ಬುಧವಾರ, ನವೆಂಬರ್ 20, 2019
20 °C

ಹತ್ತಿ ಬೀಜಕ್ಕಾಗಿ ರೈತರಿಂದ ಮತ್ತೆ ದಿಗ್ಬಂಧನ

Published:
Updated:

ಯಲ್ಲಾಪುರ: ಉತ್ತಮ ತಳಿಯ ಹತ್ತಿ ಬೀಜ ಪೂರೈಸುವುದಾಗಿ ಕೃಷಿ ಇಲಾಖೆಯ ಅಧಿಕಾರಿಗಳು ನೀಡಿದ್ದ ಭರವಸೆ ಈಡೇರಿಸದೇ ಇರುವ ಕಾರಣಕ್ಕೆ ಕೃಷಿ ಅಧಿಕಾರಿಗಳನ್ನು ಎರಡನೇ ಬಾರಿಗೆ ಕೊಠಡಿಯೊಳಗೆ ಕೂಡಿ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಕಿರವತ್ತಿಯಲ್ಲಿ ಬುಧವಾರ ನಡೆದಿದೆ.ರೈತರಿಗೆ ವಿತರಿಸಲು 500 ಪ್ಯಾಕೇಟ್ ಮಧ್ಯಮ ದರ್ಜೆಯ ಹತ್ತಿ ಬೀಜದೊಂದಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಅಧಿಕೃತ ಮಾರಾಟಗಾರರೊಂದಿಗೆ ಆಗಮಿಸಿದಾಗ ಬೀಜಕ್ಕಾಗಿ ಕಾಯುತ್ತಿದ್ದ ರೈತರು  ಕಡಿಮೆ ದರ್ಜೆಯ ಹತ್ತಿ ಬೀಜ ನಮಗೆ ಬೇಡ ಹಿಂದೆ ನೀಡಿದ್ದ ಭರವಸೆಯಂತೆ ನಮಗೆ ಉತ್ತಮ ತಳಿಯ ಬೀಜವನ್ನೇ ಸರ್ಮಪಕವಾಗಿ ಪೂರೈಸಬೇಕು, ಎಂದು ಆಗ್ರಹಿಸಿ ಕೃಷಿ ಅಧಿಕಾರಿಗಳನ್ನು ಪಂಚಾಯಿತಿ ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದರು.ಹತ್ತಿ ಬೀಜ ದೊರಕುವವರೆಗೂ ಅಧಿಕಾರಿಗಳನ್ನು ಪಂಚಾಯಿತಿಯಿಂದ ಕದಲಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸಬೂಬು ಹೇಳಿ ಜಾರಿಕೊಳ್ಳಲು ಕೃಷಿ ಅಧಿಕಾರಿಗಳು ಯತ್ನಿಸಿದರಾದರೂ ಒಪ್ಪದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗಡದುಕೊಂಡರು.ಈ ಸಂದರ್ಭದಲ್ಲಿ ಕೃಷಿ ಇಲಾಕೆಯ ಸಿಬ್ಬಂದಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು.ಹದಗೆಡಬಹುದಾಗಿದ್ದ ಪರಿಸ್ಥಿತಿಯನ್ನು ಸಿ.ಪಿ.ಐ ಗೋಪಾಲಕೃಷ್ಣ ನಾಯಕ ತಿಳಿಗೊಳಿಸಿ, ರೈತರನ್ನು ಸಮಾಧಾನಗೊಳಿಸಿ ಬೀಜ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದು ಕೃಷಿ ಸಹಾಯಕ ನಿರ್ದೇಶಕ ಬಿ.ಡಿ. ಓಂಕಾರೇಶ್ವರ  ಹಾಗೂ ಅಧಿಕೃತ ಮಾರಾಟಗಾರ ಶೇಖರ್ ಶೇಟ್ ಈ ಸಭೆಯಲ್ಲಿ ಉಪಸ್ಥಿತರಿರಬೇಕಾಗಿದೆ ಅದಕ್ಕೆ ಅವಕಾಶ ಕಲ್ಪಿಸಿ ಎಂದು ರೈತರ ಮನವೊಲಿಸಿ ಅವರನ್ನು ಬಿಡುಗಡೆಗೊಳಿಸಿದರು.ಬುಧವಾರ ಸಂಜೆಯೊಳಗೆ ರೈತರಿಗೆ ಬೀಜ ಸಿಗಬೇಕು ಇಲ್ಲವಾದಲ್ಲಿ ಕೃಷಿ ಅಧಿಕಾರಿಗಳು ರೈತರೊಂದಿಗೆ ಇರಬೇಕು ಎಂಬ ಷರತ್ತಿನೊಂದಿಗೆ ಸಹಾಯಕ ನಿರ್ದೇಶಕ ಬಿ.ಡಿ. ಓಂಕಾರೇಶ್ವರ ಅವರನ್ನು ಬಿಡುಗಡೆಗೊಳಿಸಲಾಯಿತು.ಬುಧವಾರ ಸಂಜೆಯ ವರೆಗೂ ಯಾವುದೇ ಸಮರ್ಪಕ ನಿಲುವು ಸಿಗದ ಕಾರಣ ಗುರುವಾರ ಬೆಳಿಗ್ಗೆ 10-30ಕ್ಕೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕುವ ನಿರ್ಣಯದೊಂದಿಗೆ  ಪ್ರತಿಭಟನೆ ನಿಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ನೂರಾರು ರೈತರೊಂದಿಗೆ ವಿಜಯಕುಮಾರ ಹಿರೇಮಠ, ರಹಮತ್ ಅಬ್ಬಿಗೇರಿ, ಗ್ರಾ.ಪಂ. ಅಧ್ಯಕ್ಷೆ ನೂರಜಹಾನ್ ಘಠಕರಿ, ಶಾಂತಪ್ಪ ಉಪ್ಪಿನ್, ಸಾಂಬಾಜಿ ಕಾಂಬ್ಳೆ, ರಾಘವೇಂದ್ರ ಗೊಂದಿ, ರಾಜು ಉಪ್ಪಿನ್, ಗುಂಡು ಬಚನಟ್ಟಿ, ಗದಿಗೆಪ್ಪಾ ವರದಾನಿ, ಸಯ್ಯದ ಗುಳೆ, ವಿಠ್ಠು ಕಸ್ತೂರಿ, ಜ್ಯೋತಿಬಾ ಠಾಕೇಕರ್, ಮಾರುತಿ, ಸುರೇಶ ಸೋಮಾರಪುರಕರ್,  ಮುಂತಾದವರು ಉಪಸ್ಥಿತರಿದ್ದರು.

 

ಪ್ರತಿಕ್ರಿಯಿಸಿ (+)