ಹಣ ತರುವ ಹರವೆಸೊಪ್ಪು

7

ಹಣ ತರುವ ಹರವೆಸೊಪ್ಪು

Published:
Updated:

ಬಹಳಷ್ಟು ರೈತರು ಪೂರ್ಣ ಬೆಳೆಯಾಗಿ ಹರವೆ (ಹರಿವೆ) ಸೊಪ್ಪು ಬೆಳೆಯಲು ಹಿಂದೇಟು ಹಾಕುತ್ತಾರೆ. ಅದರಿಂದೇನು ಲಾಭವಿದೆ ಎಂದುಕೊಂಡು ಇತರ ಬೆಳೆ ಬೆಳೆಯಲು ಮುಂದಾಗುತ್ತಾರೆ. ಆದರೆ ಇದೇ ಹರವೆ ಸೊಪ್ಪಿನ ಬೇಸಾಯದಿಂದ ಕೈತುಂಬ ಆದಾಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ತೆಂಕಣಕೇರಿ ರೈತ ನಾಗರಾಜ ನಾಯಕ.ಆರಂಭದಲ್ಲಿ ಈ ಸೊಪ್ಪು ಕಸದಂತೆ ಕಂಡರೂ ಕ್ರಮೇಣ ರಸವಾಯಿತು. ಇದು ಉತ್ತಮ ತರಕಾರಿ ಮಾತ್ರವಲ್ಲ; ವಾಣಿಜ್ಯ ಬೆಳೆಯೂ ಹೌದು ಎಂಬುದು ಮನವರಿಕೆಯಾದಾಗ ಇವರ ಪಾಲಿನ ಲಕ್ಷ್ಮಿಯೂ ಆಯಿತು. ಹೀಗಾಗಿ ಅವರು ಈಗ ತಮ್ಮ ಜಮೀನಿನಲ್ಲಿ ಶೇಂಗಾ, ಭತ್ತ, ತರಕಾರಿ, ರಾಗಿ, ನವಿಲುಕೋಸು, ಬಿಟ್‌ರೂಟ್ ಜೊತೆಗೆ ಹರವೆ ಸೊಪ್ಪನ್ನೂ ಬೆಳೆಯುತ್ತಿದ್ದಾರೆ. ಒಂದು ಗುಂಟೆಗೆ (ಒಂದು ಎಕರೆಗೆ 40 ಗುಂಟೆ) 150- 200 ರೂ ಖರ್ಚು ಮಾಡಿ 1000 ದಿಂದ 1500ರೂ ವರೆಗೂ ಆದಾಯ ಪಡೆದಿದ್ದಾರೆ. ಇವರು ಬೀಜಗಳನ್ನು ಪ್ರತಿ ವರ್ಷ ಖರೀದಿಸಿ ತರುವುದಿಲ್ಲ. ಕೊಯ್ಲು ಮಾಡುವಾಗ ಅದೇ ಜಾಗದಲ್ಲಿ ಉತ್ತಮ ಬೀಜಗಳ ಗಿಡಗಳನ್ನು ಆಯ್ಕೆ ಮಾಡಿ ಅಲ್ಲಿಯೇ ಉದುರಿಸುತ್ತಾರೆ. ನೀರು ಹರಿಸಿ ಸಗಣಿ ಮತ್ತು ಎರೆಹುಳು ಗೊಬ್ಬರ ಮಿಶ್ರಣ ಮಾಡಿ ಹಾಕಿ ಬೆಳೆಸುತ್ತಾರೆ.ಸೊಪ್ಪನ್ನು ವರ್ಷದಲ್ಲಿ ಮೂರ‌್ನಾಲ್ಕು ಸಲ ಬೆಳೆಯಬಹುದು. ಬೀಜ ಹಾಕಿದ ಒಂದರಿಂದ ಒಂದೂವರೆ ತಿಂಗಳಲ್ಲಿ ರಸಭರಿತ ಕಾಂಡ ಮತ್ತು ಎಲೆಗಳು ಬೆಳೆದು ನಿಲ್ಲುತ್ತದೆ. ಇದನ್ನು ಮಿಶ್ರ ಬೆಳೆಯಾಗಿ ಬೇಳೆಯಬಹುದಾರೂ ಇವರು ಮಾತ್ರ ಪ್ರತ್ಯೇಕವಾಗಿ ಬೆಳೆಯುತ್ತಿದ್ದಾರೆ.ಇದರಿಂದ ಬೇಕಾದಾಗ ಕೊಯ್ಲು ಮಾಡುವ ಅವಕಾಶವಿರುತ್ತದೆ. ಚೆನ್ನಾಗಿ ನೀರು, ಗೊಬ್ಬರ, ಉಂಡ ಬೆಳೆ ಕಾಂತಿಯುಕ್ತವಾಗಿದ್ದು 4 ರಿಂದ 5 ಅಡಿಗಳಷ್ಟು ಎತ್ತರ ಬೆಳೆಯುತ್ತದೆ.ಹರವೆಯ ಎಲೆಗಳಿಂದ ಮಾಡಿದ ಸಾರು ಬಲು ರುಚಿ. ಇದರ ದಂಟುಗಳನ್ನು (ಕಾಂಡ) ಕತ್ತರಿಸಿ ಸಾರಿನಲ್ಲಿ ಹಾಕಿ ಕುದಿಸಿ (ನುಗ್ಗೆ ಕಾಯಿಯಂತೆ) ತಿಂದರೆ ಮಾಂಸದ ರುಚಿಯ ಅನುಭವವಾಗುತ್ತದೆ.

 

ಬೇಸಾಯಕ್ಕೆ ಹೆಚ್ಚು ಖರ್ಚಾಗುವುದಿಲ್ಲ. ಕಳೆ ಹುಟ್ಟಿಕೊಂಡಿತೆಂಬ ಕಿರಿಕಿರಿ ಇಲ್ಲ. ರೋಗಬಾಧೆಯಂತೂ ಅತಿ ವಿರಳ. ಒಂದೇ ಜಾಗದಲ್ಲಿ ನಿರಂತರ ಬೆಳೆದರೂ ಹಾನಿಯಾಗದು ಎಂಬುದು ನಾಗರಾಜರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry