ಹಣ ಪಡೆದು ವಂಚನೆ: ಆರೋಪಿ ಬಂಧನ

7

ಹಣ ಪಡೆದು ವಂಚನೆ: ಆರೋಪಿ ಬಂಧನ

Published:
Updated:

 

ಬೆಂಗಳೂರು: ಔಷಧ ನಿಯಂತ್ರಕನೆಂದು (ಡ್ರಗ್ ಕಂಟ್ರೋಲರ್) ಹೇಳಿಕೊಂಡು ಔಷಧ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪಡೆದು ವಂಚಿಸಿದ್ದ ಆರೋಪದ ಮೇಲೆ ಚಿಕ್ಕಪೇಟೆಯ ಅಂಜಯ್ಯ ಶೆಟ್ಟಿ (53) ಎಂಬಾತನನ್ನು ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ.ಅಂಜಯ್ಯ ಔಷಧ ನಿಯಂತ್ರಕರ ಸೋಗಿನಲ್ಲಿ ನಂದಿನಿಲೇಔಟ್ ನಾಲ್ಕನೇ ಬ್ಲಾಕ್‌ನ ವಿ.ಆರ್.ಮೆಡಿಕಲ್ ಸ್ಟೋರ್‌ನ ಮಾಲೀಕ ಲೋಹಿತ್ ಎಂಬುವರಿಂದ ಹಣ ಪಡೆದು ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಾನವ ಹಕ್ಕುಗಳ ಆಯೋಗದ ಬೆಂಗಳೂರು ಜಿಲ್ಲಾ ವರದಿಗಾರನೆಂದು ಹೇಳಿಕೊಂಡು  ಅಧಿಕಾರಿಗಳ ಹೆಸರು ಬಳಸಿಕೊಂಡು ಬೆದರಿಸಿ ಹಣ ಪಡೆದು ವಂಚಿಸಿದ್ದಾನೆ. ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಚಂದ್ರು ಮತ್ತು ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿದೆ.

 ಆಗಾಗ್ಗೆ ಲೋಹಿತ್ ಅವರ ಅಂಗಡಿಗೆ ಬರುತ್ತಿದ್ದ ಆರೋಪಿ ಮೆಡಿಕಲ್ ಸ್ಟೋರ್‌ನ ಪರವಾನಗಿಯನ್ನು ಪರಿಶೀಲಿಸಿ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ತೆಗೆದುಕೊಂಡು ಹೋಗಿದ್ದ. ಆ ನಂತರ ವ್ಯಕ್ತಿಯೊಬ್ಬರನ್ನು ಕರೆತಂದು ಅವರನ್ನು ಆಹಾರ ಇಲಾಖೆ ಅಧಿಕಾರಿ ಎಂದು ಲೋಹಿತ್‌ಗೆ ಪರಿಚಯಿಸಿ 50 ಸಾವಿರ ನೀಡದಿದ್ದರೆ ಪರವಾನಗಿ ರದ್ದುಪಡಿಸುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಆತಂಕಗೊಂಡ ಲೋಹಿತ್ ಆತನಿಗೆ ಮುಂಗಡವಾಗಿ 10 ಸಾವಿರ ರೂಪಾಯಿ ಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಅಂಜಯ್ಯ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪರಿಷತ್ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಜನರಿಗೆ ವಂಚಿಸಿದ್ದ ವಿವೇಕಾನಂದನ ಸಹಚರ ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry