ಗುರುವಾರ , ಮೇ 28, 2020
27 °C

ಹಣವಿಲ್ಲದೆ ಹಳಿ ತಪ್ಪಿದ ಸ್ಟೇಷನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ಪ್ರಧಾನ ಕಚೇರಿ ಹುಬ್ಬಳ್ಳಿಯಲ್ಲಿ ಸ್ಥಾಪನೆಗೊಂಡು ಎಂಟು ವರ್ಷಗಳೇ ಸಂದಿವೆ. ಆದರೂ, ಈ ಭಾಗದ ರೈಲ್ವೆ ಯೋಜನೆಗಳು ನಿರೀಕ್ಷಿತ ಪ್ರಗತಿ ಕಂಡಿಲ್ಲ. ಈಗ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯು ಹಣದ ಕೊರತೆಯಿಂದಾಗಿ ಆರಂಭದಲ್ಲೇ ಹಿನ್ನಡೆ ಅನುಭವಿಸಿದೆ.ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಹುಬ್ಬಳ್ಳಿಯ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಯೋಜನೆ ಇದು. ಈ ಯೋಜನೆಯ ಅಂಗವಾಗಿ ‘ಹೊಸ ರೈಲು ನಿಲ್ದಾಣ ಕಟ್ಟಡ’ ನಿರ್ಮಿಸಲು 13.57 ಕೋಟಿ ರೂಪಾಯಿಯ ಕಾಮಗಾರಿಯನ್ನು ರೂಪಿಸಲಾಯಿತು. ಈ ಕಾಮಗಾರಿಯ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ 2009ರ ಡಿಸೆಂಬರ್‌ನಲ್ಲಿಯೇ ಕೆಲಸ ಕೈಗೆತ್ತಿಕೊಳ್ಳಲಾಯಿತು. ಈ ಕಾಮಗಾರಿ ಮುಕ್ತಾಯಗೊಳಿಸಲು ನಿಗದಿಪಡಿಸಲಾದ ಅವಧಿ ಒಂದು ವರ್ಷ. ಅಂದರೆ, ಕಳೆದ ಡಿಸೆಂಬರ್ ಹೊತ್ತಿಗೆ ಈ ಕಾಮಗಾರಿ ಪೂರ್ಣಗೊಳ್ಳಬೇಕು. ಆದರೆ, ನಿಗದಿತ ಅವಧಿ ಮುಗಿದರೂ ಆಗಿರುವ ಕೆಲಸ ಶೇ. 30ರಷ್ಟು ಮಾತ್ರ. ಅಲ್ಲದೆ, ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಕೆಲಸ ಸ್ಥಗಿತಗೊಂಡಿದೆ.ನೈರುತ್ಯ ರೈಲ್ವೆ ವಲಯ ಪ್ರಧಾನ ಕಚೇರಿಯಾದರೂ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ. ವಲಯ ಪ್ರಧಾನ ಕಚೇರಿಯಾಗುವುದಕ್ಕಿಂತ ಮೊದಲು ಇದ್ದ ನಾಲ್ಕು ಪ್ಲಾಟ್‌ಫಾರ್ಮ್‌ಗಳೇ ಉಳಿದುಕೊಂಡಿವೆ. ಪ್ಲಾಟ್‌ಫಾರ್ಮ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ರೈಲುಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಟ್‌ಫಾರ್ಮ್‌ಗಳ ಸಂಖ್ಯೆಯನ್ನು ಹೆಚ್ಚಿಸಿ, ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲು ಸಮಗ್ರ ಯೋಜನೆ ರೂಪಿಸಲಾಯಿತು.ಮೊದಲ ಹಂತದಲ್ಲಿ ಈಗಿರುವ ನಾಲ್ಕು ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಮತ್ತೆ ನಾಲ್ಕು ಪ್ಲಾಟ್‌ಫಾರ್ಮ್‌ಗಳನ್ನು ನಿರ್ಮಿಸಲು ಹಾಗೂ ಈ ಪ್ಲಾಟ್‌ಫಾರ್ಮ್‌ಗಳಿಗೆ ಓಡಾಡಲು ಸುರಂಗ ಮಾರ್ಗ (ಅಂಡರ್‌ಪಾಸ್) ಮತ್ತು ಮೇಲ್‌ಸೇತುವೆ ರೂಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ಇದರನುಸಾರವಾಗಿ ಮೇಲ್‌ಸೇತುವೆ ಹಾಗೂ ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಅಲ್ಲದೆ, ಉದ್ದೇಶಿತ ನಾಲ್ಕು ಹೊಸ ಪ್ಲಾಟ್‌ಫಾರ್ಮ್‌ಗಳ ಪೈಕಿ ಒಂದನ್ನು ಮಾತ್ರ ನಿರ್ಮಿಸಲಾಗಿದೆ.ಆದರೆ ಇನ್ನುಳಿದಿರುವ ಮೂರು ‘ಡೆಡ್‌ಎಂಡ್’ (ಅಂದರೆ ಒಂದು ಬದಿಯಲ್ಲಿ ಮಾತ್ರ ರೈಲು ಸಾಗಲು ವ್ಯವಸ್ಥೆ ಇರುವ ಪ್ಲಾಟ್‌ಫಾರ್ಮ್) ನಿರ್ಮಿಸಲಾಗಿಲ್ಲ. ಏಕೆಂದರೆ, ಮೊದಲ ಹಂತದ ಕಾಮಗಾರಿಗೆ ಪೂರಕವಾಗಿರುವ ‘ಹೊಸ ರೈಲು ನಿಲ್ದಾಣ ಕಟ್ಟಡ’ ಕಾಮಗಾರಿ ಪೂರ್ಣಗೊಂಡ ನಂತರವೇ ಈ ಪ್ಲಾಟ್‌ಫಾರ್ಮ್‌ಗಳು ಬಳಕೆಗೆ ಬರುತ್ತವೆ. ಅಲ್ಲದೆ, ಸುರಂಗ ಮಾರ್ಗ ಕೂಡ ಕಟ್ಟಡ ಕಾಮಗಾರಿ ಮುಗಿದ ನಂತರವೇ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.ಮುಖ್ಯ ಪ್ರವೇಶದ್ವಾರ, ಟಿಕೆಟ್ ಕೌಂಟರ್, ರಿಸರ್ವೇಶನ್ ಕೌಂಟರ್, ವೇಟಿಂಗ್ ರೂಮ್, ಸಿಬ್ಬಂದಿ ಕೊಠಡಿ, ವಿಶ್ರಾಂತಿ ಕೋಣೆ  ಮುಂತಾದವುಗಳನ್ನು ಒಳಗೊಂಡಿರುವ ಸದ್ಯದ ರೈಲ್ವೆ ನಿಲ್ದಾಣ ಕಟ್ಟಡವನ್ನು ಸ್ಥಳಾಂತರಿಸುವ ಉದ್ದೇಶದಿಂದ ‘ಹೊಸ ರೈಲು ನಿಲ್ದಾಣ ಕಟ್ಟಡ’ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 13.57 ಕೋಟಿ ರೂಪಾಯಿಯ ಈ ಕಾಮಗಾರಿಯ ಗುತ್ತಿಗೆಯನ್ನು ಮೈಸೂರು ಕನ್‌ಸ್ಟ್ರಕ್ಷನ್ ಕಂಪೆನಿ ವಹಿಸಿಕೊಂಡಿದೆ. ಮೂರು ಪ್ರತ್ಯೇಕ ಬ್ಲಾಕ್‌ಗಳಲ್ಲಿ ನಿರ್ಮಾಣಗೊಳ್ಳಬೇಕಾದ ಒಟ್ಟು 8,400 ಚದರ ಮೀಟರ್ ವಿಸ್ತೀರ್ಣದ ಕಟ್ಟಡ ಕಾಮಗಾರಿ ಇದು.

‘ಎ’ ಬ್ಲಾಕ್ ಭಾಗದ ಕಟ್ಟಡವು ನೆಲಮಾಳಿಗೆ (ಸೆಲ್ಲಾರ್), ನೆಲಮಹಡಿ, ಮೊದಲ ಅಂತಸ್ತು ಒಳಗೊಂಡಿದೆ. ಸೆಲ್ಲಾರ್‌ನಲ್ಲಿ ವಾಣಿಜ್ಯ ಮಳಿಗೆ ಸಂಕಿರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ. ವಿವಿಧ ಪ್ಲಾಟ್‌ಫಾರ್ಮ್‌ಗಳಿಗೆ ತೆರಳುವ ಸುರಂಗ ಮಾರ್ಗವು ಈ ನೆಲಮಾಳಿಗೆಯೊಂದಿಗೆ ಜೋಡಣೆಗೊಳ್ಳುತ್ತದೆ. ನೆಲಮಹಡಿಯಲ್ಲಿ ವಿಶ್ರಾಂತಿ ಕೊಠಡಿ, ರೈಲ್ವೆ ಸಿಬ್ಬಂದಿ ಕಚೇರಿ ಮತ್ತು ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಮೊದಲ ಮಹಡಿಯಲ್ಲಿ ಶೌಚಾಲಯ, ಮಳಿಗೆಗಳು ಬರಲಿವೆ. ಆದರೆ, ಒಟ್ಟಾರೆಯಾಗಿ ‘ಎ’ ಬ್ಲಾಕ್‌ನಲ್ಲಿ ಇದುವರೆಗೆ ಆಗಿರುವ ಕೆಲಸ ಶೇ. 20ರಷ್ಟು ಮಾತ್ರ.‘ಬಿ’ ಬ್ಲಾಕ್ ಭಾಗದ ಕಟ್ಟಡದಲ್ಲಿಯೇ ನಿಲ್ದಾಣದ ಪ್ರಮುಖ ಪ್ರವೇಶ ದ್ವಾರ ಬರಲಿದೆ. ಈ ಭಾಗದ ಕಟ್ಟಡವು ನೆಲ ಮಹಡಿ ಹಾಗೂ ಮೊದಲ ಮಹಡಿಯನ್ನು ಒಳಗೊಂಡಿದೆ. ನೆಲ ಮಹಡಿಯಲ್ಲಿ ಬುಕಿಂಗ್ ಕಚೇರಿ, ವೇಟಿಂಗ್ ರೂಮ್, ಸರಕು ದಾಸ್ತಾನು ಕೊಠಡಿ, ರೈಲ್ವೆ ಪೊಲೀಸ್ ದಳದ ಕೌಂಟರ್, ಎಸ್‌ಎಸ್ ವಾಣಿಜ್ಯ ಕಚೇರಿ, ನಗದು ಕೌಂಟರ್, ವಿಐಪಿ ಲಾಂಜ್ ಇರಲಿವೆ. ಇನ್ನು ಮೊದಲ ಮಹಡಿಯಲ್ಲಿ ಇನ್ಸ್‌ಪೆಕ್ಟರ್ ಕಚೇರಿ, ಟಿ.ಟಿ. ವಿಶ್ರಾಂತಿ ಕೊಠಡಿ, ಮಹಿಳೆಯರ ಡಾರ್ಮೆಟ್ರಿ, ವಿಶ್ರಾಂತಿ ಕೊಠಡಿ ನಿರ್ಮಿಸಲು ಉದ್ದೇಶಿಸಲಾಗಿದೆ.ಈ ಬ್ಲಾಕ್‌ನಲ್ಲಿ ನೆಲಮಡಿಯ ಕಾಂಕ್ರೀಟ್ ಸ್ಲ್ಯಾಬ್ ಕೆಲಸ ಮುಗಿದಿದೆ. ಆದರೆ, ಮೊದಲ ಮಹಡಿಗೆ ಕಾಂಕ್ರೀಟ್ ಸ್ಲ್ಯಾಬ್ ಹಾಕಲು ಸೆಂಟ್ರಿಂಗ್ ಸಿದ್ಧತೆ ಮಾಡಿಕೊಂಡ ನಂತರ ಕೆಲಸ ಸ್ಥಗಿತಗೊಂಡಿದೆ. ಸ್ಲ್ಯಾಬ್ ಹಾಕಲು ರೂಪಿಸಿದ ಸೆಂಟ್ರಿಂಗ್, ಕಳೆದ ಐದಾರು ತಿಂಗಳುಗಳಿಂದ ಹಾಗೆಯೇ ಉಳಿದುಕೊಂಡಿದೆ.‘ಸಿ’ ಬ್ಲಾಕ್ ಭಾಗದ ಕಟ್ಟಡದಲ್ಲಿ ನೆಲಮಹಡಿಯ ಬಹುತೇಕ ಭಾಗ ಫುಡ್ ಪ್ಲಾಜಾಗೆ ಮೀಸಲು. ವೇಟಿಂಗ್ ಹಾಲ್, ಎಲೆಕ್ಟ್ರಿಕಲ್ ಸ್ವಿಚ್ ರೂಮ್ ಇಲ್ಲಿ ನಿರ್ಮಾಣಗೊಳ್ಳಬೇಕಿದೆ. ಮೊದಲ ಮಹಡಿಯಲ್ಲಿ ಸೈಬರ್ ಕೆಫೆ, ಟೆಲಿಕಾಮ್ ಮತ್ತು ನೆಟ್‌ವರ್ಕ್ ಡಿಸ್ಟ್ರಿಬ್ಯುಶನ್ ಕೊಠಡಿ ಮತ್ತು ಲಾಂಜ್ ರೂಪುಗೊಳ್ಳಬೇಕಿದೆ. ಈ ಬ್ಲಾಕ್‌ನಲ್ಲಿ ಆಗಿರುವ ಕೆಲಸ ಶೇ. 30 ರಷ್ಟು ಮಾತ್ರ.ಇದುವರೆಗೆ ಸುಮಾರು 3.8 ಕೋಟಿ ರೂಪಾಯಿ ಮೊತ್ತದಷ್ಟು ಕೆಲಸವನ್ನು ಮೈಸೂರು ಕನ್‌ಸ್ಟ್ರಕ್ಷನ್ ಕಂಪೆನಿ ಮಾಡಿದೆ. ಈ ಪೈಕಿ 2.6 ಕೋಟಿ ರೂಪಾಯಿಯನ್ನು ಮಾತ್ರ ರೈಲ್ವೆ ಇಲಾಖೆ ಅವರಿಗೆ ಪಾವತಿ ಮಾಡಿದ್ದು, ಇನ್ನುಳಿದ 1.2 ಕೋಟಿ ರೂಪಾಯಿಯಷ್ಟು ಹಣವನ್ನು ಬಾಕಿ ಉಳಿಸಿಕೊಂಡಿದೆ. ಸಾಕಷ್ಟು ಹಣ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರರು ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಈ ಕಾಮಗಾರಿ ನಡೆದಿಲ್ಲ. ವಿಳಂಬವಾಗುತ್ತಿರುವುದರಿಂದ ಸಹಜವಾಗಿಯೇ ಕಾಮಗಾರಿ ವೆಚ್ಚ ಹೆಚ್ಚುತ್ತಿದ್ದು ಗುತ್ತಿಗೆದಾರರೂ ನಷ್ಟವನ್ನು ಅನುಭವಿಸುವಂತಾಗಿದೆ.ಈ ಕಾಮಗಾರಿ ಬಗೆಗೆ ವಿವರಗಳನ್ನು ಕೇಳಿದರೆ ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯೆಯನ್ನೇ ನೀಡುವುದಿಲ್ಲ. ಹುಬ್ಬಳ್ಳಿ ವಿಭಾಗೀಯ ರೈಲ್ವೆ ಪ್ರಬಂಧಕ ಕಚೇರಿಯ ನೇರ ಉಸ್ತುವಾರಿಯಡಿ ಈ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ಅಧಿಕಾರಿಗಳನ್ನು ವಿಚಾರಿಸಿದರೆ, ವಲಯ ಕಚೇರಿ ಅಧಿಕಾರಿಗಳನ್ನು ಕೇಳಿ ಎನ್ನುತ್ತಾರೆ. ವಲಯ ಕಚೇರಿ ಅಧಿಕಾರಿಗಳನ್ನು ವಿಚಾರಿಸಿದರೆ, ವಿಭಾಗೀಯ ಕಚೇರಿಯತ್ತ ಅವರು ಬೊಟ್ಟು ಮಾಡುತ್ತಾರೆ. ಈ ಕಾಮಗಾರಿಗೆ ಏಕೆ ನಿಂತಿದೆ, ಮತ್ತೆ ಯಾವಾಗ ಆರಂಭವಾಗುತ್ತದೆ ಎಂಬಂಥ ಪ್ರಶ್ನೆಗಳಿಗಂತೂ ಅವರು ಉತ್ತರ ನೀಡುವ ಪ್ರಯತ್ನವನ್ನೇ    ಮಾಡುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.