ಶುಕ್ರವಾರ, ಮೇ 14, 2021
21 °C

ಹಣ ಇದ್ದರೂ ಕಾಮಗಾರಿಗೆ ಗ್ರಹಣ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಮದ್ದೂರು: ತಾಲ್ಲೂಕಿನ ಬಸವಲಿಂಗದೊಡ್ಡಿ ಗ್ರಾಮದ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಬಿಡುಗಡೆಗೊಂಡು ಹಲವು ತಿಂಗಳುಗಳೇ ಕಳೆದರೂ ಇಂದಿಗೂ ಕಟ್ಟಡ ನಿರ್ಮಾಣ ಕಾಮಗಾರಿಗೆ ಗ್ರಹಣ ಹಿಡಿದಿದೆ.ಕಳೆದ 18ವರ್ಷಗಳಿಂದ ಗ್ರಾಮದ ಗುರುಲಿಂಗಸ್ವಾಮಿ ಅವರ ದನದ ಕೊಟ್ಟಿಗೆಯಲ್ಲಿ ನಡೆಯುತ್ತಿದ್ದ ಅಂಗನವಾಡಿ ಕೇಂದ್ರ, ಈ ಮೂರು ವರ್ಷಗಳ ಹಿಂದೆ ಗ್ರಾಮದ ರಘು ಎಂಬುವರ ಮನೆಯ ಮುಂದಿನ ಪಡಸಾಲೆಯಲ್ಲಿ ನಡೆಯುತ್ತಿದೆ.ಅಂಗನವಾಡಿ ಕೇಂದ್ರದ ಈ ದುಸ್ಥಿತಿಯ ನಿವಾರಣೆಗಾಗಿ ಸರ್ಕಾರವು ಗ್ರಾಮದ ಸರ್ವೇ ಸಂಖ್ಯೆ 123/127ರಲ್ಲಿ ನಿವೇಶನ ಮಂಜೂರು ಮಾಡಿದೆ. ಅದರಂತೆ ಈ ಕೆಲವು ತಿಂಗಳ ಹಿಂದೆ ಆರ್‌ಐಡಿಎಫ್ ಯೋಜನೆಯ 2ಹಂತದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ 4.18ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು, ಕಾಮಗಾರಿಯನ್ನು ಕೆಆರ್‌ಬಿಸಿ ಸಂಸ್ಥೆಗೆ ವಹಿಸಲಾಗಿದೆ.ಆದರೆ, ಸರ್ಕಾರದಿಂದ ಮಂಜೂರಾದ ಜಾಗದಲ್ಲಿ  ಸುಕನ್ಯ ಜಯರಾಂ ಎಂಬುವರು  ಒತ್ತುವರಿ ಮಾಡಿಕೊಂಡು ದನ ಕಟ್ಟಲು ಕೊಟ್ಟಿಗೆ ಕಟ್ಟಿಕೊಂಡಿದ್ದಾರೆ ಆದರೆ ಅದನ್ನು ತೆರವುಗೊಳಿಸಲು ಅಧಿಕಾರಿಗಳು ಇನ್ನೂ ಮುಂದಾಗಿಲ್ಲ. ಹೀಗಾಗಿ ಸರ್ಕಾರಿ ನಿವೇಶನ ಸೇರಿದಂತೆ ಕಟ್ಟಡ ನಿರ್ಮಾಣಕ್ಕೆ ಬೇಕಾದ ಅಗತ್ಯ ಹಣ ಬಿಡುಗಡೆಯಾದರೂ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಈ ಅಕ್ರಮ ಒತ್ತುವರಿ ತೆರವು ತಡೆಯಾಗಿದೆ. ಇಂದಿಗೂ ಮಕ್ಕಳು ಗಾಳಿ ಮಳೆ ಚಳಿಯಲ್ಲಿ ಅವರಿವರ ಪಡಸಾಲೆಯಲ್ಲಿಯೇ ದಿನ ಕಳೆಯಬೇಕಾದ  ಪರಿಸ್ಥಿತಿ ಒದಗಿದೆ.`ಈ ಸಮಸ್ಯೆ ಕುರಿತು ಈಗಾಗಲೇ ನಾನು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಪತ್ರ ಬರೆದಿದ್ದೇನೆ. ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲೂ ಈ ಕುರಿತು ಚರ್ಚೆಗಳು ನಡೆದಿವೆ. ಇದಲ್ಲದೇ ಇತ್ತೀಚೆಗೆ  ಮುಖ್ಯಮಂತ್ರಿ ಸೇರಿದಂತೆ ನೂತನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಉಮಾಶ್ರೀ ಅವರಿಗೆ ಪತ್ರ ಬರೆದಿದ್ದೇನೆ. ಅಲ್ಲಿಂದ ಅಕ್ರಮ ಒತ್ತುವರಿ ತೆರವಿಗೆ ಶೀಘ್ರ ಕ್ರಮ ಜರುಗಿಸುವಂತೆ ಆದೇಶ ನೀಡಲಾಗಿದೆ. ಆದರೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಲಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾಗಲಿ ಈ ಅಕ್ರಮ ತೆರವಿಗೆ ಮುಂದಾಗಿಲ್ಲ. ಕಾರಣವೇನು ಎಂಬುದು ಇಂದಿಗೂ ನಿಗೂಢ. ಈ ಅಕ್ರಮ ಒತ್ತುವರಿ ತೆರವು ಕಾರ್ಯದ ವಿಳಂಬದಿಂದಾಗಿ ಇದೀಗ ಸರ್ಕಾರದಿಂದ ಬಿಡುಗಡೆಯಾದ ಹಣ ವಾಪಸ್ಸಾಗುವ ಆತಂಕ ಕಾಡಿದೆ. ಏನು ಮಾಡುವುದು ಎಂಬುದು ದಿಕ್ಕೇ ತೋಚದಂತಾಗಿದೆ' ಎಂದು ಕೆಸ್ತೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಹಾಸ್ ಈ ಕುರಿತು ತಮ್ಮ ಅಳಲು ವ್ಯಕ್ತಪಡಿಸುತ್ತಾರೆ.ಕಳೆದ 21ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೇ ಅತಂತ್ರ ಸ್ಥಿತಿಯಲ್ಲಿಯೇ ಕಾಲದೂಡಿದ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ದೊರಕಿಸುವಲ್ಲಿ ಕ್ಷೇತ್ರ ಶಾಸಕ ಡಿ.ಸಿ. ತಮ್ಮಣ್ಣ ಅವರು ಇತ್ತ ಗಮನಹರಿಸಬೇಕಿದೆ. ಮೈ ಮರೆತು ಮಲಗಿರುವ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಆಗಬೇಕು ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.

ಈ ಸಮಸ್ಯೆ ಕುರಿತು ಈಗಾಗಲೇ ನಾನು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಪತ್ರ ಬರೆದಿದ್ದೇನೆ. ತಾಲ್ಲೂಕು, ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲೂ ಈ ಕುರಿತು ಚರ್ಚೆಗಳು ನಡೆದಿವೆ. ಇದಲ್ಲದೇ ಇತ್ತೀಚೆಗೆ  ಮುಖ್ಯಮಂತ್ರಿ ಸೇರಿದಂತೆ ನೂತನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಉಮಾಶ್ರೀ ಅವರಿಗೆ ಪತ್ರ ಬರೆದಿದ್ದೇನೆ'

  ಚಂದ್ರಹಾಸ್, ಗ್ರಾಮ ಪಂಚಾಯಿತಿ ಸದಸ್ಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.