ಬುಧವಾರ, ನವೆಂಬರ್ 20, 2019
21 °C

`ಹಣ ಸಾಗಾಟ: ಮೂರು ಪ್ರಕರಣ ಪತ್ತೆ'

Published:
Updated:

ಯಾದಗಿರಿ: ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೊಸದಾಗಿ 24,432 ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ. ರಾಜೇಂದ್ರ ಚೋಳನ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸೂಕ್ತ ದಾಖಲಾತಿಗಳೇ ಇಲ್ಲದಿರುವುದರಿಂದ ಮತದಾರರ ಪಟ್ಟಿಯಲ್ಲಿ ಒಟ್ಟು 778 ಹೆಸರುಗಳು ತಿರಸ್ಕೃತಗೊಂಡಿವೆ ಎಂದರು.ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಸುರಪುರ ಕ್ಷೇತ್ರಕ್ಕೆ ಚುನಾವಣೆ ವೀಕ್ಷಕರನ್ನಾಗಿ ಅಬಸಾಕ್ ತ್ಮತು, ಶಹಾಪುರಕ್ಕೆ ಸುಧೀರ್, ಯಾದಗಿರಿಗೆ ಕೆ.ಪಿ. ಗುಪ್ತ ಹಾಗೂ ಗುರುಮಠಕಲ್‌ಗೆ ನಂದೇಶ್ವರಲಾಲ ಅವರನ್ನು ನೇಮಕ ಮಾಡಲಾಗಿದೆ.ಯಾದಗಿರಿ, ಗುರುಮಠಕಲ್ ಶಹಾಪುರ ಮತ್ತು ಸುರಪುರ ವಿಧಾನಸಭೆ ಕ್ಷೇತ್ರಕ್ಕೆ ಈಗಾಗಲೇ ಚುನಾವಣೆ ವೆಚ್ಚ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.ಈಗಾಗಲೇ ಚುನಾವಣೆಯಲ್ಲಿ ಅಕ್ರಮವಾಗಿ ಹಣ ಸಾಗಿಸಿದ್ದ ಮೂರು ಪ್ರಕರಣಗಳು ಪತ್ತೆಯಾಗಿದ್ದು, ರೂ. 15 ಲಕ್ಷ, ರೂ. 7.5 ಲಕ್ಷ, ಹಾಗೂ ರೂ. 1.5 ಲಕ್ಷ ವಶಪಡಿಸಿಕೊಳ್ಳಲಾಗಿದೆ. 600 ಲೀಟರ್ ಮದ್ಯ ಮತ್ತು 52 ಕಿ.ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಸಂಚಾರ ನಿಯಮ ಉಲ್ಲಂಘಿಸಿದವರ ಬಗ್ಗೆ ಈಗಾಗಲೇ ವಿಡಿಯೋ ಚಿತ್ರಣ ಮಾಡಲಾಗಿದೆ. ಇದನ್ನು ಪರಿಶೀಲಿಸಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.ಅಭ್ಯರ್ಥಿಗಳು ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಕಂಡುಬಂದರೆ ಅವರ ಮೇಲೂ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.ಚುನಾವಣೆ ಬಂದೋಬಸ್ತ್‌ಗಾಗಿ ನಿಯೋಜನೆಗೊಂಡಿರುವ ಪೊಲೀಸ್ ಸಿಬ್ಬಂದಿ ಕರ್ತವ್ಯ ಲೋಪ ಎಸಗಿದರೆ ಅಂಥವರಿಗೆ ನೋಟಿಸ್ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ಅಕ್ರಮವಾಗಿ ಹಣ ಮತ್ತು ಮದ್ಯ ಸಾಗಾಟ ತಡೆಯಲು ಈಗಾಗಲೇ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಅಕ್ರಮ ಚುಟವಟಿಕೆ ನಿಯಂತ್ರಣ ಮಾಡಲು ಸುಲಭವಾಗುತ್ತದೆ ಎಂದು ಹೇಳಿದರು.ಶಾಂತಿಯುವಾಗಿ ಚುನಾವಣೆ ನಡೆಸಲಾಗುವುದು. ಚುನಾವಣಾ ಕರ್ತವ್ಯಕ್ಕೆ ಸಿಬ್ಬಂದಿಯ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರತಿಕ್ರಿಯಿಸಿ (+)