ಹಣ ಹೂಡಿಕೆ ಎಲ್ಲಿ ?

7

ಹಣ ಹೂಡಿಕೆ ಎಲ್ಲಿ ?

Published:
Updated:

ಭಾರತೀಯರು ನಿಜವಾಗಿಯೂ ಪುಣ್ಯವಂತರು. ಯಾಕೆಂದರೆ ನಮ್ಮ ಬ್ಯಾಂಕುಗಳು ಜಗತ್ತಿನಲ್ಲೇ ಅತಿ ಹೆಚ್ಚಿನ ಬಡ್ಡಿ ನೀಡುತ್ತಿವೆ. ಜತೆಗೆ ಹೂಡಿಕೆಗೆ ಉತ್ತಮ ಪ್ರತಿಫಲ ಪಡೆಯುವ ಹಲವು ಆಯ್ಕೆಗಳೂ ಇಲ್ಲಿವೆ. 2010ನೇ ವರ್ಷವು ಷೇರು ಹೂಡಿಕೆಗೆ ಬಹಳ ಅನುಕೂಲಕರ ವರ್ಷವಾಗಿತ್ತು. ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿಗಳು ವರ್ಷಾಂತ್ಯಕ್ಕೆ ಶೇ 17ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ವರ್ಷದ ಆರಂಭಕ್ಕೆ ಬಡ್ಡಿ ದರ ಕಡಿಮೆ ಇದ್ದರೂ ಕೊನೆಯ ಮೂರು ತಿಂಗಳಲ್ಲಿ ಅವುಗಳು ಹೆಚ್ಚತೊಡಗಿದವು. ವರ್ಷಾಂತ್ಯಕ್ಕೆ ಚಿನ್ನದ ಬೆಲೆ ಶೇ 15ರಷ್ಟು ನೆಗೆದಿದ್ದರಿಂದ ಚಿನ್ನದ ಮೇಲೆ ಹೂಡಿಕೆ ಮಾಡಿದವರು ಭಾರಿ ಲಾಭ ಮಾಡಿಕೊಂಡರು. ಸ್ಥಿರಾಸ್ತಿಗಳ ಬೆಲೆಯೂ ನಿಧಾನವಾಗಿ ಆದರೆ ಸ್ಥಿರವಾಗಿ ಹೆಚ್ಚಾಯಿತು.

ಹೊಳೆಯುವ ಚಿನ್ನ,       ಬೆಳಗುವ ಬೆಳ್ಳಿ

ಭಾರತೀಯರಿಗೆ ಚಿನ್ನ, ಬೆಳ್ಳಿಯ ಮೇಲಿನ ಆಕರ್ಷಣೆ ಜಾಸ್ತಿ. ಜಗತ್ತಿನಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಚಿನ್ನ ಖರೀದಿಸುವ ರಾಷ್ಟ್ರ ಭಾರತ. ನಾವು ಆಭರಣ ಮಾಡಿಕೊಂಡು ಮೆರೆಯುವುದಕ್ಕೆ ಮಾತ್ರ ಚಿನ್ನ ಖರೀದಿಸುವುದಿಲ್ಲ, ಬದಲಿಗೆ ಹೂಡಿಕೆಯಾಗಿಯೂ ಅದನ್ನು ಪರಿಗಣಿಸುತ್ತೇವೆ. ಚಿನ್ನದ ಬೆಲೆ ಸದಾ ಏರುಮುಖವಾಗಿಯೇ ಇರುವುದರಿಂದ ಅದರ ಮೇಲೆ ದುಡ್ಡು ಹೂಡುವುದು ಅತ್ಯುತ್ತಮ ಎಂಬ ಭಾವನೆ ನಮ್ಮಲ್ಲಿದೆ.2010ರ ಆರಂಭದಲ್ಲಿ ಬೆಳ್ಳಿಯ ಬೆಲೆ ಕೆ.ಜಿ.ಗೆ ರೂಪಾಯಿ 27 ಸಾವಿರ ಇತ್ತು. ವರ್ಷಾಂತ್ಯಕ್ಕೆ ಅದರ ಬೆಲೆ ರೂಪಾಯಿ 47 ಸಾವಿರಗಳಿಗೆನೆಗೆದಿದೆ. ಅಂದರೆ ಬೆಲೆಯಲ್ಲಿ ಶೇ 74ರಷ್ಟು ಹೆಚ್ಚಳವಾಗಿದೆ. ಚಿನ್ನಕ್ಕೆ ಸದ್ಯ 10 ಗ್ರಾಂಗೆ ರೂಪಾಯಿ 19,500  ಇದೆ. 12 ತಿಂಗಳ ಹಿಂದೆ ಇದ್ದ ಬೆಲೆಗಿಂತ ಶೇ 15ರಷ್ಟು ಹೆಚ್ಚಿದೆ. ಜಗತ್ತಿನಾದ್ಯಂತ ಬೆಳ್ಳಿಯ ಬೇಡಿಕೆ ಪೂರೈಸುವಷ್ಟು ಪೂರೈಕೆ ಇಲ್ಲದ್ದರಿಂದಲೇ ಅದರ ಬೆಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚುವಂತಾಗಿದೆ.ಬೆಳ್ಳಿಗೆ ಹೋಲಿಸಿದರೆ ಚಿನ್ನದ ಮೌಲ್ಯ ವರ್ಧನೆ ಪ್ರಮಾಣ ನಿಧಾನವಾಗಿದ್ದರೂ ಹೂಡಿಕೆಗೆ ಚಿನ್ನವೇ ಈಗಲೂ ನೆಚ್ಚಿನ ಲೋಹ. ಜಗತ್ತಿನ ಎರಡು ಪ್ರಬಲ ಕರೆನ್ಸಿಗಳಾದ ಅಮೆರಿಕ ಡಾಲರ್ ಮತ್ತು ಯೂರೋಪ್‌ನ ಯೂರೋಗಳು ಕಳೆದ ಆರು ತಿಂಗಳಲ್ಲಿ ಭಾರಿ ಅತಂತ್ರ ಸ್ಥಿತಿಯಲ್ಲಿವೆ. ಹಲವು ದೊಡ್ಡ ಹೂಡಿಕೆದಾರರು ಹೀಗಾಗಿಯೇ ಚಿನ್ನವೇ ಸುರಕ್ಷಿತ ಹೂಡಿಕೆ ಎಂದು ಭಾವಿಸಿ ಅದನ್ನು ಖರೀದಿಸುತ್ತಿದ್ದಾರೆ. ಅಲ್ಪಾವಧಿಯಲ್ಲಿ ಏರಿಳಿತ ಇದ್ದರೂ, ದೀರ್ಘಾವಧಿಯಲ್ಲಿ ಚಿನ್ನ, ಬೆಳ್ಳಿಯ ಬೆಲೆ ಹೆಚ್ಚುತ್ತ  ಹೋಗುವುದು ನಿಶ್ಚಿತ ಎಂದು ಪರಿಣತರು ಹೇಳುತ್ತಾರೆ.


2011 ಕೂಡ ಹೂಡಿಕೆಗೆ ಉತ್ತಮವಾಗಿರುತ್ತದೆಯೇ ಎಂಬುದು ಜನರ ಪ್ರಶ್ನೆ. ಎಲ್ಲಿ, ಎಷ್ಟು ಹಣ ಹೂಡಬೇಕು ಎಂಬ ಬಗ್ಗೆ ಭಾರಿ ಕುತೂಹಲ ಸಹಜ. ಹೀಗಾಗಿ ಜನಸಾಮಾನ್ಯರ ಮುಂದೆ ಇರುವ ಹೂಡಿಕೆ ಅವಕಾಶಗಳನ್ನು ಇಲ್ಲಿ ತಿಳಿಸಲಾಗಿದೆ. ನಮಗೆಲ್ಲ ಗೊತ್ತಿರುವಂತೆ ಜೀವನ ಬಹಳ ಅನಿಶ್ಚಿತ. ಷೇರು ಮಾರುಕಟ್ಟೆ ಹೇಗೆ ವರ್ತಿಸುತ್ತದೆ, ಬಡ್ಡಿ ದರ ಮತ್ತು ಹಣದುಬ್ಬರ ಪ್ರಮಾಣ ಯಾವಾಗ ಹೆಚ್ಚುತ್ತದೆ ಎಂದು ಯಾರಿಗೂ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ಇಂತಹ ಅನಿಶ್ಚಿತತೆಗಳ ಮಧ್ಯೆಯೂ ನಾವು ನಮ್ಮ ದುಡ್ಡಿಗೆ ಸೂಕ್ತ ವರಮಾನ ತರುವ ಅದಕ್ಕಿಂತಲೂ ಮುಖ್ಯವಾಗಿ ನಮ್ಮ ದುಡ್ಡು ಕಳೆದು ಹೋಗುವುದರಿಂದ ರಕ್ಷಿಸಿಕೊಳ್ಳುವುದಕ್ಕಾಗಿ ನಾವು ಹೂಡಿಕೆ ಕಾರ್ಯತಂತ್ರ ರೂಪಿಸಬೇಕು.ವಿವಿಧ ಅಗತ್ಯಗಳು: ಹೂಡಿಕೆಗಳ ಬಗ್ಗೆ ತಿಳಿಯುವ ಮೊದಲು ನಾವು ಒಂದು ವಿಷಯವನ್ನು ಗಮನಿಸಬೇಕು. ಜಗತ್ತಿನಲ್ಲಿ ಎಲ್ಲರಿಗೂ ಹೊಂದುವಂತಹ ನಿರ್ದಿಷ್ಟ ಹೂಡಿಕೆ ಎಂಬುದಿಲ್ಲ. ಹೂಡಿಕೆದಾರರಿಗೆ ವಿವಿಧ ಉದ್ದೇಶಗಳು, ಅಗತ್ಯಗಳು, ಅಪಾಯ ಎದುರು ಹಾಕಿಕೊಳ್ಳುವ ಗುಣ ಮತ್ತು ಕಾಲ ಮಿತಿಗಳು ಇರುತ್ತವೆ. ಈ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡೇ ಹೂಡಿಕೆಯ ಅವಕಾಶಗಳನ್ನು ತಿಳಿಯಬೇಕು. ಹೂಡಿಕೆಯಲ್ಲಿ ಎದುರಾಗುವ ಅಪಾಯ ಮತ್ತು ಕಾಲ ಮಿತಿಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ.ಅಪಾಯ ಎದುರು ಹಾಕಿಕೊಳ್ಳಲು ಸಿದ್ಧ ಎಂದು ನೀವು ನಿರ್ಧರಿಸಿದ ಕ್ಷಣವೇ ನಿಮ್ಮ ಮುಂದಿರುವ ಹಲವು ಹೂಡಿಕೆ ಅವಕಾಶಗಳನ್ನು ತಡಕಾಡುವುದು ಒಳ್ಳೆಯದು. ಯಾವುದೇ ಅಪಾಯವನ್ನೂ ಮೈಮೇಲೆ ಎಳೆದುಕೊಳ್ಳದೆ ಸುರಕ್ಷಿತವಾಗಿ ಇರಲು ಬಯಸುವವರು ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಇಡುವುದು ಅಥವಾ ಅಂಚೆ ಕಚೇರಿಗಳಲ್ಲಿ ಹಣ ಇಡುವುದು ಲೇಸು. ದೀರ್ಘ ಕಾಲಾವಧಿಯ ತನಕ ಕಾಯುವುದು ಸಾಧ್ಯವಿದ್ದರೆ ಎಂಡೋವ್‌ಮೆಂಟ್ ಜೀವ ವಿಮಾ   ಪಾಲಿಸಿಗಳಲ್ಲಿ ಹಣ ತೊಡಗಿಸುವುದು ಮತ್ತೊಂದು ಆಯ್ಕೆಯಾಗಿರುತ್ತದೆ.ಸ್ವಲ್ಪ ಅಧಿಕ ಅಪಾಯ ಎದುರು ಹಾಕಿಕೊಳ್ಳುವವರಿಗೆ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸುವುದರಿಂದ ಸ್ವಲ್ಪ ಅಧಿಕ ವರಮಾನ ಬರುತ್ತದೆ. ಕಂಪೆನಿಗಳ ಈಕ್ವಿಟಿ ಷೇರುಗಳನ್ನು ಖರೀದಿಸುವುದರಿಂದ ಅತ್ಯಧಿಕ ವರಮಾನ ಬರುತ್ತದೆ ನಿಜ, ಆದರೆ ಅವುಗಳು ಅಷ್ಟೇ ಅಪಾಯವನ್ನೂ ತಂದೊಡ್ಡುತ್ತವೆ.ಮೇಲಿನ ಮೂರೂ ಆಯ್ಕೆಗಳನ್ನು ಗಮನಿಸಿದಾಗ ಅಪಾಯ ಮತ್ತು ವರಮಾನಗಳು ಒಂದಕ್ಕೊಂದು ಹಾಸು ಹೊಕ್ಕಾಗಿರುವಂತೆ ಕಾಣಿಸುತ್ತದೆ. ಹಣವನ್ನು ಎಲ್ಲಿ ಹೂಡಬೇಕು ಎಂಬ ವಿವೇಕಯುತ ಚಿಂತನೆಯಿಂದ ಅನುಕೂಲವಾಗಲಿದೆ. ಬ್ಯಾಂಕ್ ಠೇವಣಿಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳಲ್ಲಿ ತೊಡಗಿಸುವ ಹಣವನ್ನು 50:25:25 ಈ ಅನುಪಾತ ಅನುಸರಿಸಿದರೆ ಹೆಚ್ಚಿನ ಅಪಾಯ ಇರುವುದಿಲ್ಲ.ಆಶಾವಾದಿಗಳಾಗಿರಿ: ಹೂಡಿಕೆದಾರರು ಸದಾ ಆಶಾವಾದಿಗಳಾಗಿರಬೇಕು. ದುರದೃಷ್ಟಕರ ವಿಚಾರವೆಂದರೆ ವೇತನ/ ನಿಶ್ಚಿತ ಆದಾಯ ಗುಂಪಿನ ಹೆಚ್ಚಿನ ಹೂಡಿಕೆದಾರರು ನಿರಾಶಾವಾದಿಗಳು. ನಮ್ಮ ವೇತನ ಬ್ಯಾಂಕ್‌ಗಳಲ್ಲಿ ಪ್ರತಿ ತಿಂಗಳು ಜಮಾ ಆಗುತ್ತದೆ. ನಮ್ಮ ಖರ್ಚಿನ ದುಡ್ಡನ್ನು ಬ್ಯಾಂಕಿನಿಂದ ಪಡೆದು ಉಳಿದ ದುಡ್ಡನ್ನು ಅಲ್ಲೇ ಇಟ್ಟಿರುತ್ತೇವೆ.ಇಂತಹ ಉಳಿತಾಯಕ್ಕೆ ಸಿಗುವ ಬಡ್ಡಿ ಕೇವಲ ಶೇ 3.5ರಷ್ಟು ಮಾತ್ರ. ಉಳಿತಾಯ ಖಾತೆಯಲ್ಲಿ ಹಣ ಉಳಿಸುವ ಮೂಲಕ ನಾವು ನಿಜವಾಗಿಯೂ ಹಣವನ್ನು ಕಳೆದುಕೊಳ್ಳುತ್ತಿದ್ದೇವೆ. ಅದು ಹೇಗೆಂದರೆ ಹಣದುಬ್ಬರವು ಯಾವತ್ತೂ ಉಳಿತಾಯ ಖಾತೆಯ ಬಡ್ಡಿದರಕ್ಕಿಂತ ಹೆಚ್ಚೇ ಇರುತ್ತದೆ. ಸದ್ಯದ ಹಣದುಬ್ಬರದ ಗತಿ ಶೇ 8ರಷ್ಟಿದೆ. ನಮ್ಮ ದುಡ್ಡು ಕಳೆದುಕೊಳ್ಳಬಾರದು ಎಂದಾದರೆ ನಮ್ಮ ದುಡ್ಡಿಗೆ ಬರುವ ಕನಿಷ್ಠ ವರಮಾನ ಹಣದುಬ್ಬರ ಪ್ರಮಾಣಕ್ಕಿಂತ ಅಧಿಕ ಇರಬೇಕು.ಸುರಕ್ಷಿತ ವ್ಯವಸ್ಥೆ: ಯಾವುದೇ ಅಪಾಯ ಮೈಮೇಲೆ ಎಳೆದುಕೊಳ್ಳಲು ಬಯಸದವರು ಪ್ರತಿಷ್ಠಿತ ಬ್ಯಾಂಕುಗಳಲ್ಲಿ ನಿಶ್ಚಿತ ವರಮಾನ ಯೋಜನೆಗಳು ಅಥವಾ ನಿಶ್ಚಿತ ಅವಧಿಯ ಠೇವಣಿಗಳಲ್ಲಿ ಅಥವಾ ಅಂಚೆ ಕಚೇರಿಗಳ ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸುವುದು ಒಳ್ಳೆಯದು.ಆರ್‌ಬಿಐ ಈಚಿನ ದಿನಗಳಲ್ಲಿ ಕೈಗೊಂಡ ಕಠಿಣ ಹಣಕಾಸು ನೀತಿಗಳಿಂದಾಗಿ ಎಲ್ಲಾ ಬ್ಯಾಂಕುಗಳು ಠೇವಣಿ ಮೇಲಿನ ಬಡ್ಡಿದರವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿವೆ. 2ರಿಂದ 3 ವರ್ಷಗಳ ನಿಶ್ಚಿತ ಠೇವಣಿಗೆ ಶೇ 8.55ರಷ್ಟು ಬಡ್ಡಿ (ಹಿರಿಯ ನಾಗರಿಕರಿಗೆ ಶೇ 0.50ರಷ್ಟು ಅಧಿಕ) ಪಡೆಯುವುದು ಸಾಧ್ಯವಿದೆ. ಕೆಲವು ಖಾಸಗಿ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಶೇ 12.50ರಿಂದ 14.50ತನಕವೂ ಬಡ್ಡಿ ನೀಡುತ್ತವೆ. ಆದರೆ ಇಲ್ಲಿ ಅಪಾಯವೂ ಸ್ವಲ್ಪ ಅಧಿಕವೇ ಇರುತ್ತದೆ.ಇಂದು ಅಂಚೆ ಕಚೇರಿಗಳಲ್ಲಿನ ಯೋಜನೆಗಳು ಅಂತಹ ಆಕರ್ಷಣೆ ಉಳಿಸಿಕೊಂಡಿಲ್ಲ. ಎನ್‌ಎಸ್‌ಸಿ, ಪಿಪಿಎಫ್, ತಿಂಗಳ ಆದಾಯ ಯೋಜನೆಗಳು ಶೇ 8ರಷ್ಟು ಬಡ್ಡಿ ತರುತ್ತವೆ. ಇಲ್ಲೂ ಹಿರಿಯ ನಾಗರಿಕರಿಗೆ ಶೇ 9ರಷ್ಟು ಬಡ್ಡಿ ದೊರೆಯುತ್ತದೆ. ಆದರೆ ಇದಕ್ಕೆ 60 ವರ್ಷ ಮೀರಿರಬೇಕು. ದೀರ್ಘಾವಧಿಯ ಮೂಲಸೌಲಭ್ಯ ಬಾಂಡ್‌ಗಳಲ್ಲಿ ತೊಡಗಿಸುವುದು ಮತ್ತೊಂದು ಆಸಕ್ತಿದಾಯಕ ಹೂಡಿಕೆಯ ಕ್ಷೇತ್ರ. ಈ ಹಣಕಾಸು ವರ್ಷದಲ್ಲಿ ಕೆಲವು ಮೂಲಸೌಲಭ್ಯ ಹಣಕಾಸು ಕಂಪೆನಿಗಳು ಇಂತಹ ಬಾಂಡ್‌ಗಳನ್ನು ಹೊರತಂದಿವೆ. ಈ ಯೋಜನೆಯಡಿಯಲ್ಲಿ 10 ವರ್ಷಗಳ ಅವಧಿಗೆ ಬಾಂಡ್‌ಗಳನ್ನು ಖರೀದಿಸಬಹುದು. ಇದಕ್ಕೆ ಶೇ 8.25ರಷ್ಟು ಬಡ್ಡಿ ಬರುತ್ತದೆ.  

ಮೊದಲ 5 ವರ್ಷಗಳಿಗೆ ಈ ಬಾಂಡ್‌ಗಳು ಲಾಕ್ ಆಗಿರುತ್ತವೆ. 5, 6, 7, 8 ಮತ್ತು 9ನೇ ವರ್ಷದ ಅಂತ್ಯಕ್ಕೆ ಮರು ಖರೀದಿ (ಬೈಬ್ಯಾಕ್) ಸೌಲಭ್ಯ ಇರುತ್ತದೆ. ಈ ಬಾಂಡ್‌ಗಳು ಷೇರು ವಿನಿಮಯ ಕೇಂದ್ರಗಳಲ್ಲಿ ನಮೂದಾಗಿರುತ್ತವೆ. ಇವುಗಳನ್ನು ಷೇರುಗಳಂತೆ ಖರೀದಿ ಮಾಡಬಹುದು ಇಲ್ಲವೇ ಮಾರಾಟ ಮಾಡಬಹುದು.ಇಲ್ಲಿ ಕುತೂಹಲದ ವಿಷಯವೆಂದರೆ 20 ಸಾವಿರ ತನಕ ಬಾಂಡ್‌ನಲ್ಲಿ ಹೂಡಿದ ವ್ಯಕ್ತಿ ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿ 6 ಸಾವಿರ ರೂಪಾಯಿಗಳಷ್ಟು ತೆರಿಗೆ ಉಳಿತಾಯ ಮಾಡಬಹುದು. ಹೀಗಾಗಿ ಒಟ್ಟಾರೆ ವರಮಾನ ಲೆಕ್ಕ ಹಾಕಿದರೆ ಶೇ 11.01ರಷ್ಟು ತೆರಿಗೆ ಉಳಿತಾಯ ಮಾಡುವುದು ಈ ಹೂಡಿಕೆಯ ಮೂಲಕ ಸಾಧ್ಯವಿದೆ.ನಿಶ್ಚಿತ ಅವಧಿಯ ಹೂಡಿಕೆಯಲ್ಲಿ ಅವಧಿಗೆ ಮೊದಲೇ ಹಣ ಹಿಂದಕ್ಕೆ ಪಡೆದರೆ ದಂಡ ವಿಧಿಸಲಾಗುತ್ತದೆ. ಅನಿರೀಕ್ಷಿತ ಖರ್ಚುಗಳು ಬರಬಹುದು, ಹೀಗಾಗಿ ಎಸ್‌ಬಿ ಖಾತೆಯಲ್ಲಿ ದುಡ್ಡಿರಲಿ ಎಂಬುದು ನಮ್ಮೆಲ್ಲರ ವಿಚಾರವಾಗಿರುತ್ತದೆ. ಇಂದು ಹೆಚ್ಚಿನ ಬ್ಯಾಂಕುಗಳು ಹೆಚ್ಚುವರಿ ದುಡ್ಡನ್ನು ಸ್ವಯಂಚಾಲಿತವಾಗಿ ನಿಶ್ಚಿತ ಠೇವಣಿಗೆ ವರ್ಗಾಯಿಸುವ (ಸ್ವೀಪಿಂಗ್) ಹೊಸ ಯೋಜನೆ ರೂಪಿಸಿವೆ.ಖಾತೆಯಲ್ಲಿ ಇರುವ ದುಡ್ಡಿಗಿಂತ ಅಧಿಕ ದುಡ್ಡನ್ನು ಹಿಂಪಡೆದರೆ ನಿಶ್ಚಿತ ಠೇವಣಿ ಕೊನೆಗೊಂಡು ಅದರಲ್ಲಿನ ದುಡ್ಡು ಉಳಿತಾಯ ಖಾತೆಗೆ ಮರಳಿ ಬರುತ್ತದೆ. ಉಳಿತಾಯ ಖಾತೆಯ ನಿರ್ವಹಣೆಗೆ ಇದು ಅತ್ಯಂತ ಉಪಯುಕ್ತ. 2011ರ ಮೊದಲ ನಾಲ್ಕೈದು ತಿಂಗಳಲ್ಲಿ  ನಿಶ್ಚಿತ ಠೇವಣಿಗೆ ಅಧಿಕ ಬಡ್ಡಿ ಸಿಗುವ ಲಕ್ಷಣ ಇದೆ.ಪ್ರಗತಿಯ ಹಾದಿ: ತ್ವರಿತವಾಗಿ ನಿಮ್ಮ ದುಡ್ಡಿಗೆ ವರಮಾನ ಬರಬೇಕು ಎಂದು ನೀವು ಭಾವಿಸಿದ್ದೇ ಆದರೆ ಅದರಲ್ಲಿ ಸ್ವಲ್ಪ ಅಪಾಯವೂ ಹೆಚ್ಚಿರುತ್ತದೆ. ಕಂಪೆನಿಗಳು ಈಕ್ವಿಟಿ ಷೇರುಗಳಲ್ಲಿ ಹಣ ತೊಡಗಿಸುವುದು ಇದಕ್ಕಿರುವ ಮುಖ್ಯ ಆಯ್ಕೆ. 2008 ಮತ್ತು 2009ಕ್ಕೆ ಹೋಲಿಸಿದರೆ 2010 ಷೇರು ಮಾರುಕಟ್ಟೆಯಲ್ಲಿ ತೇಜಿ ಕಂಡುಬಂದ ವರ್ಷ. ಜಾಗತಿಕ ಹಣಕಾಸು ಪರಿಸ್ಥಿತಿ ಸುಧಾರಿಸಿದ್ದೇ ಇದಕ್ಕೆ ಕಾರಣ. ಕಳೆದ ವರ್ಷ ಬಿಎಸ್‌ಇ ಸೆನ್ಸೆಕ್ ಶೇ 16ರಷ್ಟು ಗಳಿಕೆ ಕಂಡು  ವರ್ಷಾಂತ್ಯಕ್ಕೆ 20.390ಕ್ಕೆ ಬಂದು ನಿಂತಿತ್ತು. ಎನ್‌ಸ್‌ಇ ನಿಫ್ಟಿ ಸಹ ಶೇ 17ರಷ್ಟು ಗಳಿಕೆ ಕಂಡಿದೆ.ಷೇರು ಮಾರುಕಟ್ಟೆಯ ಏರಿಳಿತದಲ್ಲಿ ಹತ್ತಾರು ಅಂಶಗಳು ಸೇರಿಕೊಂಡಿರುತ್ತವೆ. ಜಾಗತಿಕ ಹೂಡಿಕೆದಾರರಿಗೆ ಭಾರತ ಇಂದು ಅತ್ಯಾಕರ್ಷಕ ಹೂಡಿಕೆ ತಾಣವಾಗಿದೆ. ಕಳೆದ ವರ್ಷ (ಡಿ.23ರ ತನಕ) ಭಾರತೀಯ ಷೇರು ಮಾರುಕಟ್ಟೆಗೆ ್ಙ 2,29,857 ಕೋಟಿಗಳಷ್ಟು ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ರೂಪದಲ್ಲಿ ಹರಿದುಬಂದಿದೆ.2009ಕ್ಕೆ ಹೋಲಿಸಿದರೆ ಇದು ಶೇ 64ರಷ್ಟು ಅಧಿಕ. ಎಲ್‌ಐಸಿ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಮತ್ತು ಶ್ರೀಮಂತ ಉದ್ಯಮಿಗಳನ್ನು ನೋಡಿಕೊಂಡು ಈ ಹೂಡಿಕೆ ಮಾಡಲಾಗಿದೆ. ಭಾರತದ ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳು ದಾಖಲೆಯ ್ಙ 71,114 ಕೋಟಿಗಳನ್ನು ಷೇರುಗಳ ಮೂಲಕ ಸಂಗ್ರಹಿಸಿವೆ. 2007ರಲ್ಲಿ ಷೇರುಗಳ ಮೂಲಕ ್ಙ 45 ಸಾವಿರ ಕೋಟಿ  ಸಂಗ್ರಹವಾಗಿತ್ತು. ಇಲ್ಲಿಯ ತನಕ ಅದುವೇ ದಾಖಲೆಯಾಗಿತ್ತು.ಷೇರು ಮಾರುಕಟ್ಟೆಯ ಏರುಗತಿ ಮುಮದುವರಿಯಲಿದೆಯೇ ಎಂಬುದೀಗ ಬಹು ದೊಡ್ಡ ಪ್ರಶ್ನೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರಮುಖ ತೊಂದರೆಗಳೇನೂ ಕಾಣಿಸಿಕೊಳ್ಳದಿದ್ದರೆ ಷೇರು ಮಾರುಕಟ್ಟೆ ಮುಂದೆಯೂ ಏರುಗತಿಯಲ್ಲೇ ಸಾಗಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ. ಕೆಲವು ಹಗರಣಗಳ ಹೊರತಾಗಿಯೂ ಭಾರತದ ಪ್ರಗತಿಯನ್ನು ಹೂಡಿಕೆದಾರರು ಗಮನಿಸಿದ್ದಾರೆ. ಚೀನಾ ಬಿಟ್ಟರೆ ಶೇ 9ರ ದರದಲ್ಲಿ ಜಿಡಿಪಿ ವೃದ್ಧಿಯಾಗುತ್ತಿರುವ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಶಕ್ತಿ ಭಾರತ ಎಂಬುದು ಗೊತ್ತಾಗಿದೆ.ಹೀಗಾಗಿಯೇ ಇಲ್ಲಿ ಹೂಡಿಕೆ ಮಾಡಲು ಉತ್ಸಾಹ ತೋರಿಸಲಾಗುತ್ತಿದೆ. ಜತೆಗೆ ಕೈಗಾರಿಕಾ ಬೆಳವಣಿಗೆ, ರಫ್ತು, ಉದ್ಯೋಗ ಸೃಷ್ಟಿ, ಉಳಿತಾಯದಂತಹ ವಿಚಾರಗಳಲ್ಲೂ ಭಾರತದ ಸಾಧನೆ ಗಣನೀಯವಾಗಿದೆ. ಇದೆಲ್ಲ ಷೇರು ಮಾರುಕಟ್ಟೆ ತೇಜಿಯಾಗಲು ಕಾರಣಗಳಾಗುತ್ತವೆ.ಹೀಗಿದ್ದರೂ ಷೇರುಗಳಿಗೆ ಹಣ ಹೂಡುವುದು ಬಹಳ ಅಪಾಯದ ಸಂಗತಿ. ಕೆಲವು ಬಾರಿ ಕೈತುಂಬ ದುಡ್ಡು ಬಂದುಬಿಡಬಹುದು, ಮತ್ತೆ ಕೆಲವೊಮ್ಮೆ ಸಂಪೂರ್ಣ ನಷ್ಟವೂ ಆಗಬಹುದು. ಹೀಗಾಗಿ ಷೇರಿನಲ್ಲಿ ಹಣ ತೊಡಗಿಸುವಾಗ ಕೆಲವು ಮೂಲಭೂತ ನಿಯಮಗಳನ್ನು ಪಾಲಿಸಬೇಕು.‘ಬೈ ಟಿಪ್ಸ್’ಗೆ ಮರುಳಾಗಿ ಮಾರುಕಟ್ಟೆಯಲ್ಲಿ ಏನಾಗಬಹುದೆಂದು ಊಹಿಸಲು ಹೋಗಬಾರದು. 3ರಿಂದ 5 ವರ್ಷಗಳ ಅವಧಿಯ ದೀರ್ಘಾವಧಿ ಷೇರುಗಳ ಮೇಲಷ್ಟೇ ಹಣ ತೊಡಗಿಸಿ. ಷೇರು ಮಾರುಕಟ್ಟೆ ಯಾವತ್ತು ಏರಬಹುದು ಎಂಬ ಲೆಕ್ಕಾಚಾರ ಮಾಡುವಾಗ ತಾಳ್ಮೆ ಇರಬೇಕು. ಷೇರಲ್ಲಿ ಹಣ ತೊಡಗಿಸುವಾಗ ಬಹಳ ತಯಾರಿಗಳನ್ನು ಮಾಡಿಕೊಂಡಿರಬೇಕು. ಕೂಲಂಕಷ ವಿಚಾರ ಮಾಡಬೇಕು.ಪ್ರಗತಿಯ ಲಕ್ಷಣ ತೋರಿಸುವ ಕಂಪೆನಿಗಳ ಷೇರುಗಳನ್ನು ಮಾತ್ರ ಕೊಳ್ಳಬೇಕು. ಒಂದು ಹಂತಕ್ಕೆ ಲಾಭ ಬಂತು ಎಂಬ ಭಾವನೆ ಬಂದ ತಕ್ಷಣ ಷೇರುಗಳನ್ನು ಮಾರಾಟ ಮಾಡುವ ಮನೋಭಾವ ಬೆಳೆಸಬೇಕು. ಇಲ್ಲವಾದರೆ ಅತಿಯಾಸೆ ಗತಿಕೇಡು ಎಂಬಂತಾದೀತು.ಮ್ಯೂಚುವಲ್ ಫಂಡ್: ಹೂಡಿಕೆಗೆ ಇರುವ ಮತ್ತೊಂದು ಅವಕಾಶ ಎಂದರೆ ಮ್ಯೂಚುವಲ್ ಫಂಡ್‌ಗಳು. ಯೋಜನೆಯೊಂದರ ಯೂನಿಟ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಪೂರ್ವ ನಿರ್ಧರಿತ ಯೋಜನೆಯಂತೆ ಈ ದುಡ್ಡನ್ನು ವಿನಿಯೋಗಿಸುವುದು ಇದರ ಲಕ್ಷಣ. ಮ್ಯೂಚುವಲ್ ಫಂಡ್‌ನ ನಿಧಿ ನಿರ್ವಹಣಾ ಕಂಪೆನಿಯಲ್ಲಿ ಪರಿಣತರ ದಂಡೇ ಇರುತ್ತದೆ. ಎಲ್ಲಿ ಮತ್ತು ಹೇಗೆ ಹಣ ತೊಡಗಿಸಬೇಕು ಎಂಬುದು ಅವರು ನಿರ್ಧರಿಸುತ್ತಾರೆ. ವ್ಯಕ್ತಿಗಳು ನೇರವಾಗಿ ಹೂಡಿಕೆ ಮಾಡುವುದಕ್ಕಿಂತ ಮ್ಯೂಚುವಲ್ ಫಂಡ್‌ಗಳು ಸುರಕ್ಷಿತ.ಗಿಫ್ಟ್ ಫಂಡ್, ಡೆಬ್ಟ್ ಫಂಡ್, ಬ್ಯಾಲೆನ್ಸ್‌ಡ್ ಫಂಡ್, ಈಕ್ವಿಟಿ ಫಂಡ್‌ಗಳೆಂಬ ನಾಲ್ಕು ವಿಭಾಗಗಳನ್ನು ಇಲ್ಲಿ ಮಾಡಲಾಗುತ್ತದೆ. ಮೊದಲ ಎರಡು ಸುರಕ್ಷಿತ ಹೂಡಿಕೆಗಳಾಗಿದ್ದು, ಇವುಗಳು ನೀಡುವ ವರಮಾನ ಕಡಿಮೆ. ಬ್ಯಾಲೆನ್ಸ್‌ಡ್ ಫಂಡ್‌ನಲ್ಲಿ ಡೆಟ್ ಮತ್ತು ಈಕ್ವಿಟಿ ಷೇರುಗಳಲ್ಲಿ ಸಮನಾಗಿ ಹಣ ವಿನಿಯೋಗಿಸಲಾಗಿರುತ್ತದೆ. ಈಕ್ವಿಟಿ ನಿಧಿಗಳು ಲಿಸ್ಟೆಡ್ ಕಂಪೆನಿಗಳ ಈಕ್ವಿಟಿ ಷೇರುಗಳನ್ನು ಮಾತ್ರ ಪರಿಗಣಿಸುತ್ತವೆ. ಇಲ್ಲಿ ಕೂಡ ಅಪಾಯ ಇದ್ದೇ ಇದೆ. ಇಲ್ಲಿ ಇನ್ನಷ್ಟು ಹೆಚ್ಚು ಅಧ್ಯಯನ, ಪರಿಶೀಲನೆ ನಡೆಸಿಯೇ ಹಣ ತೊಡಗಿಸಬೇಕಾಗುತ್ತದೆ.ಹೊಸ ವರ್ಷದಲ್ಲಿ ಹೂಡಿಕೆ ಮಾಡುವುದಕ್ಕೆ ನಿಮ್ಮ ಮುಂದೆ ಹತ್ತಾರು ಅವಕಾಶಗಳಿವೆ. ದುಡ್ಡನ್ನು ಕೇವಲ ಉಳಿತಾಯ ಖಾತೆಗಳಲ್ಲಿ ಇಟ್ಟು ತೆಪ್ಪಗೆ ಕುಳಿತುಕೊಳ್ಳುವುದು ಖಂಡಿತ ಬುದ್ಧಿವಂತಿಕೆಯಲ್ಲ. ಬಡ್ಡಿದರ, ಮಾರುಕಟ್ಟೆಯಲ್ಲಿನ ಸ್ಥಿತಿಗತಿಗಳನ್ನು ತಿಳಿದುಕೊಂಡು ನೀವು ಈಗಲೇ ಸೂಕ್ತ ಹೂಡಿಕೆಯ ನಿರ್ಧಾರ ಕೈಗೊಳ್ಳಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry