ಭಾನುವಾರ, ಮೇ 16, 2021
26 °C

ಹಣ ದುರ್ಬಳಕೆ: ಬಿಬಿಎಂಪಿ ನೌಕರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೇರೋಹಳ್ಳಿ ಕಂದಾಯ ಉಪ ವಿಭಾಗದಲ್ಲಿ ಸಂಗ್ರಹಿಸಲಾದ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಕಂದಾಯ ವಸೂಲಿಗಾರ ಎಂ.ಜೆ. ಕಾರ್ತಿಕ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಬಿಬಿಎಂಪಿ ಹೆಚ್ಚುವರಿ ಆಯುಕ್ತರಾದ (ಆಡಳಿತ) ಬಿ.ಬಿ. ಕಾವೇರಿ ಮಂಗಳವಾರ ಆದೇಶ ಹೊರಡಿಸಿದ್ದಾರೆ.`ಕಾರ್ತಿಕ್ ಅವರು ಹೇರೋಹಳ್ಳಿ ಮತ್ತು ಲಗ್ಗೆರೆ ಉಪ ವಿಭಾಗದಲ್ಲಿ ರೂ 1.66 ಲಕ್ಷ ಹಣವನ್ನು ದುರ್ಬಳಕೆ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.`ರಾಜರಾಜೇಶ್ವರಿನಗರ ವಲಯದಲ್ಲಿ ನಡೆದ ಈ ಅವ್ಯವಹಾರದ ವಿಷಯವಾಗಿ ಕಂದಾಯ ವಿಭಾಗದ ಉಪ ಆಯುಕ್ತರು ಏಪ್ರಿಲ್ 9ರಂದು ವರದಿ ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಸಂಘದ ಜಂಟಿ ಕಾರ್ಯದರ್ಶಿಯವರು ಆಯುಕ್ತರನ್ನು ಭೇಟಿ ಮಾಡಿ ಪ್ರಕರಣದ ಕುರಿತು ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದರು. ನಕಲಿ ರಶೀದಿ ತಯಾರಿಸಿ ಮೋಸ ಮಾಡಿದ ಆರೋಪ ಕಾರ್ತಿಕ್ ಅವರ ಮೇಲಿತ್ತು' ಎಂದು ಅವರು ವಿವರಿಸಿದ್ದಾರೆ.`ಕಾರ್ತಿಕ್ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ವಿಚಾರಣೆ ನಡೆಸಲಾಗಿದೆ. ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳು ಅನೇಕ ತಿಳಿವಳಿಕೆ ಪತ್ರ ನೀಡಿದರೂ ಅವರು ಯಾವ ಪತ್ರಕ್ಕೂ ಉತ್ತರ ನೀಡಿಲ್ಲ. ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾಗಿದ್ದು, ತನಿಖೆಗೆ ಸಹಕರಿಸಿಲ್ಲ. ಲಗ್ಗೆರೆ ಉಪ ವಿಭಾಗದಿಂದ ಹೇರೋಹಳ್ಳಿ ಉಪ ವಿಭಾಗಕ್ಕೆ ವರ್ಗಾವಣೆಯಾಗಿದ್ದ ಅವರು, ಹಣದ ದುರ್ಬಳಕೆಯನ್ನು ಮುಂದುವರಿಸಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ' ಎಂದು ತಿಳಿಸಿದ್ದಾರೆ.`ಸಮಜಾಯಿಷಿ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದರೂ ಕಾರ್ತಿಕ್ ಉತ್ತರಿಸಿಲ್ಲ. ಹೀಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪೂರ್ವಾನುಮತಿ ಪಡೆಯದೆ ಅವರು ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ' ಎಂದು ಆದೇಶದಲ್ಲಿ ಹೇಳಿದ್ದಾರೆ.ಆದೇಶದ ಪ್ರತಿಯನ್ನು ವಲಯದ ಹೆಚ್ಚುವರಿ ಆಯುಕ್ತರಿಗೆ ಕಳುಹಿಸಿರುವ ಅವರು, `ಕಾರ್ತಿಕ್ ಅವರನ್ನು ಮಂಗಳವಾರವೇ ಕೆಲಸದಿಂದ ಬಿಡುಗಡೆ ಮಾಡಬೇಕು ಮತ್ತು ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು' ಎಂದು ಸೂಚಿಸಿದ್ದಾರೆ.ಸೋಮವಾರವಷ್ಟೇ ಪತ್ರಿಕಾಗೋಷ್ಠಿ ನಡೆದಿದ್ದ ಬಿಬಿಎಂಪಿ ಅಧಿಕಾರಿಗಳು ಹಾಗೂ ನೌಕರರ ಸಂಘದ ಪದಾಧಿಕಾರಿಗಳು, `ಹೇರೋಹಳ್ಳಿ ಕಂದಾಯ ಉಪ ವಿಭಾಗದಲ್ಲಿ ಸಂಗ್ರಹಿಸಲಾದ ತೆರಿಗೆ ಹಣದ ದುರುಪಯೋಗ ಪ್ರಕರಣ ಬಯಲಿಗೆಳೆದ ಅಧಿಕಾರಿಗಳನ್ನು ಸ್ಥಳೀಯ ಶಾಸಕರು ವರ್ಗಾವಣೆ ಮಾಡಲು ಒತ್ತಡ ಹೇರುತ್ತಿದ್ದು, ತಪ್ಪಿತಸ್ಥ ನೌಕರರನ್ನು ಮೇಲಧಿಕಾರಿಗಳು ರಕ್ಷಿಸುತ್ತಿದ್ದಾರೆ' ಎಂದು ದೂರಿದ್ದರು.`ಪ್ರಕರಣದ ಕುರಿತು ಮಾತನಾಡಲು ಆಯುಕ್ತರು ಸಿಗುತ್ತಿಲ್ಲ' ಎಂದೂ ಆಕ್ರೋಶ ವ್ಯಕ್ತಪಡಿಸಿದ್ದರು. ನೌಕರರ ಸಂಘದ ಪದಾಧಿಕಾರಿಗಳ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ದೆಯೇ ಹೆಚ್ಚುವರಿ ಆಯುಕ್ತರಿಂದ ಅಮಾನತು ಆದೇಶ ಹೊರಬಿದ್ದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.