ಹಣ ಕೊರತೆ: ಕುಂಟುತ್ತಿರುವ ಚನ್ನಮ್ಮ ವಿ.ವಿ.

ಶುಕ್ರವಾರ, ಜೂಲೈ 19, 2019
24 °C

ಹಣ ಕೊರತೆ: ಕುಂಟುತ್ತಿರುವ ಚನ್ನಮ್ಮ ವಿ.ವಿ.

Published:
Updated:

ಬೆಳಗಾವಿ: ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾದರೂ ಹಣದ ಕೊರತೆಯಿಂದಾಗಿ ಅಭಿವೃದ್ಧಿ ಚಟುವಟಿಕೆಗಳು ಕುಂಟುತ್ತ ಸಾಗುತ್ತಿವೆ. `ಸಂಪನ್ಮೂಲ~ದ ಕೊರತೆಯಿಂದಾಗಿ ವಿಶ್ವವಿದ್ಯಾಲಯದ ಪ್ರಸಕ್ತ ಶೈಕ್ಷಣಿಕ ವರ್ಷದ ನಿರ್ವಹಣೆ ದುಸ್ತರವಾಗುತ್ತಿದೆ.ಈ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾಗಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು (ಆರ್‌ಸಿಯು) ಜುಲೈ 2010ರಲ್ಲಿ ಭೂತರಾಮನಹಟ್ಟಿಯ `ವಿದ್ಯಾ ಸಂಗಮ~ ಕ್ಯಾಂಪಸ್‌ನಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವಾಗಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂತು. ವಿಶ್ವವಿದ್ಯಾಲಯದ ನಿರ್ವಹಣೆಗಾಗಿ ಮೊದಲ ಕಂತಾಗಿ ರೂ. 4.5 ಕೋಟಿ ಬಿಡುಗಡೆ ಮಾಡಿದ ಬಳಿಕ ರಾಜ್ಯ ಸರ್ಕಾರವು ಇತ್ತ ಕಣ್ತೆರೆದು ನೋಡಲೇ ಇಲ್ಲ.ವಿಶ್ವವಿದ್ಯಾಲಯದಲ್ಲಿ ಅಗತ್ಯ ಕಟ್ಟಡಗಳಿಲ್ಲದೇ ಪಾಳಿಯ ಮೇಲೆ ತರಗತಿ ನಡೆಸಲಾಗುತ್ತಿದೆ. 60 ವಿದ್ಯಾರ್ಥಿಗಳು ಉಳಿದುಕೊಳ್ಳಬಹುದಾದ ಹಾಸ್ಟೇಲ್‌ನಲ್ಲಿ 120 ವಿದ್ಯಾರ್ಥಿಗಳಿದ್ದಾರೆ! ಸುಸಜ್ಜಿತ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ.ಅಭಿವೃದ್ಧಿಗೆ ಹಿನ್ನಡೆ:
ತುರ್ತಾಗಿ ಬೋಧನಾ ಕೊಠಡಿ, ವಿದ್ಯಾರ್ಥಿಗಳಿಗೆ ಉಳಿಯಲು ಹಾಸ್ಟೇಲ್, ಆಟದ ಮೈದಾನ, ಸಿಬ್ಬಂದಿಗೆ ಕ್ವಾಟರ್ಸ್, ವಿವಿಗೆ ಆವರಣ ಗೋಡೆ, ಒಳ ರಸ್ತೆ ನಿರ್ಮಿಸಬೇಕಾಗಿದೆ. ಹೀಗಾಗಿ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗಾಗಿ ರೂ. 100 ಕೋಟಿ ಕ್ರಿಯಾಯೋಜನೆ ಸಿದ್ಧಪಡಿಸಿ ಅನುದಾನ ನೀಡುವಂತೆ ಬಜೆಟ್ ಪೂರ್ವದಲ್ಲೇ ರಾಜ್ಯ ಸರ್ಕಾರಕ್ಕೆ ವಿಶ್ವವಿದ್ಯಾಲಯ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಬಜೆಟ್‌ನಲ್ಲಿ ಇದಕ್ಕೆ ಮನ್ನಣೆ ನೀಡದ ಸರ್ಕಾರ, ಇದುವರೆಗೂ ಅನುದಾನ ನೀಡಿಲ್ಲ. ಹೀಗಾಗಿ ವಿವಿಯ ಅಭಿವೃದ್ಧಿ ಕಾರ್ಯಗಳು ಹಿಂದೆ ಬಿದ್ದಿವೆ.ವಿಜ್ಞಾನಕ್ಕಿಲ್ಲ ಮನ್ನಣೆ: ವಿವಿಯಲ್ಲಿ ಸಂಪನ್ಮೂಲ ಕೊರತೆಯಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಲಾ ಹಾಗೂ ಒಂದೆರಡು ಬೇರೆ ವಿಷಯದ ಸ್ನಾತಕೋತ್ತರ ಪದವಿಗಷ್ಟೇ ಮಹತ್ವ ನೀಡಲಾಗಿದೆ. ಮೂಲ ಸೌಲಭ್ಯ ಕೊರತೆಯಿಂದಾಗಿ ಎಂಎಸ್ಸಿ ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರದಂತಹ ಮೂಲ ವಿಜ್ಞಾನಗಳ ಕೋರ್ಸ್‌ಗಳನ್ನು ಆರಂಭಿಸಿಲ್ಲ. ವಿವಿಯಲ್ಲಿ ಕೇವಲ 11 ಪಿ.ಜಿ. ಕೋರ್ಸ್‌ಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.ಇಕ್ಕಟ್ಟಿನಲ್ಲಿ ವಿದ್ಯಾರ್ಥಿಗಳು: 2011-12ನೇ ಸಾಲಿನಲ್ಲಿ ಬೆಳಗಾವಿ, ವಿಜಾಪುರ, ಬಾಗಲಕೋಟೆ ಜಿಲ್ಲೆಗಳ ಒಟ್ಟು 331 ಕಾಲೇಜುಗಳು ವಿವಿಯ ಸಂಯೋಜನೆಗೊಳಪಡಲಿವೆ. ಕಳೆದ ವರ್ಷ ಪದವಿ ಕೋರ್ಸ್‌ಗಳಿಗೆ 47 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು.

 

ವಿವಿಯಲ್ಲಿ ಎಲ್ಲ ಪಿ.ಜಿ. ಕೋರ್ಸ್ ಆರಂಭವಾಗದ್ದರಿಂದ  ಅವರಿಗೆ ಪ್ರವೇಶ ಸಿಗುವುದಿಲ್ಲ. ಬೇರೆ ವಿವಿಯಲ್ಲಿ ಪ್ರವೇಶ ಪಡೆಯೋಣವೆಂದರೆ ಅಲ್ಲಿ ಹೊರಗಿನ ವಿವಿಯ ವಿದ್ಯಾರ್ಥಿಗಳಿಗೆ ಕೇವಲ ಒಂದು ಸೀಟು ಮಾತ್ರ ಲಭ್ಯವಿರುತ್ತದೆ. ಹೀಗೆ ಮುಂದುವರೆದರೆ ಆರ್‌ಸಿಯು ವ್ಯಾಪ್ತಿಯ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ತಿಲಾಂಜಲಿ ನೀಡಬೇಕಾಗುತ್ತದೆ.ಅನುದಾನಕ್ಕೆ ಕುಲಪತಿ ಮನವಿ


~ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ರೂಪಿಸಿ ನೂರು ಕೋಟಿ ರೂಪಾಯಿ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಇದಕ್ಕೆ ಇನ್ನೂ ಅನುಮೋದನೆ ನೀಡಿಲ್ಲ. ಹೀಗಾದರೆ ವಿಶ್ವವಿದ್ಯಾಲಯ ನಡೆಸುವುದು ಹೇಗೆ~ ಎಂಬುದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಆರ್. ಅನಂತನ್ ಅಳಲು.~ರೂ. 67.50 ಲಕ್ಷ ಬಿಡುಗಡೆ ಮಾಡಿರುವ ಆದೇಶ ಭಾನುವಾರ ಸಿಕ್ಕಿದೆ. ಹೀಗೆ ಒಂದು- ಎರಡು ಕೋಟಿ ರೂಪಾಯಿ ನೀಡಿದೆ ಇನ್ನು ಇಪ್ಪತ್ತು ವರ್ಷವಾದರೂ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಲು ಸಾಧ್ಯವಿಲ್ಲ. ಒಮ್ಮೆಲೇ ನೂರು ಕೋಟಿ ನೀಡಿದಾಗ ಮಾತ್ರ ಇನ್ನೆರಡು ವರ್ಷದೊಳಗೆ ಆರ್‌ಸಿಯು ಕೂಡ ಉಳಿದ ವಿವಿಗಳಂತೆ ತಲೆ ಎತ್ತಿ ನಿಲ್ಲಬಹುದು~ ಎಂದು ಕುಲಪತಿ ಅಭಿಪ್ರಾಯಪಡುತ್ತಾರೆ.~ಹುಡ್ಕೊದಿಂದ ಸಾಲ ಪಡೆದು 100 ಕೋಟಿ ರೂಪಾಯಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ವಿವಿಗೆ ಪ್ರತಿ ವರ್ಷ ನೀಡುವ ಅನುದಾನವನ್ನೇ ಸಾಲದ ಕಂತು ತುಂಬಲು ಬಳಸಿಕೊಳ್ಳಬಹುದು. ಹುಡ್ಕೊ ಕೂಡ ಇದಕ್ಕೆ ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಈ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳಬೇಕು~ ಎಂಬುದು ಪ್ರೊ. ಅನಂತನ್ ಮನವಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry