ಸೋಮವಾರ, ಜೂನ್ 14, 2021
27 °C

ಹಣದ ಸುಗಂಧ

ಆದರ್ಶ ಪೈ Updated:

ಅಕ್ಷರ ಗಾತ್ರ : | |

ಹೂವಿಗೆ ಮನಸೋಲದವರು ಯಾರಿದ್ದಾರೆ? ದೇವರ ಪೂಜೆಯಿಂದ ಹಿಡಿದು ಮದುವೆಯ ಮಂಟಪ ಅಲಂಕಾರದವರೆಗೆ, ಮುಡಿಯುವುದರಿಂದ ಹಿಡಿದು ಅತಿಥಿಗಳನ್ನು ಗೌರವಿಸುವುದರವರೆಗೆ ಹೂವಿನ ಬಳಕೆ ಅಗಣಿತ. ಇಂಥ ಅಸಂಖ್ಯಾತ ವಿಧದ ಹೂಗಳಲ್ಲಿ ಗುಲ್ಚಡಿ ಕೂಡ ಒಂದು. ಇದನ್ನು ಸುಗಂಧರಾಜ ಎಂದೂ ಕರೆಯುತ್ತಾರೆ.ಗುಲ್ಚಡಿಯನ್ನು ಹೆಚ್ಚಾಗಿ ಅಲಂಕಾರಕ್ಕೇ ಬಳಸುತ್ತಾರೆ. ಇದು ಹೆಚ್ಚು ದಿನ ಅರಳಿಕೊಂಡೇ ಇರುವ ಹಾಗೂ ನೋಡಲು ತುಂಬಾ ಸುಂದರವಾದ ಹೂವು. ಆದರೆ ಬೆಲೆ ತುಂಬಾ ದುಬಾರಿ. ಹೀಗಾಗಿ ಬೆಳೆಯುವವರಿಗೂ ಸಾಕಷ್ಟು ಲಾಭ.ವರ್ಷದ 12 ತಿಂಗಳೂ ಇದನ್ನು ಬೆಳೆಯಬಹುದು. ಈ ಬೆಳೆಯನ್ನೇ ವೃತ್ತಿಯಾಗಿ 5 ವರ್ಷದಿಂದ ಬೆಳೆಯುತ್ತಿದ್ದಾರೆ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಖೇಡ್ ತಾಲ್ಲೂಕು ದೇವುಗಾಂವ್ ರೈತ ಅವಿನಾಶ ಮೋರೆ. ಅವರ ಅರ್ಧ ಎಕರೆಯಲ್ಲಿ ಗುಲ್ಚಡಿ ಹೂವಿದೆ. ಇದನ್ನು ಬೆಳೆಯಲು ಹೆಚ್ಚು ಶ್ರಮ ಪಡಬೇಕಿಲ್ಲ. ಲಾಭ ಹೆಚ್ಚು.ಅವರು ಹೇಳುವ ಪ್ರಕಾರ, ಬೆಳೆಯುವ ಮುನ್ನ ಕೊಟ್ಟಿಗೆ ಗೊಬ್ಬರ ಹಾಗೂ ಯೂರಿಯಾವನ್ನು ಸೇರಿಸಿ ಜಮೀನು ಹದ ಮಾಡಬೇಕು.ಕೃಷಿ ಇಲಾಖೆಯಲ್ಲಿ 1000 ರೂಪಾಯಿಗೆ ಅರ್ಧ ಎಕರೆಗೆ ಆಗುವಷ್ಟು ಬೇರಿನ ಗೊಂಚಲು ಸಿಗುತ್ತದೆ. ಅದನ್ನು ಅರ್ಧ ಅಡಿ ಉದ್ದ ಹಾಗೂ 1 ಅಡಿ ಅಗಲ ಅಂತರ ಕೊಟ್ಟು ನಾಟಿ ಮಾಡಬೇಕು.10 ರಿಂದ 15 ದಿನದಲ್ಲೇ ಮೊಳಕೆ ಬರಲು ಪ್ರಾರಂಭವಾಗುತ್ತದೆ. ಪ್ರಾರಂಭದಲ್ಲಿ 3 ದಿನಕ್ಕೊಮ್ಮೆ ನೀರು ಹಾಕಬೇಕು. ತದನಂತರ ವಾರಕ್ಕೊಮ್ಮೆ ಹಾಕಿದರೆ ಸಾಕು.ಸರಿಸುಮಾರು ಒಂದೂವರೆ ತಿಂಗಳ ನಂತರ ಹೂವು ಬಿಡಲು ಪ್ರಾರಂಭವಾಗುತ್ತದೆ. ಹಾಗೇ ಗಿಡದ ಬುಡದಲ್ಲಿ ಕಂದು (ಗಡ್ಡೆ) ಉತ್ಪತ್ತಿಯಾಗುತ್ತದೆ. ಮುಂದೆ ಬೆಳೆಯಲು ಇದನ್ನೇ ಬಳಕೆ ಮಾಡಬಹುದು.ಗುಲ್ಚಡಿ ಹೂವು 3 ವರ್ಷದ ಬೆಳೆ. ಮೊದಲ ವರ್ಷ ಚೆನ್ನಾಗಿ ಬೆಳೆಯುತ್ತದೆ. ಉಳಿದ ಎರಡು ವರ್ಷ ಸರಾಸರಿಯಾಗಿ ಬೆಳೆಯುತ್ತದೆ. ಈ ಹೂವನ್ನು ಮೊಗ್ಗು ಅರಳುವ ಮುನ್ನವೇ ಕೀಳಬೇಕು. ಏಕೆಂದರೆ ಅರಳಿದ ಮೇಲೆ ಇದಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲ. ಮೊಗ್ಗಿಗೆ ಬೇಡಿಕೆಗೆ ತಕ್ಕಂತೆ ಕಿಲೊಗೆ 100 ರಿಂದ 250 ರೂಪಾಯಿ ವರೆಗೂ ಧಾರಣೆ ಸಿಗುತ್ತದೆ. ಅರ್ಧ ಎಕರೆಯಲ್ಲಿ ನಿತ್ಯ 4 ರಿಂದ 5 ಕಿಲೋದಷ್ಟು ಹೂವು ಸಿಗುತ್ತದೆ.ಬೇಸಿಗೆ ಮತ್ತು ಮಳೆಗಾಲದಲ್ಲಿ ಇದು ಚೆನ್ನಾಗಿ ಹೂ ಬಿಡುತ್ತದೆ. ಆದರೆ ಚಳಿಗಾಲದಲ್ಲಿ ಸ್ವಲ್ಪ ಕಡಿಮೆ. ಪ್ರಾಣಿಗಳ ಕಾಟವಂತೂ ಇಲ್ಲವೇ ಇಲ್ಲ.  ಇನ್ನು ಈ ಹೂವಿಗೆ ಬೇರು ಕೊಳೆಯುವ ರೋಗ ಬರುವುದು ಹೆಚ್ಚು.ಅತಿ ನೀರು ಹಾಗೂ ಮೆದು ಮಣ್ಣಿನ ಜಾಗ ಇದ್ದರೆ ಈ ರೋಗ ಬಾಧೆಗೆ ಹೇಳಿ ಮಾಡಿಸಿದ್ದು. ಅದಕ್ಕಾಗಿ ಇದನ್ನು ಸ್ವಲ್ಪ ಗಟ್ಟಿ ಭೂಮಿಯಲ್ಲಿ ಬೆಳೆಯುವುದು ಒಳ್ಳೆಯದು ಎನ್ನುವುದು ಅವರ ಕಿವಿಮಾತು.ಆರಂಭದಲ್ಲಿ ಬೆಳೆಸಲು ಸುಮಾರು    4- 5 ಸಾವಿರ ರೂಪಾಯಿ ಖರ್ಚಾಗುತ್ತದೆ. ನಿರ್ವಹಣೆಗೆ ತಿಂಗಳಿಗೆ ಸುಮಾರು 1000 ಸಾವಿರ ರೂಪಾಯಿ ಬೇಕು.ಇಷ್ಟೆಲ್ಲ ಮಾಡಿದರೆ ಲಾಭಕ್ಕೆ ಮೋಸವಂತೂ ಇಲ್ಲ ಎನ್ನುತ್ತಾರೆ ಅವರು. ಅವರ ಸಂಪರ್ಕ ಸಂಖ್ಯೆ 097636 19933 (ಮಾಹಿತಿಗೆ ಹಿಂದಿ ಅಥವಾ ಮರಾಠಿಯಲ್ಲಿ ಮಾತನಾಡಬೇಕು)                            

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.