ಹತ್ತಿಕುಣಿ ಜಲಾಶಯ-ಶೇಂಗಾ ಬೆಳೆಗೂ ನೀರು

7

ಹತ್ತಿಕುಣಿ ಜಲಾಶಯ-ಶೇಂಗಾ ಬೆಳೆಗೂ ನೀರು

Published:
Updated:

ಯಾದಗಿರಿ: ಬರದ ದವಡೆಗೆ ಸಿಲುಕಿರುವ ರೈತರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಲೇ ಇದೆ. ಬಿತ್ತನೆಗೆ ಬೀಜ, ಗೊಬ್ಬರ ಸಿದ್ಧವಾದಾಗ ಮಳೆಯ ಅಪಕೃಪೆ ಉಂಟಾದರೆ, ಮಳೆ ಸುರಿದಾಗ ಬೀಜದ ಕೊರತೆ ಎದುರಾಗುತ್ತಿದೆ.ಇದೀಗ ಶೇಂಗಾ ಬೆಳೆಯಲು ಮುಂದಾಗಿರುವ ರೈತರಿಗೆ ನೀರಿನ ಅವಶ್ಯಕತೆ ಇದ್ದು, ಹತ್ತಿಕುಣಿ ಜಲಾಶಯ ವ್ಯಾಪ್ತಿಯ ರೈತರಿಗೆ ಶೇಂಗಾ ಬೆಳೆಗೂ ನೀರು ಹರಿಸುವ ನಿರ್ಧಾರವನ್ನು ಗುಲ್ಬರ್ಗ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ನಿರ್ಧರಿಸಿದೆ.ಹತ್ತಿಕುಣಿ ಜಲಾಶಯದ ವ್ಯಾಪ್ತಿಯ ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಕಟಗಿ ಶಹಾಪುರ ಗ್ರಾಮಗಳ ರೈತರು ಇತ್ತೀಚೆಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಶೇಂಗಾ ಬೆಳೆಯಲು ಜಲಾಶಯದಿಂದ ನೀರು ಬಿಡುವಂತೆ ಒತ್ತಾಯಿಸಿದ್ದರು. ಶೇಂಗಾ ಬೆಳೆಯುವ ಸುಮಾರು 3-4 ಸಾವಿರ ಎಕರೆ ಜಮೀನಿಗೆ ನೀರು ಒದಗಿಸಬೇಕು. ರೈತರ ಬವಣೆಗೆ ಸ್ಪಂದಿಸುವಂತೆ ಮನವಿ ಮಾಡಿದ್ದರು.ಮನವಿಗೆ ಸ್ಪಂದಿಸಿದ ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ನೇತೃತ್ವದಲ್ಲಿ ಅ.4 ರಂದು ಕಾಡಾ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ, ಶೇಂಗಾ ಬೆಳೆಗೂ ನೀರು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಎರಡನೇ ವರ್ಷ ಶೇಂಗಾ ಬೆಳೆಗೆ ನೀರು:
ಹತ್ತಿಕುಣಿ ಜಲಾಶಯದಿಂದ ಶೇಂಗಾ ಬೆಳೆಗಾರರ ಅನುಕೂಲಕ್ಕಾಗಿ ಸತತ ಎರಡನೇ ವರ್ಷವೂ ನೀರು ಹರಿಸಲು ಕಾಡಾ ಮುಂದಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ತೂಬಿಗೆ ಪೂಜೆ ಸಲ್ಲಿಸಿ ನೀರು ಬಿಟ್ಟಿದ್ದರು.ಮಟ್ಟೆಣ್ಣವರ ನೇತೃತ್ವದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಕ ಸಂಘದ ಪದಾಧಿಕಾರಿಗಳು, ರೈತರು ಸೇರಿ ಕಾಲುವೆಯ ಹೂಳು ತೆಗೆಯುವ ಮೂಲಕ ರೈತರ ಹೊಲಗಳಿಗೆ ನೀರು ಹರಿಸಲು ಅನುವು ಮಾಡಿಕೊಟ್ಟಿದ್ದರು. ಇದೀಗ ಎರಡನೇ ವರ್ಷವೂ ಶೇಂಗಾ ಬೆಳೆ ನೀರು ಒದಗಿಸುತ್ತಿರುವುದರಿಂದ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದು, ಉತ್ತಮ ಬೆಳೆ ತೆಗೆದುಕೊಳ್ಳುವ ವಿಶ್ವಾಸದಲ್ಲಿದ್ದಾರೆ.ಇದೀಗ ಯಾದಗಿರಿ ತಾಲ್ಲೂಕಿನ ವಿವಿಧೆಡೆ ಮಳೆಯಾಗಿದ್ದು, ಭೂಮಿ ಹದವಾಗಿದೆ. ಈಗಲೇ ಶೇಂಗಾ ಬಿತ್ತನೆಗೆ ಸೂಕ್ತ ಎಂದು ಪರಿಗಣಿಸಿರುವ ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಬೀಜದ ಕೊರತೆಯ ಮಧ್ಯೆಯೂ ಬಿತ್ತನೆ ಆರಂಭಿಸುವ ಸಿದ್ಧತೆಯಲ್ಲಿದ್ದಾರೆ. ಇದೀಗ ಹತ್ತಿಕುಣಿ ಜಲಾಶಯದಿಂದ ನೀರು ಒದಗಿಸಲಾಗುತ್ತಿದ್ದು, ರೈತರ ಸಂತಸ ಇಮ್ಮಡಿಸಿದೆ.ಈಗ ನೀರ ಬಿಟ್ರ ಜೀವ ಹಿಡದ್ಹಂಗ:

“ಈ ವರ್ಷ ರೈತರ ತ್ರಾಸ ಕೇಳೂದ ಬ್ಯಾಡ್ರಿ. ಹೆಸರು ಅಷ್ಟಕ್ಕಷ್ಟ ಆತು. ಈ ಬರಿ ಹತ್ತಿಕುಣಿ ಡ್ಯಾಮ್‌ಲಿಂದ ಬತ್ತಕ್ಕ ನೀರ ಬಿಟ್ಟಿದ್ರು. ಬತ್ತ ಬೆಳ್ಯಾವ್ರ ಪಾರ ಆದ್ರು. ಈಗ ನಾವು ಶೇಂಗಾ ಬಿತ್ತಬೇಕಾಗೈತಿ. ಸದ್ಯೆಕ ನೀರ ಬಿಟ್ರ ರೈತರ ಜೀವ ಹಿಡದ್ಹಂಗ ನೋಡ್ರಿ” ಎಂದು ರೈತರಾದ ತಿಪ್ಪಣ್ಣ, ಸಾಬಣ್ಣ ಹೇಳುತ್ತಾರೆ.“ಹತ್ತಿಕುಣಿ ಡ್ಯಾಮ್‌ನ್ಯಾಗ ನೀರ ಐತಿ. ಆದ್ರ ಕೆಲಸ ಮಾಡೂದ ಐತಿ ಅಂತ ನೀರ ಬಿಡಾಕ ಆಗೂದುಲ್ಲ ಅಂತ ಮಂದಿ ಅನ್ಲಾಕತ್ತಾರ. ನಮಗ ಈಗ ನೀರ ಬೇಕ್ರಿ. ಅಂದ್ರ ಶೇಂಗಾ ಬೆಳಿ ಬೆಳಕೋತೇವಿ. ಹ್ವಾದ ಬರೆ ಶೇಂಗಾಕ ಛೋಲೋ ರೇಟ್ ಸಿಕ್ಕೈತಿ. ಈ ಬರೆನೂ ಹಂಗ ಆದ್ರ ನಮ್ಮ ತ್ರಾಸ ಒಂದೀಟ ಕಡಿಮಿ ಆಕ್ಕೇತಿ” ಎನ್ನುತ್ತಾರೆ.ಕಳೆದ ವರ್ಷ ಶೇಂಗಾ ಬಿತ್ತನೆಗಾಗಿ ಹತ್ತಿಕುಣಿ ಜಲಾಶಯದ ಕಾಲುವೆಗೆ ನೀರು ಬಿಟ್ಟಿದ್ದರಿಂದ ಸುಮಾರು 2,145 ಹೆಕ್ಟೇರ್ ಜಮೀನಿಗೆ ನೀರಾವರಿ ಸೌಕರ್ಯ ಒದಗಿಸಲಾಗಿತ್ತು. ಈ ಬಾರಿಯೂ ಅಷ್ಟೇ ಪ್ರಮಾಣದ ಜಮೀನಿನಲ್ಲಿ ಶೇಂಗಾ ಬಿತ್ತನೆಗೆ ರೈತರು ಮುಂದಾಗಿದ್ದು, ನೀರು ಬಿಡುವ ಬಗ್ಗೆ ಕಾಡಾ ನಿರ್ಧಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.ರೈತರಿಗೆ ಸ್ಪಂದನೆ: ತಾಲ್ಲೂಕಿನ ಹತ್ತಿಕುಣಿ ಜಲಾಶಯದಿಂದ ಶೇಂಗಾ ಬೆಳೆಗೆ ನೀರು ಬಿಡುವ ಕುರಿತು ಹತ್ತಿಕುಣಿ , ಯಡ್ಡಳ್ಳಿ, ಬಂದಳ್ಳಿ, ಹೊನಗೆರಾ, ಕಟಗಿ ಶಹಾಪುರ ಗ್ರಾಮದ ರೈತರು ಕಳೆದ ಒಂದು ವಾರದಿಂದ ಒತ್ತಾಯಿಸುತ್ತಿದ್ದು, ರೈತರ ಕಷ್ಟಗಳಿಗೆ ಸ್ಪಂದಿಸುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಬತ್ತಕ್ಕೆ ಹರಿಸಲಾಗುತ್ತಿರುವ ನೀರನ್ನು ಶೇಂಗಾ ಬೆಳೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಗುಲ್ಬರ್ಗ ಕಾಡಾ ಅಧ್ಯಕ್ಷ ಗಿರೀಶ ಮಟ್ಟೆಣ್ಣವರ ತಿಳಿಸಿದ್ದಾರೆ.ಆ. 12 ರಂದು ನಡೆದ ನೀರಾವರಿ ಸಭೆಯಲ್ಲಿ ತಹಸೀಲ್ದಾರರು, ಕಾಡಾ ಹಿರಿಯ ಅಧಿಕಾರಿಗಳು ಮತ್ತು ನೀರು ಬಳಕೆದಾರರ ಸಮ್ಮುಖದಲ್ಲಿ ಪ್ರಮುಖ ಬೆಳೆಗೆ ನೀರು ಬಿಡುವ ತೀರ್ಮಾನ ಕೈಗೊಂಡು, ಆ. 17 ರಿಂದ ಆರನೇ ಮುಖ್ಯ ಕಾಲುವೆಯವರೆಗೆ ನೀರು ಬಿಡಲಾಗುತ್ತಿದೆ.ಕಳೆದ ಬಾರಿ ಶೇಂಗಾ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿದ್ದು, ಈ ಬಾರಿಯೂ ಒಳ್ಳೆಯ ಬೆಲೆ ಬರುವ ನಿರೀಕ್ಷೆ ಇರುವುದರಿಂದ ರೈತರು ಶೇಂಗಾ ಬೆಳೆಯಲು ಉತ್ಸುಕರಾಗಿದ್ದಾರೆ. ರೈತರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಹತ್ತಿಕುಣಿ ಜಲಾಶಯದ ನೀರನ್ನು ಶೇಂಗಾ ಬೆಳೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.ಈ ಕುರಿತು ಅ. 4 ರಂದು ಕಾಡಾ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೇಂಗಾ ಬೆಳೆಗೆ ನೀರು ಹರಿಸಲು ಸೂಚಿಸಲಾಗಿದೆ. ಯಾದಗಿರಿ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ರೈತರು ನೀರಿನ ಸದುಪಯೋಗ ಪಡೆಯಬೇಕು ಎಂದು ಮಟ್ಟೆಣ್ಣವರ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry