ಹಣದ ಮೂಲ ಬಹಿರಂಗವಾಗಲಿ

7

ಹಣದ ಮೂಲ ಬಹಿರಂಗವಾಗಲಿ

Published:
Updated:

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಶ್ರಯಪಡೆದಿರುವ ಟಿಬೆಟಿಯನ್ನರ ಧರ್ಮಗುರು ಇಪ್ಪತ್ತೈದು ವರ್ಷದ 17ನೇ ಕರ್ಮಪಾ ಬಳಿ ದೊರೆತಿರುವ ಹಲವು ದೇಶಗಳ ಸುಮಾರು ಆರು ಕೋಟಿ ರೂಪಾಯಿಯ ಮೂಲವನ್ನು ಹುಡುಕುವ ಕಾರ್ಯ ಸಿಬಿಐ ಮತ್ತು ಆ ರಾಜ್ಯದ ಪೊಲೀಸರಿಗೆ ತಲೆನೋವಾಗಿದೆ. ಚೀನಾ, ತೈವಾನ್, ಜಪಾನ್, ದಕ್ಷಿಣ ಕೊರಿಯಾ, ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ, ಥಾಯ್ಲೆಂಡ್, ವಿಯೆಟ್ನಾಂ ಮತ್ತು ಜರ್ಮನಿಯ ಕರೆನ್ಸಿಗಳನ್ನು ಪೊಲೀಸರು ಧರ್ಮಶಾಲಾದಿಂದ ವಶಪಡಿಸಿಕೊಂಡಿದ್ದಾರೆ.ಈ ಹಣ ಎಲ್ಲಿಂದ ಬಂತು ಎನ್ನುವ ಪ್ರಶ್ನೆಗೆ ಕರ್ಮಪಾ ಅವರಿಂದ ಇನ್ನೂ ಸ್ಪಷ್ಟ ಉತ್ತರ ಸಿಗದಿರುವುದೇ ಗೊಂದಲಕ್ಕೆ ಕಾರಣವಾಗಿದೆ. ಕರ್ಮಪಾ ತಮ್ಮ ಹದಿನೇಳನೇ ವಯಸ್ಸಿನಲ್ಲೇ 2000ದ ಜನವರಿ 5ರಂದು ಚೀನಾದಿಂದ ಓಡಿಬಂದು ಧರ್ಮಶಾಲಾದಲ್ಲಿನ ಬೌದ್ಧರ ಧಾರ್ಮಿಕ ಕೇಂದ್ರದಲ್ಲಿ ಆಶ್ರಯಪಡೆದಿದ್ದಾರೆ. ಕರ್ಮಪಾ, ಟಿಬೆಟ್‌ನ ಬೌದ್ಧರಲ್ಲಿನ ಕಾಗ್ಯು ಪಂಥದ ಧರ್ಮಗುರು ಎಂದೇ ಖ್ಯಾತರು. ಅವರ ಬಳಿ ದೊರೆತಿರುವ ಹಣ, ವಿದೇಶಿ ಭಕ್ತರು ನೀಡಿರುವ ಕಾಣಿಕೆ ಎಂಬುದು ಅವರ ಆಶ್ರಮದ ಸಮಜಾಯಿಷಿ. ಆದರೆ ಈ ಹಣದ ವಿವರ ತನಿಖಾ ಸಂಸ್ಥೆಗಳಿಗೆ ದೊರೆಯದಿರುವುದು ಕರ್ಮಪಾ ಅವರ ಕಾರ್ಯ ಚಟುವಟಿಕೆಯನ್ನು ಸಂಶಯದಿಂದ ನೋಡುವಂತೆ ಮಾಡಿದೆ. ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಫೆರಾ) ಅನ್ವಯ ವಿದೇಶಿ ಹಣದ ಮೂಲ ಮತ್ತು ಅದರ ಉದ್ದೇಶವನ್ನು ಸರ್ಕಾರಕ್ಕೆ ತಿಳಿಸಬೇಕಾದುದು ಕಡ್ಡಾಯ.ಈ ಕಾಯ್ದೆಯ ಬಗೆಗೆ ಕರ್ಮಪಾ ಅವರಿಗೆ ಅರಿವಿಲ್ಲದಿರಬಹುದು ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ವಿದೇಶಿ ಹಣ ಪಡೆಯುವವರಿಗೆ ‘ಫೆರಾ’ ವಿವರ ತಿಳಿದಿಲ್ಲ ಎನ್ನುವುದನ್ನು ನಂಬಲಾಗದು. ಈ ದೇಶದ ನೆಲದ ಕಾನೂನಿಗೆ ಎಲ್ಲರೂ ಬದ್ಧರಾಗಬೇಕು. ವಿದೇಶಿ ಹಣದ ಬಗೆಗಿನ ಎಲ್ಲ ವ್ಯವಹಾರವೂ ಸ್ಫಟಿಕದಷ್ಟೇ ಸ್ಪಷ್ಟವಾಗಿದ್ದರೆ ಯಾರಿಗೂ ಯಾವ ಸಮಸ್ಯೆಯೂ ಎದುರಾಗದು. ಆ ದಿಶೆಯಲ್ಲಿ ಕರ್ಮಪಾ, ತಾವು ಹೊಂದಿರುವ ವಿದೇಶಿ ಹಣದ ಮೂಲ ಮತ್ತು ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸುವುದು ಅವರ ಧಾರ್ಮಿಕ ಚಟುವಟಿಕೆಯ ದೃಷ್ಟಿಯಿಂದ ಒಳ್ಳೆಯದು.ವಿದೇಶದಿಂದ ಹಣ ಪಡೆಯುವುದು ಹೊಸ ಬೆಳವಣಿಗೆಯಲ್ಲ. ಹಲವಾರು ವರ್ಷಗಳಿಂದ ಚರ್ಚುಗಳು, ಕ್ರೈಸ್ತ ಮಿಷನರಿಗಳು, ಮಸೀದಿಗಳು, ದೇವಾಲಯಗಳು ಸೇರಿದಂತೆ ದೇಶದ ಸುಮಾರು 40 ಸಾವಿರ ಸ್ವಯಂ ಸೇವಾ ಸಂಸ್ಥೆಗಳು ವಿದೇಶಗಳಿಂದ ಹಣ ಪಡೆಯುತ್ತಿವೆ. ಶಿಕ್ಷಣ, ಸಮಾಜ ಸೇವೆ, ಬಡವರಿಗೆ ವಸತಿ ನಿರ್ಮಾಣ ಮುಂತಾದ ಹೆಸರಿನಲ್ಲಿ ಪಡೆಯುವ ವಿದೇಶಿ ಹಣ ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಆಗುತ್ತಿದೆ ಎನ್ನುವ ಆರೋಪ ಹಲವು ಸಂಸ್ಥೆಗಳ ಮೇಲಿದೆ. ಹಣದ ಈ ದುರುಪಯೋಗ ತಪ್ಪಬೇಕು. ಈ ದಿಶೆಯಲ್ಲಿ ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಹಲವು ರೂಪದಲ್ಲಿ ಹರಿದು ಬರುವ ವಿದೇಶಿ ಹಣದ ಬಗೆಗೆ ಕಣ್ಗಾವಲಿಡುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry