ಹಣ್ಣು ತಿನ್ನಲೋ ಮಣ್ಣು ತಿನ್ನಲೋ!
ಕೋಳಿ ಪ್ರತಾಪ
ಸರ್ಕಾರಿ ಆಸ್ಪತ್ರೆಯಲ್ಲಾಗಲಿ, ಬೇರೆಡೆಯಾಗಲಿ ರೋಗ ಗುಣ ಹೊಂದಿದ ಬಳಿಕ ವೈದ್ಯರಿಗೆ ಹಣ್ಣು, ಹೂವು ತಂದು ಕೊಡುವ ಪದ್ಧತಿ ಹಿಂದೆ ಇತ್ತು. (ಈಗ ಈ ಸಮಸ್ಯೆ ಅಷ್ಟೊಂದಿಲ್ಲ) ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದ ನನ್ನ ರೋಗಿಯೊಬ್ಬನನ್ನು ಆಸ್ಪತ್ರೆಗೆ ಸೇರಿಸಿದ್ದೆ. 8-10 ದಿನಗಳಲ್ಲಿ ಗುಣವಾಗಿ ಊರಿಗೆ ಹೋಗಲು ತಯಾರಾದ.
ಊರಿನಲ್ಲಿ ಅನುಸರಿಸಬೇಕಾದ ಪಥ್ಯದ ವಿಷಯ ಕೇಳಿದಾಗ, `ಮೊಟ್ಟೆ, ಹಾಲು, ಮಾಂಸ ಎಲ್ಲವನ್ನೂ ಧಾರಾಳವಾಗಿ ತಿನ್ನಬಹುದು~ ಎಂದು ಹೇಳಿದೆ. ಅವನಿಗೇನನ್ನಿಸಿತೋ ಏನೋ, `ಸಾರ್ ನಮ್ಮ ಮನೇಲಿ ಬೇಕಾದಷ್ಟು ಕೋಳಿ ಸಾಕ್ತೀವಿ.
ಮುಂದಿನ ಸಲ ತೋರಿಸಕ್ಕೆ ಬರುವಾಗ ನಿಮ್ಗೂ ಕೋಳಿ ತಂದ್ಕೊಡ್ತೀನಿ~ ಎಂದು ಹೇಳಿದ. `ಕೋಳಿಯನ್ನು ನಾನು ಮನೆಗೆ ತಗೊಂಡು ಹೋಗುವಂತಿಲ್ಲ. ಚಿಂತಿಸಬೇಡ ನೀನು ತಿಂದರೆ ಸಾಕು, ನನಗಂತೂ ತರಬೇಡ~ ಎಂದು ಹೇಳಿ ಕಳುಹಿಸಿದೆ. ಅವನು ತರಲಿಕ್ಕಿಲ್ಲ ಎಂದೇ ನಂಬಿದ್ದೆ.
ಆದರೆ ನನ್ನ ನಿರೀಕ್ಷೆ ಹುಸಿಯಾಯಿತು. ಕೆಲವು ದಿನಗಳ ಬಳಿಕ ಅವನು ಒಂದು ಒಳ್ಳೆಯ ಗಾತ್ರದ ಕೋಳಿಯನ್ನು ಹಿಡಿದುಕೊಂಡು ವಾರ್ಡ್ನಲ್ಲಿಯೇ ಹಾಜರಾಗಿಬಿಟ್ಟ. ನಾನು ಎಷ್ಟು ಹೇಳಿದರೂ ಒಪ್ಪದೆ, `ನನ್ನ ರೋಗಾನ ಎಲ್ಲೆಲ್ಲೋ ತೋರಿಸ್ದೆ, ನಿಮ್ ಚಿಕಿತ್ಸೆಯಿಂದ ಮಾತ್ರ ಗುಣವಾಯ್ತು.
ಇದನ್ನ ನೀವು ತಗೊಳ್ಲೇಬೇಕು~ ಎಂದು ಬಲವಂತ ಮಾಡತೊಡಗಿದ. ನಾನು ವಾರ್ಡಿನಲ್ಲಿ ಗಲಾಟೆ ಮಾಡಲು ಇಚ್ಛಿಸದೆ ಆ ಕೋಳಿಯನ್ನು ನಮ್ಮ ವಾರ್ಡ್ ನರ್ಸ್ ಕೈಗೆ ಕೊಡಿಸಿ ಧನ್ಯನಾದೆ!
ಹಣ್ಣಿನ ಮಹಿಮೆ
ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವಾಗ ಬೇರೊಂದು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಯೊಬ್ಬರು ಅವರ ತಾಯಿಯನ್ನು ನೋಡಲು ಬೆಂಗಳೂರಿಗೆ ಬನ್ನಿ ಎಂದು ಮನವಿ ಮಾಡಿದರು.
ನಾನು `ನನ್ನ ಗುರುತಿನ ಅನೇಕ ವೈದ್ಯರು ಬೆಂಗಳೂರಿನಲ್ಲಿದ್ದಾರೆ, ಅವರಿಗೆ ಪತ್ರ ಬರೆದುಕೊಡುತ್ತೇನೆ ತೋರಿಸಿ~ ಎಂದು ಹೇಳಿದೆ. ಅವರ ತಾಯಿಗೆ ಅದು ಇಷ್ಟವಿರಲಿಲ್ಲ. ನಾನು ಅವರಿಗೆ ಕುಟುಂಬ ವೈದ್ಯನಾದ ಕಾರಣ ನಾನೇ ಬಂದು ಅವರನ್ನು ನೋಡಬೇಕೆಂದು ಹೇಳಿದ್ದರಂತೆ. ನಾವು ಬೆಂಗಳೂರನ್ನು ಸೇರಿದಾಗ ಊಟದ ಸಮಯವಾಗಿತ್ತು.
ತಾಯಿಯವರು ನನ್ನನ್ನು ಆತ್ಮೀಯತೆಯಿಂದ ಸ್ವಾಗತಿಸಿದರು. ಮೊದಲು ಊಟ ಮಾಡಿ ಆಮೇಲೆ ನನ್ನನ್ನು ಪರೀಕ್ಷಿಸುತ್ತೀರಂತೆ ಎಂದರು. ಆಗ ಮಾವಿನ ಹಣ್ಣಿನ ಕಾಲ. ಪುಷ್ಕಳ ಊಟದ ಬಳಿಕ ಹಣ್ಣಿನ ಸೇವನೆ ಆಯಿತು. ತಾವೂ ಊಟ ಮಾಡಿ ಪರೀಕ್ಷೆ ಮಾಡಿಸಿಕೊಳ್ಳಲು ಅಣಿಯಾದರು.
ಪರೀಕ್ಷೆಯ ಬಳಿಕ ತಮ್ಮಲ್ಲಿದ್ದ ಲ್ಯಾಬ್ ವರದಿಗಳು ಹಾಗೂ ಬೇರೆ ಬೇರೆ ವೈದ್ಯರು ಬರೆದುಕೊಟ್ಟಿದ್ದ ಮಾತ್ರೆಗಳನ್ನೆಲ್ಲಾ ನನ್ನ ಮುಂದೆ ಹರಡಿದ್ದರು. ಎಷ್ಟೇ ಮಾತ್ರೆ ತಿಂದರೂ ರಕ್ತದ ಒತ್ತಡವಾಗಲೀ, ಸಕ್ಕರೆಯ ಮಟ್ಟವಾಗಲೀ ಕಡಿಮೆಯಾಗಿರಲಿಲ್ಲ.
ತೂಕ ಹೆಚ್ಚಾಗೇ ಇತ್ತು. `ಬೇಕಿದ್ರೆ ಇನ್ನೂ ಒಂದೆರಡು ಮಾತ್ರೆ ಬರ್ದು ಕೊಡಿ ತಗೋತೀನಿ~ ಎಂದರು. ನಾನು `ನೀವು ಈಗ ತಗೊಳ್ತಾ ಇರೋ ಮಾತ್ರೆಗಳೇ ಜಾಸ್ತಿ. ಮಾತ್ರೆಗಳ್ನ ಹೆಚ್ಚು ಮಾಡೋ ಬದ್ಲು ತೂಕ ಕಡಿಮೆ ಮಾಡೋ ಕಡೆ ಗಮನಹರಿಸಿ, ಮುಖ್ಯವಾಗಿ ಸಿಹಿ ತಿಂಡಿ, ಬೆಣ್ಣೆ ತುಪ್ಪ ಇವನ್ನೆಲ್ಲಾ ಬಿಡಬೇಕು~ ಎಂದು ಹೇಳಿದೆ.
`ಈಗ ಮಾವಿನ ಹಣ್ಣಿನ ಕಾಲ. ನನಗೆ ದಿನಕ್ಕೆ 2-3 ಹಣ್ಣು ತಿನ್ನದಿದ್ರೆ ಆಗದು ಏನು ಮಾಡಬೇಕು?~ ಎಂದರು. ನಾನು ಅತಿ ಬುದ್ಧಿವಂತನಂತೆ `ಈ ಹಣ್ಣು ನಿಮಗೆ ಒಳ್ಳೆಯದಲ್ಲ. ಮಾವಿನ ಹಣ್ಣಿನಲ್ಲಿರೋ ಸಕ್ಕರೆಯಿಂದ ಗ್ಲೂಕೋಸ್ ಮಟ್ಟ ಏರುತ್ತದೆ. ಆದ್ದರಿಂದ ಆರೋಗ್ಯ ಬಿಗಡಾಯಿಸಬಹುದು~ ಎಂದೆ.
ಅವರಿಗೆ ಬಹಳ ಕೋಪ ಬಂತು. `ಏನ್ ಡಾಕ್ಟ್ರೇ ನೀವು ಹೇಳೋದು? ನನ್ನ ಮಗ ನಿಮ್ಮನ್ನ ಹೊಗಳಿದ ಅಂತ ಇಲ್ಲಿಗೆ ಕರೆತರಕ್ಕೆ ಹೇಳ್ದೆ. ನೀವು ನೋಡಿದ್ರೆ ಬೇರೆ ಡಾಕ್ಟರ್ ತರಾನೇ ಹೇಳ್ತೀರಿ. ಸಿಹಿ ಬೇಡಾಂದ್ರಿ, ತುಪ್ಪ ಬೇಡಾಂದ್ರಿ, ಈಗ ಹಣ್ಣು ಬೇಡಾ ಅಂತೀರಿ. ಮತ್ತೆ ನಾನೇನು ಹಣ್ಣಲ್ಲದೆ ಮಣ್ಣು ತಿನ್ನಬೇಕಾ?~ ಎಂದರು. ಅವರನ್ನು ಸಮಾಧಾನಪಡಿಸಲು ನನ್ನ ಬುದ್ಧಿಯನ್ನೆಲ್ಲಾ ಕರಗಿಸಬೇಕಾಯಿತು.
ಇಂತಹ ನೆನಪುಗಳು ಸಾಕಷ್ಟಿವೆ. ರೋಗಿಯೊಬ್ಬನ ಪ್ರಶ್ನೆಯಿಂದ ಪ್ರೇರಿತನಾಗಿ ರಚಿಸಿದ ಹನಿಗವನವೊಂದನ್ನು ನೆನಪಿಸಿಕೊಂಡು ಲೇಖನವನ್ನು ಸದ್ಯಕ್ಕೆ ಮುಗಿಸುತ್ತೇನೆ.
ರೋಗಿಯ ಪ್ರಶ್ನೆ!
ಮೊನ್ನೆ ನನ್ನ ಬಳಿ ಬಂದ ರೋಗಿಗೆ
ಮಾಡಿದೆ ವಿವರ ಪರೀಕ್ಷೆ
ಬರೆದುಕೊಟ್ಟೆ ಔಷಧದ ಚೀಟಿ
ನುಡಿದೆ, ಮುಗಿದಿಲ್ಲ ನನ್ನ ಡ್ಯೂಟಿ
ಹೇಳಬೇಕಾಗಿದೆ ಕೆಲವು ಪಥ್ಯ
ಪಾಲಿಸಬೇಕಿದನು ನೀನು ನಿತ್ಯ
ಸಿಗರೇಟ್ ಸೇದುವಂತಿಲ್ಲ
ಜರ್ದಾ ಅಗಿಯುವಂತಿಲ್ಲ
ಬೀರು, ಬ್ರಾಂದಿ ಬಿಡಬೇಕು
ಪರಸ್ತ್ರೀ ಸಂಗ ತೊರೆಯಬೇಕು
ರೋಗಿ ಕೇಳಿದ: ಇಷ್ಟೆಲ್ಲಾ ಪಥ್ಯ ಮಾಡಲೇಬೇಕಾ?
ಹಾಗಾದರೆ ನಾ ಬದುಕಬೇಕಾದರೂ ಯಾಕಾ?!
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.