಟುಮಾಡಿದೆ. ಆರು ಅಂಪೈರ್‌ಗಳು ಮೋಸದಾಟದಲ್ಲಿ ಭಾಗಿಯಾಗಲು ಮುಂದಾದದ್ದು ಇಂಡಿಯಾ ಟಿವಿ ಚಾನೆಲ್ ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿತ್ತು.ಟ್ವೆಂಟಿ-20 ವಿಶ್ವಕಪ್ ಮತ್ತು ಶ್ರೀಲಂಕಾ ಪ್ರೀಮಿಯರ್ ಲೀಗ್ ಸಂದರ್ಭ ಅಂಪೈರ್‌ಗಳ ಮೋಸದಾಟ ನಡೆದಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಈ ಅಂಪೈರ್‌ಗಳನ್ನು ಅಮಾನತುಮಾಡಿದೆ. ತನಿಖೆಯ ಬಳಿಕ ಇವರಿಗೆ ಶಿಕ್ಷೆಯಾಗಲೂಬಹುದು. ಆದರೆ ಕ್ರಿಕೆಟ್‌ನಿಂದ ಮೋಸದಾಟವನ್ನು ಸಂಪೂರ್ಣವಾಗಿ ಹೊಡೆದೋಡಿಸಲು ಸಾಧ್ಯವೇ?ಈಗಾಗಲೇ ಮೋಸದಾಟದಲ್ಲಿ ಭಾಗಿಯಾದ ಹಲವು ಆಟಗಾರರಿಗೆ ಶಿಕ್ಷೆಯಾಗಿದೆ. ಆದರೆ ಮತ್ತೆ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಅಂಪೈರ್‌ಗಳು ಕೂಡಾ `ಮ್ಯಾಚ್ ಫಿಕ್ಸಿಂಗ್~ ಆರೋಪಕ್ಕೆ ಗುರಿಯಾಗಿರುವುದು ಕ್ರಿಕೆಟ್‌ನ ಘನತೆಯನ್ನು ತಗ್ಗಿಸಿದೆ. ಈ ಕ್ರೀಡೆಯನ್ನೇ ಅನುಮಾನದಿಂದ ನೋಡುವಂತಾಗಿದೆ.ಚಾನೆಲ್‌ನ ವರದಿಗಾರರು ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಕಂಪೆನಿಯ ಪ್ರತಿನಿಧಿಗಳು ಎಂದು ಹೇಳಿ ಅಂಪೈರ್‌ಗಳನ್ನು ಸಂಪರ್ಕಿಸಿದ್ದರು. ಆರೋಪ ಎದುರಿಸುತ್ತಿರುವ ಪಾಕಿಸ್ತಾನದ ಇಬ್ಬರು ಅಂಪೈರ್‌ಗಳಾದ ನದೀಮ್ ಘೋರಿ ಮತ್ತು ಅನೀಸ್ ಸಿದ್ದೀಕಿ ಹಣ ದೊರೆತರೆ ತಪ್ಪು ತೀರ್ಪುಗಳನ್ನು ನೀಡಲು ಒಪ್ಪಿಕೊಂಡಿದ್ದರು!ಅದೇ ರೀತಿ ಉಭಯ ತಂಡಗಳ ಆಟಗಾರರು, ವಾತಾವರಣ, ಪಿಚ್ ಹಾಗೂ ಟಾಸ್ ಬಗ್ಗೆ ಮಾಹಿತಿ ನೀಡಲು ಈ ಅಂಪೈರ್‌ಗಳು ಮುಂದಾಗಿರುವುದು ಬಯಲಾಗಿವೆ. ಅಂಪೈರ್‌ಗಳು ನೀಡುವ ತಪ್ಪು ತೀರ್ಪುಗಳು ಪಂದ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಪಂದ್ಯವನ್ನು ನಿಯಂತ್ರಿಸಬೇಕಾದವರೇ ಹಣದ ಆಮಿಷಕ್ಕೆ ಬಲಿಯಾದದ್ದು ವಿಪರ್ಯಾಸ ಎನ್ನಬೇಕು.ಕ್ರಿಕೆಟ್ ಅಂಪೈರ್‌ಗಳ ಮೋಸದಾಟ ಬಹಿರಂಗಗೊಂಡಿರುವುದು ಇದೇ ಮೊದಲು. ಈ ಹಿಂದೆ ಅಂಪೈರ್‌ಗಳು ತಪ್ಪು ತೀರ್ಪುಗಳನ್ನು ನೀಡಿದ ಹಲವು ಉದಾಹರಣೆ ನಮ್ಮ ಮುಂದಿವೆ. ಮನುಷ್ಯನಿಗೆ ತಪ್ಪು ಸಂಭವಿಸುವುದು ಸಹಜ. ಅದರೆ ಕೆಲವು ಅಂಪೈರ್‌ಗಳು ಪದೇ ಪದೇ ತಪ್ಪು ತೀರ್ಪು ನೀಡುತ್ತಿದ್ದರು. ಅಂಪೈರ್‌ಗಳು ಈ ಹಿಂದೆ ನೀಡುತ್ತಿದ್ದ ತಪ್ಪು ತೀರ್ಪುಗಳಿಗೆ ಈಗ ವಿಶೇಷ ಅರ್ಥ ಬಂದಿವೆ. ಮೋಸದಾಟ ಈ ಹಿಂದಿನಿಂದಲೇ ನಡೆಯುತ್ತಿತ್ತೇ ಎಂಬ ಅನುಮಾನ ಎದ್ದಿದೆ.ಚೀನಾದ ರೆಫರಿಯೊಬ್ಬರು ಮೋಸದಾಟದಲ್ಲಿ ಪಾಲ್ಗೊಂಡ ಸುದ್ದಿ ಕಳೆದ ವರ್ಷ ಫುಟ್‌ಬಾಲ್ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಅಂತರರಾಷ್ಟ್ರೀಯ ಹಾಗೂ ದೇಸಿ ಪಂದ್ಯಗಳನ್ನು `ಫಿಕ್ಸ್~ ಮಾಡಲು ಹುವಾಂಗ್ ಜುನ್‌ಜೀ ಎಂಬ ರೆಫರಿ 1.30 ಕೋಟಿ ರೂ. ಹಣ ಪಡೆದಿದ್ದರು. ಇತರ ಕ್ರೀಡೆಗಳಲ್ಲೂ ಇಂತಹ ಉದಾಹರಣೆಗಳನ್ನು ಕಾಣಲು ಸಾಧ್ಯ. ಆದರೆ ಕ್ರಿಕೆಟ್‌ಗೆ ಇದು ಹೊಸತು.ಅಂಪೈರ್‌ಗಳ ಮೇಲಿನ ಆರೋಪ ನನಗೆ ಅಚ್ಚರಿ ಉಂಟುಮಾಡಿಲ್ಲ ಎಂಬುದು ಐಸಿಸಿ ಎಲೈಟ್ ಸಮಿತಿಯ ಮಾಜಿ ಅಂಪೈರ್ ಆಸ್ಟ್ರೇಲಿಯಾದ ಡರೆಲ್ ಹೇರ್ ಹೇಳಿಕೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭದಲ್ಲೇ ಈ ಬಗ್ಗೆ ಊಹಾಪೋಹಗಳು ಎದ್ದಿದ್ದವು ಎಂದು ಅವರು ನುಡಿದಿದ್ದಾರೆ.ಟ್ವೆಂಟಿ-20 ಕ್ರಿಕೆಟ್‌ನ ಆಗಮನದ ಬಳಿಕ ಪಂದ್ಯಗಳ ಸಂಖ್ಯೆ ಹೆಚ್ಚಿವೆ. ಐಪಿಎಲ್ ಮಾದರಿಯಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲೂ ಪ್ರೀಮಿಯರ್ ಲೀಗ್‌ಗಳು ಆರಂಭವಾದವು. ಇವುಗಳು ಮೋಸದಾಟದಲ್ಲಿ ಭಾಗಿಯಾಗಲು ಅಂಪೈರ್‌ಗಳನ್ನು ಪ್ರೇರೇಪಿಸಿವೆ ಎಂಬುದು ಹೇರ್ ಆರೋಪ.ಇದನ್ನು ಪೂರ್ಣವಾಗಿ ತಳ್ಳಿಹಾಕುವಂತಿಲ್ಲ. ಮಾರುವೇಷದ ಕಾರ್ಯಾಚರಣೆ ನಡೆಸಿದ ಚಾನೆಲ್ ಕೇವಲ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನದ ಅಂಪೈರ್‌ಗಳನ್ನು ಮಾತ್ರ ಸಂಪರ್ಕಿಸಿದ್ದು ಏಕೆ ಎಂಬುದು ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಭಾರತದ ಅಂಪೈರ್‌ಗಳು ಅವರ ಬಲೆಗೆ ಬೀಳಲಿಲ್ಲವೇ, ಅಥವಾ ಅಂತಹ ಧೈರ್ಯ ತೋರಲಿಲ್ಲವೇ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ಮೋಸದಾಟದ ಆರೋಪ ಎದುರಿಸುತ್ತಿರುವ ಆರು ಅಂಪೈರ್‌ಗಳಿಂದಾಗಿ ಈ ವೃತ್ತಿಯಲ್ಲಿರುವ ಎಲ್ಲರಿಗೂ ಕಳಂಕ ಉಂಟಾಗಿದೆ. ಆದರೆ ಈ ಒಂದು ಕಾರಣದಿಂದ ಎಲ್ಲ ಅಂಪೈರ್‌ಗಳನ್ನು ಅನುಮಾನದಿಂದ ನೋಡಬೇಕಿಲ್ಲ. ನಿಖರ ತೀರ್ಪುಗಳ ಮೂಲಕ ಕ್ರಿಕೆಟ್ ಕ್ರೀಡೆಯ ಗೌರವ ಹೆಚ್ಚಿಸಿದ ಸಾಕಷ್ಟು ಅಂಪೈರ್‌ಗಳು ನಮ್ಮ ಮುಂದಿದ್ದಾರೆ.ಡೇವಿಡ್ ಶೆಫರ್ಡ್, ಡಿಕೀ ಬರ್ಡ್, ಸೈಮನ್ ಟಫೆಲ್, ರೂಡಿ ಕರ್ಜನ್, ವೆಂಕಟ್‌ರಾಘವನ್ ಮತ್ತು ಅಲೀಮ್ ದಾರ್ ಅವರಂತಹ ಅಂಪೈರ್‌ಗಳು ಆಟಗಾರರ ಮತ್ತು ಅಭಿಮಾನಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ.ಹೊಸ ಹೊಸ ತಂತ್ರಜ್ಞಾನಗಳ ಆಗಮನದಿಂದಾಗಿ ಇಂದಿನ ದಿನಗಳಲ್ಲಿ ಅಂಪೈರ್‌ಗಳ `ಮಹತ್ವ~ ಕಡಿಮೆಯಾಗುತ್ತಿದೆ. ಮೋಸದಾಟ ಪ್ರಕರಣದಿಂದಾಗಿ ಇದು ಇನ್ನಷ್ಟು ಕಡಿಮೆಯಾದರೂ ಅಚ್ಚರಿಯಿಲ್ಲ. ಏನೇ ಆಗಲಿ, ಮುಂದಿನ ದಿನಗಳಲ್ಲಿ ಕ್ರಿಕೆಟ್ ಮೈದಾನದಲ್ಲಿ ಅಂಪೈರ್‌ಗಳು ನೀಡುವ ತಪ್ಪು ತೀರ್ಪುಗಳು ಹಲವು ಅನುಮಾನಗಳಿಗೆ ಕಾರಣವಾಗುವುದು ಖಚಿತ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry