ಹಣ ಬಿಡುಗಡೆ ಮಾಡದಿದ್ದರೆ ಧರಣಿ

7
ಬಿಜೆಪಿ ಸರ್ಕಾರಕ್ಕೆ ಕೆಜೆಪಿ ಅಧ್ಯಕ್ಷ ಬಿಎಸ್‌ವೈ ಎಚ್ಚರಿಕೆ

ಹಣ ಬಿಡುಗಡೆ ಮಾಡದಿದ್ದರೆ ಧರಣಿ

Published:
Updated:

ಬೆಂಗಳೂರು: `ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಒಂದು ವಾರದೊಳಗೆ ಹಣ ಬಿಡುಗಡೆ ಮಾಡದಿದ್ದರೆ ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ಬೆಂಗಳೂರಿನಲ್ಲಿ ಫಲಾನುಭವಿಗಳ ಜೊತೆಯಲ್ಲೇ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು' ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಕೆಜೆಪಿ ಬೆಂಗಳೂರು ನಗರ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.ಇದೇ 26ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಆ ನಂತರವೂ ಸಾಮಾಜಿಕ ಭದ್ರತಾ ಯೋಜನೆಗಳ ಹಣ ಮತ್ತು ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಆಗದಿದ್ದರೆ ರಾಜ್ಯದ ಎಲ್ಲ ಕಡೆಗಳಲ್ಲೂ ಧರಣಿ ಆರಂಭಿಸಲಾಗುವುದು ಎಂದರು.`ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಜೊತೆ ನಾನು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ಕೂರುತ್ತೇನೆ. ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಸೇರಿದಂತೆ ಸರ್ಕಾರವೇ ಫಲಾನುಭವಿಗಳ ಬಳಿ ಓಡಿ ಬರುವಂತೆ ಮಾಡುತ್ತೇನೆ' ಎಂದು ಗುಡುಗಿದರು.`ರಾಜ್ಯದಲ್ಲಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಜನಪರ ಯೋಜನೆಗಳ ಅನುಷ್ಠಾನಕ್ಕೂ ಹಣ ಬಿಡುಗಡೆ ಆಗುತ್ತಿಲ್ಲ. ಸರ್ಕಾರವೇ ಇಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆಯೇ' ಎಂದು ಪ್ರಶ್ನಿಸಿದರು.ಬೆಂಬಲಕ್ಕೆ ಮನವಿ: ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪೂರ್ಣವಾಗಿ ಹದಗೆಟ್ಟಿದೆ. ದೇಶದ ನಗರಗಳಲ್ಲಿ ದೆಹಲಿ ನಂತರ ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಹೆಚ್ಚಿದೆ. ಸರ್ಕಾರ, ಗೃಹ ಸಚಿವರು ಏನು ಮಾಡುತ್ತಿದ್ದಾರೋ ಯಾರಿಗೂ ಗೊತ್ತಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನರಿಗೆ ಕಿರುಕುಳ ನೀಡುವುದಕ್ಕೆ ಸೀಮಿತವಾಗಿದೆ. ಕಸ ವಿಲೇವಾರಿಯನ್ನೂ ಸಮರ್ಪಕವಾಗಿ ನಿರ್ವಹಿಸಲು ಪಾಲಿಕೆ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.`100 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದಿಂದ ಸ್ಪರ್ಧಿಸಲು ತಲಾ ಮೂವರು ಆಕಾಂಕ್ಷಿಗಳು ಸಿದ್ಧವಾಗಿದ್ದಾರೆ. 224 ಕ್ಷೇತ್ರಗಳಲ್ಲೂ ಬಿಜೆಪಿ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಆಯ್ಕೆಗಾಗಿಯೇ ಸಮೀಕ್ಷೆಯೊಂದನ್ನು ನಡೆಸಲು ನಿರ್ಧರಿಸಿದ್ದೇನೆ. ಮತಗಟ್ಟೆ ಹಂತದಲ್ಲಿ ತಲಾ ನೂರು ಸದಸ್ಯರಂತೆ ಎರಡು ತಿಂಗಳ ಅವಧಿಯಲ್ಲಿ 22 ಲಕ್ಷ ಸದಸ್ಯರನ್ನು ನೋಂದಣಿ ಮಾಡುವ ಗುರಿ ಇದೆ. ಬೆಂಗಳೂರಿನ ಗತವೈಭವ ಮರಳಿಸಲು ಕೆಜೆಪಿಗೆ ಬೆಂಬಲ ನೀಡಿ' ಎಂದು ಮನವಿ ಮಾಡಿದರು.ವಿಧಾನ ಪರಿಷತ್ ಸದಸ್ಯರಾದ ಎಂ.ಡಿ.ಲಕ್ಷ್ಮೀನಾರಾಯಣ, ಪ್ರೊ.ಮುಮ್ತಾಜ್ ಅಲಿಖಾನ್, ಕೆಜೆಪಿ ಹಿರಿಯ ಉಪಾಧ್ಯಕ್ಷ ಕೆ.ಎಚ್.ಶ್ರೀನಿವಾಸ್, ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್, ಮದನ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry