ಹತ್ತರಲ್ಲಿ ಹನ್ನೊಂದನೆಯವರು

7

ಹತ್ತರಲ್ಲಿ ಹನ್ನೊಂದನೆಯವರು

Published:
Updated:

ಅಂದು ಭಾನುವಾರ. ಸ್ನೇಹಿತನ ಮನೆಗೆ ತ್ಯಾಗರಾಜನಗರದ ಮುಖ್ಯ ರಸ್ತೆಯಲ್ಲಿ ನಡೆದು ಹೋಗುತ್ತಿದ್ದೆ. ರಸ್ತೆಯಲ್ಲಿ ಇದ್ದಕ್ಕಿದ್ದಂತೆ 13 ವರ್ಷದ ಹುಡುಗ ರಸ್ತೆಯಲ್ಲಿ ಕುಳಿತು ಅಯ್ಯೋ, ಅಮ್ಮಾ ನೋವು ಎಂದು ಕೂಗಿದ.ಹೋಗಿ ನೋಡಿದಾಗ ಬಾಲಕನ ಕಾಲಿನಿಂದ ರಕ್ತ ಸುರಿಯುತ್ತಿತ್ತು. ಆಗಷ್ಟೇ ದ್ವಿಚಕ್ರ ವಾಹನ ಸವಾರನೊಬ್ಬ ಆ ಹುಡುಗನಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಕೆಲವೇ ನಿಮಿಷಗಳಲ್ಲಿ ಅಲ್ಲಿ ಜನ ಜಮಾಯಿಸಿದರು.ಆಗ ಅಲ್ಲಿಗೆ ಒಬ್ಬ ಆಟೊ ಡ್ರೈವರ್ ಬಂದ. ಬಾಲಕನ ಸಮೀಪ ಕುಳಿತು ತನ್ನ ಕರವಸ್ತ್ರದಿಂದ ಗಾಯ ಒರೆಸಿ, `ಯಾರಾದರೂ ಬೇಗ ಹೋಗಿ ನೀರು ತನ್ನಿ~ ಎಂದ. ನಾನು ತಕ್ಷಣ ಅಲ್ಲಿಯೇ ಇದ್ದ ಬೇಕರಿಯಿಂದ ಒಂದು ಲೋಟ ನೀರು ತಂದು ಕೊಟ್ಟೆ. ಆತ ಬಾಲಕನಿಗೆ ನೀರು ಕುಡಿಸಿ `ಏನೂ ಭಯ ಪಡಬೇಡ~ ಎಂದು ಧೈರ್ಯ ತುಂಬಿದ. ಕೆಲವರು ಅವನನ್ನು ರಸ್ತೆಯ ಬದಿಗೆ ಕೂರಿಸಿದರು.ನಂತರ ಆ ಆಟೊ ಡ್ರೈವರ್ `ಸಾರ್, ಹುಡುಗನನ್ನು ಆಟೊದಲ್ಲಿ ಕೂರಿಸಲು ಸ್ವಲ್ಪ ಸಹಾಯ ಮಾಡಿ. ಹತ್ತಿರದ ಆಸ್ಪತ್ರೆಗೆ ಹೋಗಬೇಕು~ ಎಂದರು. ಮರುಮಾತಿಗೆ ಕಾಯದೆ ಆಟೊದಲ್ಲಿ ಹುಡುಗರನ್ನು ಕೂರಿಸಿದರು. ಅಲ್ಲಿಂದ ಬನಶಂಕರಿ ಎರಡನೇ ಹಂತದ ಆಸ್ಪತ್ರೆಗೆ ಕರೆತಂದರು. ತಕ್ಷಣ ಡಾಕ್ಟರ್ ಮತ್ತು ಒಬ್ಬ ನರ್ಸ್ ಬಂದು ಹುಡುಗನನ್ನು ಪರಿಶೀಲಿಸಿ ನಮ್ಮಿಬ್ಬರನ್ನು ಹೊರಗಿರಲು ಹೇಳಿದರು.ನಾನು ಆಟೊ ಡ್ರೈವರ್ ಕುರಿತು `ನಿಮ್ಮಿಂದ ಆ ಹುಡುಗನಿಗೆ ಉಪಕಾರವಾಯಿತು. ನಿಮ್ಮ ಹೆಸರೇನು?~ ಎಂದು ಕೇಳಿದೆ. ಅದಕ್ಕೆ ಆತ `ನನ್ನ ಹೆಸರು ಆಟೊ ರಾಜ ಎಂದು ಹೇಳಿದರು. ಮತ್ತೊಮ್ಮೆ ಕೇಳಿದೆ. ಅದಕ್ಕೆ ಆತ ಹುಮ್ಮಸ್ಸಿನಿಂದ `ಸಾರ್, ನನ್ನ ಹೆಸರು ಕನ್ನಡಿಗ ಆಟೊ ರಾಜ,  ಚಾಮರಾಜಪೇಟೆಯ ಗುಟ್ಟಹಳ್ಳಿಯಲ್ಲಿ ವಾಸವಾಗಿರುವೆ~ ಎನ್ನುತ್ತ ಇನ್ನಷ್ಟು ವಿವರ ಹೇಳಿದರು.`ನನ್ನದೇ ಆಟೊ. ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಓಡಿಸುತ್ತಿದ್ದೇನೆ. ಹುಡುಗನಿಗೆ ಚಿಕಿತ್ಸೆ ಕೊಡಲು ಇನ್ನೂ ಸ್ವಲ್ಪ ಸಮಯವಾಗುತ್ತದೆ. ಅಷ್ಟರಲ್ಲಿ ಕಾಫಿ ಅಥವಾ ಟೀ ಕುಡಿದು ಬರೋಣ ಬನ್ನಿ~ ಎಂದು ಹೊರನಡೆದರು. ಆಸ್ಪತ್ರೆಯ ಆಚೆ ಬಂದು ಆಟೊ ನೋಡಿ, ಸ್ತಬ್ಧನಾದೆ.ಆಟೊ ಮುಂಭಾಗದಲ್ಲಿ ಕನ್ನಡ ಬಾವುಟ, ಕನ್ನಡ ಚಿತ್ರರಂಗದ ಮೇರುನಟರ, ಹಿರಿಯ ಕವಿಗಳ ಹಾಗೂ ಹೋರಾಟಗಾರರ ಭಾವ ಚಿತ್ರಗಳು. ಆಟೊ ಸುತ್ತಲೂ ಕನ್ನಡ ಚಿತ್ರರಂಗದ ನಟರ ಭಾವ ಚಿತ್ರಗಳು ಹಾಗೂ ಸಾಕಷ್ಟು ಕನ್ನಡ ಪದಗಳಿರುವುದನ್ನು ಗಮನಿಸಿದೆ.ಆಗ ಅವರು ನಗುತ್ತಾ `ನಾನು ಕನ್ನಡ ಅಭಿಮಾನಿ. ಕನ್ನಡಿಗನಾಗಿ ಹುಟ್ಟಿದ ಮೇಲೆ ಇಷ್ಟೂ ಮಾಡದಿದ್ದರೆ ಹೇಗೆ ಸಾರ್? ಆಟೊದಲ್ಲಿ ಸುಮಾರು ನಾಲ್ಕು ಸಾವಿರ ಕನ್ನಡ ಪದಗಳಿವೆ ಸಾರ್~ ಎಂದು ಖುಷಿಯಾಗಿ ಹೇಳಿದರು.ಆಟೊ ಸೀಟಿನ ಹಿಂಭಾಗದಲ್ಲಿ ಜೋಡಿಸಿಟ್ಟ ಪಾರಿತೋಷಕ ಹಾಗೂ ಪದಕಗಳನ್ನು ನೋಡಿದೆ. `ಇದೇನು ಸಾರ್. ಈ ಪ್ರಶಸ್ತಿಗಳನ್ನು ಮನೆಯಲ್ಲಿ ಇಡುವುದಿಲ್ಲವೆ ಎಂದು ಕೇಳಿದೆ. `ಮನೆಯಲ್ಲಿದ್ದರೆ ಬರೀ ಮೂರು ಜನ ನೋಡ್ತಾರೆ. ಆಟೊದಲ್ಲಿದ್ದರೆ ನೂರು ಜನ ನೋಡ್ತಾರೆ. ಆಗ ಅವರಿಗೂ ಕನ್ನಡದ ಮೇಲೆ ಅಭಿಮಾನ ಮೂಡುವುದಿಲ್ಲವೇ?~ ಎಂದು ಮರುಪ್ರಶ್ನಿಸಿದರು.ವಿವಿಧ ಸಂಘ ಸಂಸ್ಥೆಗಳು ಅವರ ಕನ್ನಡ ಪ್ರೀತಿಗೆ ಮೆಚ್ಚಿಕೊಂಡಿವೆ ಹಾಗೂ ಶಿಸ್ತು ಪ್ರಾಮಾಣಿಕತೆಯಿಂದ ಆಟೋ ಓಡಿಸುತ್ತಿದ್ದೀವಿ ಎಂದರು. ಆಸ್ಪತ್ರೆಗೆ ತಿರುಗಿ ಬಂದಾಗ, ಅಲ್ಲಿದ್ದ ಸಿಬ್ಬಂದಿ, ಹಣ ಕಟ್ಟಿ, ಹುಡುಗನನ್ನು ಕರೆದುಕೊಂಡು ಹೋಗಲು ತಿಳಿಸಿದರು.  ಆಟೊ ಡ್ರೈವರ್ ತಾನೇ ಕ್ಯಾಷ್ ಕೌಂಟರ್ ಬಳಿ ಹೋಗಿ ಹಣ ಕಟ್ಟಿ ರಸೀದಿ ಪಡೆದರು. ಹುಡುಗ ಈಗ ಚೇತರಿಸಿಕೊಂಡಿದ್ದು, ತನ್ನ ಮನೆ ತೋರಿಸುವುದಾಗಿ ಹೇಳಿದ.  ಇಬ್ಬರೂ ಅವನನ್ನು ಮನೆಗೆ ಕರೆದೊಯ್ದೆವು. ಗಾಬರಿಗೊಂಡಿದ್ದ ಹುಡುಗನ ತಂದೆತಾಯಿ ಮಗನನ್ನು ನೋಡಿ ತೋಷಗೊಂಡರು.`ನಿಮಗೆ ಲೇಟಾಯಿತು... ಬನ್ನಿ ಸಾರ್, ನಿಮ್ಮನ್ನು ಮನೆಗೆ ಬಿಡುತ್ತೇನೆ~ ಎಂದರು. `ಪರವಾಗಿಲ್ಲ ಬಸ್ಸಿಗೆ ಹೋಗುತ್ತೇನೆ ಎಂದೆ.  `ನೀವು ಆ ಹುಡುಗನ ತಂದೆ- ತಾಯಿ ಹತ್ತಿರ ಆಸ್ಪತ್ರೆಯಲ್ಲಿ ಖರ್ಚು ಮಾಡಿದ್ದ ದುಡ್ಡನ್ನು ವಾಪಸು ಏಕೆ ಪಡೆಯಲಿಲ್ಲ?~ ಎಂದು ಕೇಳಿದೆ.  `ಸಾರ್. ಗಾಯಗೊಂಡವರಿಗೆ, ಅನಾಥರಿಗೆ ಹಾಗೂ ಹೆರಿಗೆ ನೋವಿನಿಂದ ನರಳುತ್ತಿರುವವರಿಗೆ ಉಚಿತ ಸೇವೆ ನೀಡಲು ನಾನು ಮತ್ತು ನನ್ನ ಆಟೊ ಸದಾ ಸಿದ್ಧ~ ಎಂದರು. `ನಿಮ್ಮ ಜೀವನ ನಿರ್ವಹಣೆ ಹೇಗೆ? ಎಂದು ಮತ್ತೆ ಕೆದಕಿ ಕೇಳಿದೆ.

`ಸ್ವಾಮಿ, ಕೊಡುವವನು ದೇವರು, ಇಸ್ಕೊಳ್ಳುವನು ನಾನು~ ಎಂದರು.`ನಿಮ್ಮಂತಹವರು ಬಲು ಅಪರೂಪ. ನಿಮ್ಮದೊಂದು ಫೋಟೊ ತೆಗೆದುಕೊಳ್ಳಲೇ?~ ಎಂದೆ. `ಅದಕ್ಕೇನಂತೆ~ ಎಂದು ಹೇಳಿ ಆಟೊ ಮುಂದೆ ಕೈಕಟ್ಟಿ ನಗುತ್ತಾ ನಿಂತರು. ಅವರ ಫೋಟೊ ತೆಗೆದೆ.ಜೊತೆಗೆ ಅಪರೂಪದ ಆಟೊ ಚಿತ್ರವನ್ನೂ ಕ್ಲಿಕ್ಕಿಸಿದೆ. ನಂತರ ಆಟೊ ಡ್ರೈವರ್ ರಾಜ `ಸಾರ್, ನಿಮಗೆ ವಂದನೆಗಳು. ಬರುತ್ತೇವೆ~ ಎಂದು ಹೇಳಿ ಹೊರಟುಹೋದರು.

 ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವದ ಆಟೊ ರಾಜ ನಿಜವಾಗಿಯೂ ಒಬ್ಬ `ಮಾದರಿ ಆಟೊ ಡ್ರೈವರ್~.ಆಟೊ ಕುರಿತ ನಿಮ್ಮದೂ ಇಂಥ ಅನುಭವ ಇದ್ದರೆ ಕಳುಹಿಸಬಹುದು. ಪೂರಕ ಛಾಯಾಚಿತ್ರಗಳಿದ್ದರೆ ಬರಹದ ಜತೆಗಿರಿಸಿ.

ಇ-ಮೇಲ್:
metropv@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry