ಹತ್ತಿ ಬೀಜಕ್ಕಾಗಿ ರೈತರಿಂದ ಕಚೇರಿಗೆ ಮುತ್ತಿಗೆ

ಭಾನುವಾರ, ಜೂಲೈ 21, 2019
23 °C

ಹತ್ತಿ ಬೀಜಕ್ಕಾಗಿ ರೈತರಿಂದ ಕಚೇರಿಗೆ ಮುತ್ತಿಗೆ

Published:
Updated:

ಯಲ್ಲಾಪುರ: ಹತ್ತಿ ಬೀಜ ಪೂರೈಸುವಂತೆ ಆಗ್ರಹಿಸಿ  ಕಿರವತ್ತಿ ಭಾಗದ ನೂರಾರು ರೈತರು   ಗುರುವಾರ ಬೆಳಿಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಕಿರವತ್ತಿಯಿಂದ ಲಾರಿಗಳಲ್ಲಿ ಆಗಮಿಸಿ ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರನ್ನು ಒಳ ಪ್ರವೇಶಿಸದಂತೆ ಗೇಟಿನಲ್ಲೇ ಪೊಲೀಸರು ತಡೆದರು.ಶಾಂತಿಯುತ ಪ್ರತಿಭಟನೆ ನಡೆಸುವ ರೈತ ಮುಖಂಡರ ಭರವಸೆಯ ನಂತರ ಕಚೇರಿ ಒಳಕ್ಕೆ ಬಿಡಲಾಯಿತು.

ಕೃಷಿ ಸಹಾಯಕ ನಿರ್ದೇಶಕ ಬಿ.ಡಿ. ಓಂಕಾರೇಶ್ವರ ಪ್ರತಿಭಟನಾಕರರನ್ನು ದ್ದೇಶಿಸಿ ಮಾತನಾಡಿ, ಉನ್ನತ ಅಧಿಕಾರಿಗಳ ಸಭೆಯಲ್ಲಿ ಬೀಜ ಪೂರೈಕೆದಾರರು ಮತ್ತು ಯಲ್ಲಾಪುರ, ಹಳಿಯಾಳ ಮತ್ತು ಮುಂಡಗೋಡ ಭಾಗದ ಬೀಜ ವಿತರಕರ ಜೊತೆ ಮಾತುಕತೆ ನಡೆಸಿ ಬೀಜ ಪೂರೈಸುವಂತೆ ವಿನಂತಿಸಲಾಗಿದೆ. ಪ್ರತಿ ತಾಲ್ಲೂಕಿಗೆ ರಾಶಿ 500, ಕೃಷಿಧನ್ 500, ನುಜ್ಜಿಬೀಡ್ 1000, ಮತ್ತು ಬಯೋಸೀಡ್ 500 ರಂತೆ ಹತ್ತಿ ಬೀಜಗಳ ಪ್ಯಾಕೆಟ್ ಅನ್ನು ಸ್ಥಳೀಯ ಡೀಲರ್‌ಗಳ ಮೂಲಕ ವಿತರಿಸಲು ಒಪ್ಪಿಕೊಂಡಿದ್ದು, ಬೀಜ ಲಭ್ಯವಾಗಲು ಇನ್ನೂ ಮೂರ‌್ನಾಲ್ಕು ದಿನಗಳು ಬೇಕಾಗಬಹುದು ಎಂದು ರೈತರ ಮನವೊಲಿಸಲು ಪ್ರಯತ್ನಿಸಿದರು.ಅವರ ಮಾತನ್ನು ಕೇಳದ ರೈತರು ಇಂಥ ಹುಸಿ ಭರವಸೆಯ ಮಾತುಗಳನ್ನು ಕಳೆದ 15 ದಿನಗಳಿಂದ ಕೇಳುತ್ತಿದ್ದೇವೆ.  ಇಷ್ಟು ದಿನ ಬೀಜ ವಿತರಿಸಲು ಸಾಧ್ಯವಾಗದ ನೀವು ಇನ್ನು ಎರಡು ಮೂರು ದಿನಗಳಲ್ಲಿ ಹೇಗೇ ಕೊಡಿಸುತ್ತೀರಿ? ಎಂದು ಪ್ರಶ್ನಿಸಿದ ರೈತರು ಬೀಜ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲವೆಂದು ಪಟ್ಟು ಹಿಡಿದರು.ಸುಮಾರು ಎರಡು ಗಂಟೆಗಳ ಹೆಚ್ಚು ಅವಧಿ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ಮಧ್ಯೆ ರೈತ ಮುಖಂಡರು ಮತ್ತು ಕೃಷಿ ಸಹಾಯಕ ನಿರ್ದೇಶಕರ ನಡುವೆ ಮಾತುಕತೆ ನಡೆಯುತ್ತಿರುವಾಗ ಕಾರವಾರ ಕೃಷಿ ನಿರ್ದೇಶಕರು ದೂರವಾಣಿ ಮೂಲಕ ರೈತ ಮುಖಂಡರೊಡನೆ ಮಾತನಾಡಲು ಇಚ್ಚಿಸಿದರಾದರೂ ಮಾತನಾಡಲು ಒಪ್ಪದ ರೈತರು ಸ್ಥಳಕ್ಕೆ ಆಗಮಿಸಿ ಮಾತುಕತೆ ನಡೆಸುವಂತೆ ತಿಳಿಸಿದರು.ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ತಹಸೀಲ್ದಾರ ಮಂಜುನಾಥ ಬಳ್ಳಾರಿ ಕೃಷಿ ಇಲಾಖೆಯ ಕಚೇರಿಗೆ ಆಗಮಿಸಿ ಶನಿವಾರ ಕಿರವತ್ತಿ ಗ್ರಾಮ ಚಾವಡಿಯಲ್ಲಿ 2400 ಪ್ಯಾಕೆಟ್ ಬೀಜ ವಿತರಿಸುವುದಾಗಿ ಭರವಸೆ ನೀಡಿದ ನಂತರದಲ್ಲಿ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳಲಾಯಿತು.ಪ್ರತಿಭಟನೆಯ ನೇತೃತ್ವವನ್ನು ವಿಜಯಕುಮಾರ ಹಿರೇಮಠ, ಶಾಂತಪ್ಪ ಉಪ್ಪಿನ, ಗುಂಡು ಪೂಜಾರಿ, ಬಸನಟ್ಟಿ, ಗದಿಗೆಪ್ಪ ವರದಾನಿ, ಹರೂನ್ ಶೇಖ, ಮುಂತಾದವರು ವಹಿಸಿದ್ದರು.ಪಿ.ಎಸ್.ಐ. ಡಿ.ವೈ. ಹರ್ಲಾಪುರ ಹಾಗೂ ಸಿಬ್ಬಂದಿಗಳು ಮತ್ತು ಜಿಲ್ಲಾ ಕಾಯ್ದಿಟ್ಟ ಪೊಲೀಸ್ ಪಡೆಯ ಸಿಬ್ಬಂದಿಗಳ ಸಹಾಯದಿಂದ ಕೃಷಿ ಕಚೇರಿಗೆ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry