ಹಣ ಕೊಟ್ಟರೂ ಕ್ರಿಯಾಯೋಜನೆ ಇಲ್ಲ: ಬೇಸರ

ಶನಿವಾರ, ಜೂಲೈ 20, 2019
23 °C

ಹಣ ಕೊಟ್ಟರೂ ಕ್ರಿಯಾಯೋಜನೆ ಇಲ್ಲ: ಬೇಸರ

Published:
Updated:

ಧಾರವಾಡ: `ಸಂಸದರ ನಿಧಿಯಿಂದ ಜಿಲ್ಲೆಗೆ 13.30 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ ಅಧಿಕಾರಿಗಳು ಎಷ್ಟೋ ಯೋಜನೆಗಳ ಕ್ರಿಯಾಯೋಜನೆಯನ್ನೇ ಸಿದ್ಧಗೊಳಿಸಿಲ್ಲ. ಅದರಲ್ಲಿ ಪಾಲಿಕೆಯ ಅಧಿಕಾರಿಗಳ ವೈಫಲ್ಯವೇ ಜಾಸ್ತಿ ಇದೆ' ಎಂದು ಸಂಸದ ಪ್ರಹ್ಲಾದ ಜೋಶಿ ಬೇಸರ ವ್ಯಕ್ತಪಡಿಸಿದರು.`496 ಕಾಮಗಾರಿಗಳ ಪೈಕಿ 212 ಕಾಮಗಾರಿಗಳಿಗೆ ಈವರೆಗೆ ಕ್ರಿಯಾ ಯೋಜನೆಯೇ ಸಿದ್ಧಗೊಂಡಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತದೆ' ಎಂದು ಶುಕ್ರವಾರ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಂಸದರ ನಿಧಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.ಮಹಾನಗರ ಪಾಲಿಕೆಗೆ 4.31 ಕೋಟಿ ರೂಪಾಯಿ ನೀಡಲಾಗಿದೆ. ಆದರೆ 2010-11ನೇ ಸಾಲಿನಲ್ಲಿ ಒಂಬತ್ತು ಕಾಮಗಾರಿಗಳಿಗೆ ಕ್ರಿಯಾ ಯೋಜನೆ ಸಿದ್ಧಗೊಳಿಸಿಲ್ಲ. ವಿಶ್ವೇಶ್ವರ ನಗರದ ಐ.ಜಿ. ಸನದಿ ಅವರ ಮನೆಯ ಹಿಂಭಾಗದ ಉದ್ಯಾನವನ ಅಭಿವೃದ್ಧಿಗಾಗಿ 3 ಲಕ್ಷ ರೂಪಾಯಿ ಚೆಕ್‌ನ್ನು ಕಳೆದ ವರ್ಷ ನವೆಂಬರ್‌ನಲ್ಲೇ ಪಾವತಿಸಲಾಗಿತ್ತು. ಆ ಚೆಕ್‌ನ್ನೂ ಅಧಿಕಾರಿಗಳು ಬ್ಯಾಂಕ್‌ಗೆ ಸಲ್ಲಿಸದೇ ಇದ್ದುದರಿಂದ ಅದರ ಕಾಲಾವಧಿ ಮುಗಿದಿದೆ ಎಂದು ದೂರಿದರು.ಹೀಗಾಗಿ ಸರ್ಕಾರ ಸಂಸದರ ನಿಧಿ ಬಳಕೆ ಹಾಗೂ ಕಾಮಗಾರಿಯ ವೇಗ ಹೆಚ್ಚಿಸಲು ಜಿಲ್ಲೆಗೊಬ್ಬ ಎಂಜಿನಿಯರ್ ನೇತೃತ್ವದಲ್ಲಿ ಪ್ರತ್ಯೇಕ ವಿಭಾಗವನ್ನು ಆರಂಭಿಸಬೇಕು. ಇಲ್ಲದಿದ್ದರೆ ಸಮರ್ಪಕವಾಗಿ ಹಣ ಬಳಕೆ ಆಗುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡುವೆ ಎಂದರು.ಜಿಲ್ಲೆಯಲ್ಲಿ ಕೇಂದ್ರದ ಸಾಮಾಜಿಕ ಭದ್ರತೆ ಯೋಜನೆಯಡಿ ನೀಡುವ ಪಿಂಚಣಿದಾರರಿಗೆ ಹಣ ಪಾವತಿಸುವ ಫಿನೋ ಕಂಪೆನಿ ಏಜೆಂಟರು, ಅವರಿಂದ ಹಣ ಪಡೆಯುತ್ತಿದ್ದಾರೆ. ಈ ಬಗ್ಗೆ ಮತ್ತೆ ದೂರು ಬಂದರೆ ಕಂಪೆನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.ಕೆಶಿಪ್ ಅಧಿಕಾರಿಗಳ ಬೆವರಿಳಿಸಿದ ಡಿಸಿ

ಧಾರವಾಡ-ಸವದತ್ತಿ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಕೆಶಿಪ್ ಅಧಿಕಾರಿಗಳ ಸಮಜಾಯಿಷಿ ಕೇಳದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ತಮ್ಮನ್ನು ಹಾದಿತಪ್ಪಿಸಲು ಮುಂದಾದ ಅಧಿಕಾರಿಗಳಿಗೆ ಮರುಪ್ರಶ್ನೆ ಹಾಕುವ ಮೂಲಕ `ಕೇವಲ ಭರವಸೆ ನೀಡಿದರೆ ಸಾಲದು' ಎಂಬುದನ್ನು ಪರೋಕ್ಷವಾಗಿ ತಿಳಿಸಿದರು.ರಡ್ಡಿ ವೀರಣ್ಣ ಕನ್‌ಸ್ಟ್ರಕ್ಷನ್ಸ್ ಕಂಪೆನಿಯವರು ಈ ರಸ್ತೆಯನ್ನು ಗುತ್ತಿಗೆ ಹಿಡಿದಿದ್ದು, ಅದನ್ನು ಕಳೆದ ತಿಂಗಳಲ್ಲೇ ಮುಗಿಸಬೇಕಿತ್ತು. ಆದರೆ ಸಲ್ಲದ ನೆಪ ಹೇಳಿ ಮುಂದಕ್ಕೆ ಹಾಕುವ ಬಗ್ಗೆ ಸಂಸದ ಜೋಶಿ ಪ್ರಶ್ನಿಸಿದರು.ಆಗ ಅಧಿಕಾರಿಯೊಬ್ಬರು, ರಸ್ತೆಗೆ ಅಡ್ಡಲಾಗಿ ಅಲ್ಲಲ್ಲಿ ಐದು ಸಣ್ಣ ಸೇತುವೆಗಳನ್ನು ಕಟ್ಟಿಸಬೇಕಿದ್ದು, ನಾಲ್ಕು ಸೇತುವೆ ಪ್ರಗತಿಯಲ್ಲಿವೆ. ಒಂದು ಸೇತುವೆ ಇನ್ನೂ ಆರಂಭವಾಗಬೇಕು. ಎಲ್ಲವುಗಳನ್ನೂ ಮುಂದಿನ 45 ದಿನಗಳಲ್ಲಿ ಕಟ್ಟಿ ಮುಗಿಸುವುದಾಗಿ `ಖಚಿತ ಭರವಸೆ' ನೀಡಿದರು.ಅಲ್ಲಿಯವರೆಗೆ ಸುಮ್ಮನೆ ಕೇಳಿಸಿಕೊಂಡಿದ್ದ ಡಿಸಿ ಶುಕ್ಲಾ, `ಒಂದು ಸೇತುವೆ ಕಟ್ಟಲು 45 ದಿನ ಸಾಕೇ? ಸಾಕಾಗುತ್ತದೋ, ಇಲ್ಲವೋ ಅಷ್ಟೇ ಹೇಳಿ' ಎಂದು ಪಟ್ಟು ಹಿಡಿದರು.ಅಧಿಕಾರಿ ತಡಬಡಾಯಿಸತೊಡಗಿದರು. ಇನ್ನೊಬ್ಬ ಅಧಿಕಾರಿ ಮಧ್ಯಪ್ರವೇಶಿಸಿ, `ಅಷ್ಟು ದಿನದಲ್ಲಿ ಆಗುವುದಿಲ್ಲ. ಎಷ್ಟು ಸಮಯ ಬೇಕು ಎಂಬುದರ ಬಗ್ಗೆ ಶನಿವಾರ ವರದಿ ಸಲ್ಲಿಸುತ್ತೇವೆ' ಎಂದರು. `ನಿಮ್ಮ ನಿಧಾನಗತಿಯ ಕೆಲಸದಿಂದ ಸಾಮಾನ್ಯ ಜನರಿಗೇಕೆ ಕಷ್ಟ ಕೊಡುತ್ತೀರಿ' ಎಂದು ಡಿಸಿ ಟೀಕಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry