ಶುಕ್ರವಾರ, ಜೂನ್ 25, 2021
26 °C

ಹಣ ಬಾರದಿದ್ದರೆ ಖರೀದಿ ಬಂದ್?

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿರುವ `ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ~ಯು, ಪ್ರತಿ ಕ್ವಿಂಟಲ್‌ಗೆ ರೂ. 4,000ರ ದರದಲ್ಲಿ ತೊಗರಿ ಖರೀದಿಸುತ್ತಿದೆ. ಆದರೆ ಸರ್ಕಾರ ಸಾಲದ ರೂಪದಲ್ಲಿ ಮಂಡಳಿಗೆ ಬಿಡುಗಡೆ ಮಾಡಿರುವ ಐದು ಕೋಟಿ ರೂಪಾಯಿ ಪೈಕಿ 4.8 ಕೋಟಿ ರೂಪಾಯಿ ಖರ್ಚಾಗಿದೆ. ಸರ್ಕಾರ ಇನ್ನಷ್ಟು ಹಣ ಬಿಡುಗಡೆ ಮಾಡದಿದ್ದರೆ, ಶನಿವಾರದಿಂದಲೇ ಖರೀದಿ ಪ್ರಕ್ರಿಯೆ ಸ್ಥಗಿತಗೊಳ್ಳುವ ಸಾಧ್ಯತೆಯಿದೆ.ಡಿಸೆಂಬರ್‌ನಲ್ಲಿ ರೈತರು ಮಾರುಕಟ್ಟೆಗೆ ತೊಗರಿಯನ್ನು ಮಾರಾಟಕ್ಕೆಂದು ತರುತ್ತಿದ್ದಂತೆ, ಬೆಲೆ ಕುಸಿಯಲು ಶುರುವಾಗಿತ್ತು. ರೈತ ಸಂಘಟನೆಗಳ  ತೀವ್ರ ಪ್ರತಿಭಟನೆಯ ಬಳಿಕ ಕ್ವಿಂಟಲ್‌ಗೆ ರೂ. 4,000 ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸುವುದಾಗಿ ಸರ್ಕಾರ ಜನವರಿ 25ರಂದು ಭರವಸೆ ನೀಡಿದರೂ ಫೆಬ್ರುವರಿ 14ರಂದು ಖರೀದಿ ಆರಂಭವಾಗಿತ್ತು.ಗುಲ್ಬರ್ಗ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿ ಕೇಂದ್ರ ಸ್ಥಾಪಿಸಿ, ರೈತರಿಂದ ಉತ್ಪನ್ನವನ್ನು ತೊಗರಿ ಮಂಡಳಿ ಪರವಾಗಿ `ರಾಷ್ಟ್ರೀಯ ಪದಾರ್ಥ ಹಾಗೂ ಉತ್ಪನ್ನ ವಿನಿಮಯ ಸಂಸ್ಥೆ (ಎನ್‌ಸಿಡಿಎಕ್ಸ್) ಸ್ಪಾಟ್ ಎಕ್ಸ್‌ಚೇಂಜ್ ಖರೀದಿಸಿ ರೈತರಿಗೆ ಚೆಕ್ ನೀಡಲಾಗುತ್ತಿದೆ.ಎರಡು ವಾರಗಳಲ್ಲಿ ಮಂಡಳಿಯು 11,594 ಕ್ವಿಂಟಲ್ ತೊಗರಿ ಖರೀದಿಸಿದ್ದು, 4.8 ಕೋಟಿ ರೂಪಾಯಿಗಳನ್ನು ರೈತರಿಗೆ ಪಾವತಿಸಿದೆ. ಮಂಡಳಿಯಲ್ಲಿ ಈ ಮೊದಲೇ ರೂ. 1.7 ಕೋಟಿ ಹಣ ಹಾಗೂ ಈಗ ಉಳಿದ ಸುಮಾರು ರೂ. 18 ಲಕ್ಷ ಸೇರಿಸಿದರೆ ಒಟ್ಟು ರೂ. 1.88 ಕೋಟಿ ಆಗಲಿದೆ. ಇಷ್ಟು ಹಣ ಇನ್ನು ಒಂದೆರಡು ದಿನದಲ್ಲಿ ಖರ್ಚಾಗಲಿದೆ. ಸರ್ಕಾರ ಇನ್ನಷ್ಟು ಹಣ ಬಿಡುಗಡೆ ಮಾಡದಿದ್ದರೆ ಖರೀದಿ ಪ್ರಕ್ರಿಯೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಪ್ರಸ್ತುತ ಗುಲ್ಬರ್ಗದ ಖರೀದಿ ಕೇಂದ್ರದಲ್ಲಿ ರೈತರು ಸಾಲುಗಟ್ಟಿ ನಿಂತು, ತೊಗರಿ ಮಾರಾಟ ಮಾಡುತ್ತಿದ್ದಾರೆ.ನಿತ್ಯದ ವಹಿವಾಟು ಗಮನಿಸಿದರೆ, ಮಂಡಳಿಯಲ್ಲಿರುವ ಹಣ ಶುಕ್ರವಾರ ಸಂಜೆ ಹೊತ್ತಿಗೆ ಖಾಲಿಯಾಗಲಿದೆ. “ಮಂಡಳಿಗೆ 15 ಕೋಟಿ ರೂಪಾಯಿ ಸಾಲ ಕೊಡುವಂತೆ ಮನವಿ ಮಾಡಿದ್ದೆವು. ಸರ್ಕಾರ ಬಿಡುಗಡೆ ಮಾಡಿದ ಎಲ್ಲ 5 ಕೋಟಿ ಖರ್ಚಾದ ಹಿನ್ನೆಲೆಯಲ್ಲಿ ಮತ್ತೆ ಪತ್ರ ಬರೆದಿದ್ದೇವೆ” ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಅಮನ್ ಶಕೀಬ್ ಗುರುವಾರ ತಿಳಿಸಿದರು.ಇನ್ನೂ ಉಳಿದ ತೊಗರಿ: ಮೂರು ಜಿಲ್ಲೆಗಳ 16 ಕೇಂದ್ರಗಳಲ್ಲಿ ತೊಗರಿ ಖರೀದಿ ನಡೆಸಿ, ಗೋದಾಮುಗಳಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಖರೀದಿ ಸಂಪೂರ್ಣ ಮುಕ್ತಾಯಗೊಂಡ ಬಳಿಕ, ಮರುಮಾರಾಟ ಮಾಡುವುದು ಮಂಡಳಿಯ ಉದ್ದೇಶ. ಆದರೆ ಕಳೆದ ಸಲ ಕ್ವಿಂಟಲ್‌ಗೆ ರೂ. 4200 ದರದಲ್ಲಿ ಖರೀದಿಸಿದ ಬಳಿಕ, ಬೆಲೆ ರೂ. 3500ಕ್ಕೆ ಕುಸಿದಿತ್ತು. ಹೀಗಾಗಿ ಅದನ್ನು ಮರು ಮಾರಾಟ ಮಾಡಲು ಸಾಧ್ಯವಾಗದೇ, 9,000 ಕ್ವಿಂಟಲ್ ತೊಗರಿ ಇನ್ನೂ ಗೋದಾಮಿನಲ್ಲೇ ಉಳಿದಿದೆ.“ದಿನಕ್ಕೆ ಸುಮಾರು 400 ಕ್ವಿಂಟಲ್‌ನಷ್ಟು ತೊಗರಿಯನ್ನು ಖರೀದಿಸುತ್ತಿದ್ದೇವೆ. ಸರ್ಕಾರ ನಿಗದಿ ಮಾಡಿದ ಅನ್ವಯ ಸರಾಸರಿ ಗುಣಮಟ್ಟದ ತೊಗರಿ ಖರೀದಿ ಮಾತ್ರ ನಡೆಯುತ್ತಿದ್ದು, ಗುಣಮಟ್ಟ ಕಡಿಮೆಯಿರುವ ತೊಗರಿಯನ್ನು ತಿರಸ್ಕರಿಸಲಾಗುತ್ತಿದೆ” ಎಂದು ಖರೀದಿ ಕೇಂದ್ರದ ಸಿಬ್ಬಂದಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.