ಮಂಗಳವಾರ, ಮೇ 18, 2021
23 °C

ಹಣದ ಚಿಂತೆ ಬಿಡಿ, ಆಸ್ಪತ್ರೆಗೆ ದಾಖಲಿಸಿ: ಡಿ.ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಡೆಂಗೆ ರೋಗ ನಿಯಂತ್ರಣಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಔಷಧಿ ಕೊರತೆ ಇಲ್ಲ. ಜಿಲ್ಲಾ ಆಸ್ಪತ್ರೆ ವೈದ್ಯರು ಸಾರ್ವಜನಿಕರೊಂದಿಗೆ ಸ್ಪಂದಿಸುತ್ತಿದ್ದಾರೆ' ಎಂದು ಜಿಲ್ಲಾಧಿಕಾರಿ ರಾಮೇಗೌಡ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆಗಳ ಮಾಲೀಕರೊಂದಿಗೆ ಭಾನುವಾರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಜ್ವರ ಬಂದ ಕೂಡಲೇ ಹಣದ ಬಗ್ಗೆ ಯೋಚನೆ ಮಾಡಬೇಡಿ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಬೇಕು.ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಚೆನ್ನಾಗಿ ನೀಡುತ್ತಿರುವುದರಿಂದಲೇ ನೆರೆಯ ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಿಂದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ' ಎಂದು ಹೇಳಿದರು.`ಡೆಂಗೆಯಿಂದ ಸತ್ತಿಲ್ಲ': `ಡಿ. ಸಾಲುಂಡಿಯಲ್ಲಿ ಬೀರೇಗೌಡ ಎಂಬ ಬಾಲಕ ಶನಿವಾರ ಮೃತಪಟ್ಟಿದ್ದು ಡೆಂಗೆ ರೋಗದಿಂದ ಅಲ್ಲ. ಬಾಲಕನಿಗೆ ಮೂರ್ಛೆ ರೋಗವಿತ್ತು. ಹಾಗಾಗಿ ಆತ ಮೃತಪಟ್ಟಿದ್ದಾನೆ. ಆದರೆ ಜನರು ಡೆಂಗೆಯಿಂದಲೇ ಸಾವಾಗಿದೆ ಎಂದು ಭಾವಿಸಿದ್ದಾರೆ. ಬೇರೆ ರೋಗಕ್ಕೆ ತುತ್ತಾಗಿ ಮೃತಪಟ್ಟಲ್ಲಿ ಡೆಂಗೆಯಿಂದಲೇ ಮೃತಪಡುತ್ತಿದ್ದಾರೆ ಎಂದು ಜನ ನಂಬಬಾರದು' ಎಂದು ತಿಳಿಸಿದರು.`ಡೆಂಗೆ ಹುಂಡಿ': `ಡೆಂಗೆಯಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದರಿಂದ ಸಾಲುಂಡಿಯನ್ನು `ಡೆಂಗೆಹುಂಡಿ'ಯೆಂದು ಕರೆಯಲಾಗುತ್ತಿದೆ. ರೋಗವನ್ನು ನಿಯಂತ್ರಣಕ್ಕೆ ತರಲು ಆರೋಗ್ಯ ಅಧಿಕಾರಿಗಳು ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ. ಶಾಲೆಯಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿದ್ದ ಆಸ್ಪತ್ರೆಯನ್ನು ಮುಚ್ಚಲಾಗಿದೆ ಎಂದು ಮಾಧ್ಯಮದಲ್ಲಿ ಬಂದಿದೆ. ಆದರೆ ಶಾಲೆ ಆರಂಭವಾದುದರಿಂದ ಆಸ್ಪತ್ರೆಯನ್ನು ಅಂಗನವಾಡಿಗೆ ಸ್ಥಳಾಂತರ ಮಾಡಲಾಗಿದೆ ಹೊರತು ತಾತ್ಕಾಲಿಕ ಆಸ್ಪತ್ರೆಯನ್ನು ಮುಚ್ಚಿಲ್ಲ' ಎಂದು ಹೇಳಿದರು.`ಅರಿವು, ಸಹಿ ಸಂಗ್ರಹ': `ಸಾಲುಂಡಿಯ ಪ್ರತಿಯೊಂದು ಮನೆಗೆ ಹೋಗಿ ಡೆಂಗೆ ರೋಗ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಕರಪತ್ರಗಳನ್ನು ಹಂಚಿ ಅರಿವು ಮೂಡಿಸಲಾಗುತ್ತಿದೆ. ಗ್ರಾಮಸ್ಥರಿಂದ ಸಹಿ ಸಂಗ್ರಹ ಮಾಡಲಾಗಿದೆ. ಜ್ವರ ಬಂದ ಕೂಡಲೇ ಆಸ್ಪತ್ರೆಗೆ ಹೋಗಲು ತಡ ಆಗಬಹುದು ಎಂಬ ನಿಟ್ಟಿನಲ್ಲಿ ಗ್ರಾಮದಲ್ಲೇ ಚಿಕಿತ್ಸೆ ಲಭಿಸುವಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ' ಎಂದು ತಿಳಿಸಿದರು.`ನೀರಿನ ಕೊರತೆ ಇಲ್ಲ: `ಸಾಲುಂಡಿ ಗ್ರಾಮದಲ್ಲಿ ನೀರಿನ ಕೊರತೆ ಇಲ್ಲ. ಆದರೆ ಗ್ರಾಮದಲ್ಲಿ ನೀರಿನ ಕೊರತೆ ಇದೆ ಎಂದು ಮಾಧ್ಯಮದಲ್ಲಿ ಬಂದಿದೆ. ಉದ್ಬೂರಿನಿಂದ ನೇರವಾಗಿ ನೀರನ್ನು ಹಾಗೂ ಓವರ್ ಹೆಡ್ ಟ್ಯಾಂಕ್‌ನಿಂದ ಸಹ ನೀರನ್ನು ಸರಬರಾಜು ಮಾಡಲಾಗುತ್ತಿದೆ' ಎಂದು ಹೇಳಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಂ. ಮಾಲೇಗೌಡ ಮಾತನಾಡಿ, `ಡೆಂಗೆ ರೋಗ ನಿಯಂತ್ರಣಕ್ಕೆ ತರಲು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪ್ಲೇಟ್‌ಲೆಟ್‌ಗಳ ಸಂಗ್ರಹ ಜಿಲ್ಲೆಯಲ್ಲಿ ಇದೆ. ಯಾವುದೇ ತೊಂದರೆ ಇಲ್ಲ' ಎಂದರು.

`ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಕಲಿಯಲು ಬರುವುದರಿಂದ ಜಿಲ್ಲೆಯ 2,227 ಅಂಗನವಾಡಿ ಕೇಂದ್ರಗಳಿಗೆ ಸೊಳ್ಳೆ ಪರದೆಗಳನ್ನು ಹಂಚಲಾಗುತ್ತಿದೆ' ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾಧಿಕಾರಿ ನಾಗನಾಯಕ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.