ಭಾನುವಾರ, ಮೇ 16, 2021
22 °C

ಹಣ್ಣೆಲೆ ಚಿಗುರಿದಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಫ್ಟ್‌ವೇರ್ ವಲಯದಲ್ಲಿ ಹಣ್ಣೆಲೆ ಚಿಗುರಿದೆ. ದೇಶದ ಮೂರನೇ ಅತಿದೊಡ್ಡ ಸಾಫ್ಟ್‌ವೇರ್ ಸಂಸ್ಥೆಯಾದ ಇನ್ಫೊಸಿಸ್‌ಗೆ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ 66 ವರ್ಷ ವಯಸ್ಸಿನ ಎನ್.ಆರ್.ನಾರಾಯಣಮೂರ್ತಿ ಅವರ ಪುನರಾಗಮನವಾಗಿದೆ. ನಿಜಕ್ಕೂ ಇದೊಂದು ಅನಿರೀಕ್ಷಿತ ಬೆಳವಣಿಗೆ. ಅವರೊಂದಿಗೆ ಅವರ ಪುತ್ರ ಕೂಡಾ ಐದು ವರ್ಷಗಳ ಅವಧಿಗೆ ತಂದೆಯ ಕಾರ್ಯನಿರ್ವಾಹಕ ಸಹಾಯಕನಾಗಿ ಅತಿಪ್ರತಿಷ್ಠಿತ ಸಂಸ್ಥೆಯ ನಿರ್ವಹಣೆ ಹೊಣೆ ಹೊತ್ತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಇನ್ಫೊಸಿಸ್ ಹಲವು ಸವಾಲುಗಳನ್ನು ಎದುರಿಸುತ್ತಿತ್ತು. ಕಂಪೆನಿಗೆ ಉತ್ತರ ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳಿಂದ ಬರುವ ವರಮಾನ ಕುಸಿದಿತ್ತು. ಈ ವಲಯದ ಬೃಹತ್ ಕಂಪೆನಿಗಳು ವೆಚ್ಚ ಕಡಿತದ ಉದ್ದೇಶದಿಂದ ಇನ್ಫೊಸಿಸ್ ಪ್ರತಿಸ್ಪರ್ಧಿ ಕಂಪೆನಿಗಳಾದ ವಿಪ್ರೊ, ಟಿಸಿಎಸ್ ಮತ್ತು ಎಚ್‌ಸಿಎಲ್‌ಗೆ ಯೋಜನೆ ಗುತ್ತಿಗೆ ನೀಡಲಾರಂಭಿಸಿದ್ದವು. ಮಾರುಕಟ್ಟೆಯಲ್ಲಿ ಇನ್ಫೊಸಿಸ್ ಷೇರು ಮೌಲ್ಯ ಶೇ 15 ರಷ್ಟು ಕುಸಿತ ಕಂಡಿರುವುದು ಆತಂಕಕ್ಕೆ ಕಾರಣವಾಗಿತ್ತು.2013-14 ನೇ ಸಾಲಿನಲ್ಲಿ ಇತರ ಪ್ರತಿಸ್ಪರ್ಧಿ ಸಂಸ್ಥೆಗಳಿಗಿಂತ ಇನ್ಫೊಸಿಸ್‌ನ ವರಮಾನ ಕುಸಿದಿತ್ತು.ಇಂತಹ ಸವಾಲಿನ ಸಂದರ್ಭದಲ್ಲಿ ಕಂಪೆನಿಯನ್ನು ಮುನ್ನಡೆಸಬಲ್ಲ ಸಮರ್ಥ ನಾಯಕನ ಕೊರತೆ ಎದ್ದು ಕಂಡಿತ್ತು. ಅಂತಹ ಸಾಮರ್ಥ್ಯ ಇರುವ ನಾರಾಯಣಮೂರ್ತಿ ಅವರ ಮರುನೇಮಕಕ್ಕೆ ಆಡಳಿತ ಮಂಡಳಿಯ ಮೇಲೇ ಒತ್ತಡ ಇತ್ತು.  ಹೂಡಿಕೆದಾರರ ಒತ್ತಡ ಆಡಳಿತಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಕಾರಣದಿಂದ ಮತ್ತೆ ಇನ್ಫೊಸಿಸ್‌ನಲ್ಲಿ ಹಳೆಬೇರು ಹೊಸಚಿಗುರು ಕಾಣಿಸಿಕೊಂಡಿದೆ. ನಾರಾಯಣ ಮೂರ್ತಿ ಅವರ ನೇಮಕವಾದ ದಿನವೇ ಷೇರು ಮೌಲ್ಯ ಶೇ 9ರಷ್ಟು ಏರಿಕೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.ಪ್ರಸ್ತುತದ ಸವಾಲಿನ ಸಂದರ್ಭದಲ್ಲಿ ಕಂಪೆನಿಯನ್ನು ಗರಿಷ್ಠಪಥದಲ್ಲಿ ತೆಗೆದುಕೊಂಡು ಹೋಗುವ ದಕ್ಷತೆ ನಾರಾಯಣಮೂರ್ತಿಯವರಲ್ಲಿ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇದೇ ಸಂದರ್ಭದಲ್ಲಿ ಕಂಪೆನಿಯನ್ನು ಮುನ್ನಡೆಸುವ ನಾಯಕತ್ವದ ಕೊರತೆ ಇರುವುದನ್ನೂ ಅಲ್ಲಗಳೆಯುವಂತಿಲ್ಲ. ಈ ಕಾರಣದಿಂದ ನಾರಾಯಣಮೂರ್ತಿ ಅವರ ಪುನರಾಗಮನ ಉದ್ಯಮ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.ಸಣ್ಣ ಗ್ಯಾರೇಜ್‌ನಿಂದ ಆರಂಭಿಸಿದ ಈ ವಲಯವನ್ನು ಅವರು ವಿಶ್ವಮಟ್ಟಕ್ಕೆ ಕೊಂಡೊಯ್ದರು. ಬೆಂಗಳೂರಿಗೆ ವಿಶ್ವನಕ್ಷೆಯಲ್ಲಿ ಒಂದು ಸ್ಥಾನ ಕಲ್ಪಿಸಿದರು. ನಿವೃತ್ತಿ ಘೋಷಿಸುವಾಗಲೂ ಕುಟುಂಬದ ಒಬ್ಬ ಸದಸ್ಯರು ಮಾತ್ರ ಅಲ್ಲಿರಬೇಕೆಂಬ ಷರತ್ತು ವಿಧಿಸಿಕೊಂಡಿದ್ದರು. ನಮ್ಮ ಮಕ್ಕಳೂ ಕೂಡ ಇನ್ಫೊಸಿಸ್‌ನಲ್ಲಿರುವುದಿಲ್ಲ ಎಂದಿದ್ದರು. ಆದರೆ ಈಗ ಪುತ್ರನಿಗೆ ಕಾರ್ಯನಿರ್ವಾಹಕ ಸಹಾಯಕ ಹುದ್ದೆ ಕಲ್ಪಿಸಲಾಗಿದೆ.ನಾರಾಯಣಮೂರ್ತಿ ಅವರ ವೈಯಕ್ತಿಕ ವರ್ಚಸ್ಸು ಒಂದು ಆದರ್ಶವಾಗಿಯೇ ಪರಿಗಣಿತವಾಗಿರುವ ಸಮಯದಲ್ಲಿ ಅದೆಲ್ಲವನ್ನು ಮೀರಿ, ತಾವೇ ಹಾಕಿಕೊಂಡ ಗೆರೆಯನ್ನು ದಾಟಿ, ಮೂರ್ತಿ ಅವರು ಇಂತಹ ನಿರ್ಧಾರವನ್ನು ತೆಗೆದುಕೊಂಡದ್ದಾದರು ಹೇಗೆ ಎನ್ನುವುದು ಕೆಲವರಿಗೆ ಯಕ್ಷಪ್ರಶ್ನೆಯಾಗಿದೆ.  ಇದನ್ನು ಇನ್ಫೊಸಿಸ್‌ನ ದೌರ್ಬಲ್ಯ ಎಂದೂ ವಿಶ್ಲೇಷಕರು ಬಣ್ಣಿಸಿದ್ದಾರೆ. ಆದರೂ ಅನಿರೀಕ್ಷಿತ, ಅಚ್ಚರಿದಾಯಕ ಬೆಳವಣಿಗೆಯಲ್ಲಿ ಮತ್ತೆ ಇನ್ಫೊಸಿಸ್ ಹೊಣೆ ಹೊತ್ತಿರುವ ನಾರಾಯಣಮೂರ್ತಿ ಅವರ ಮುಂದೆ ಹಲವು ಸವಾಲುಗಳಿವೆ. ಜಾಗತಿಕ ಮಟ್ಟದಲ್ಲೇ ಸಾಫ್ಟ್‌ವೇರ್ ಉದ್ಯಮ ಬದಲಾವಣೆಯ ಮಜಲಿನಲ್ಲಿದೆ. ಈ ಸವಾಲಿಗೆ ಅವರು ತಮ್ಮನ್ನು ಹೇಗೆ ಒಡ್ಡಿಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.