ಸೋಮವಾರ, ಮಾರ್ಚ್ 8, 2021
30 °C
ರಾಜ್ಯದಲ್ಲಿ ಸಾವಿರಕ್ಕೇರಿದ ರೈತರ ಆತ್ಮಹತ್ಯೆ

ಹತ್ತಿ ಬೆಳೆಗಾರರೇ ಹೆಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹತ್ತಿ ಬೆಳೆಗಾರರೇ ಹೆಚ್ಚು

ಬೆಂಗಳೂರು: ಕಳೆದ ಏಪ್ರಿಲ್‌ನಿಂದ ಈ ವರ್ಷದ ಜನವರಿ 12ರವರೆಗೆ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಹತ್ತಿ ಬೆಳೆಗಾರರೇ ಹೆಚ್ಚು.ಕೃಷಿ ಇಲಾಖೆ ಸಂಗ್ರಹಿಸಿರುವ ಮಾಹಿತಿ ಪ್ರಕಾರ 114 ಮಂದಿ ಹತ್ತಿ ಬೆಳೆಗಾರರು ಹಾಗೂ 110 ಮಂದಿ ಕಬ್ಬು ಬೆಳೆಗಾರರು ಕೊನೆಯುಸಿರೆಳೆದಿದ್ದಾರೆ. ಬೆಳೆಯೇ ಇಲ್ಲದ ಕಾರಣಕ್ಕೆ 126 ಮಂದಿ ಇಹಲೋಕ ತ್ಯಜಿಸಿದ್ದಾರೆ ಎಂಬುದನ್ನು ಕೃಷಿ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ಗೊತ್ತಾಗುತ್ತದೆ.ಭತ್ತ (91) ಮುಸುಕಿನ ಜೋಳ (90), ರಾಗಿ (56), ತೊಗರಿ (44), ರೇಷ್ಮೆ (33), ಶೇಂಗಾ (29) ಬೆಳೆದ ರೈತರು ಹೆಚ್ಚಿನ ಪ್ರಮಾಣದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಬಹುತೇಕ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದವರಾಗಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಒಟ್ಟು 1,002  ರೈತರ ಪೈಕಿ, 359 ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಯೋಗ್ಯ ಎಂಬುದನ್ನು ತೀರ್ಮಾನಿಸಲಾಗಿದೆ. ಪರಿಹಾರ ನೀಡಲು ಯೋಗ್ಯವಲ್ಲ ಎನ್ನುವ ಕಾರಣಕ್ಕೆ 275 ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇನ್ನೂ 368 ಪ್ರಕರಣಗಳ ಬಗ್ಗೆ ಯಾವ ತೀರ್ಮಾನವೂ ಆಗಿಲ್ಲ. ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ವಿವಿಧ ಹಂತಗಳಲ್ಲಿ ಇದೆ ಎಂದು ಕೃಷಿ ಇಲಾಖೆ ಮೂಲಗಳು ಹೇಳುತ್ತವೆ.ನಿಜಕ್ಕೂ ಸಾಲ ಇದ್ದು, ಆತ್ಮಹತ್ಯೆ ಮಾಡಿಕೊಂಡ ಫಲಾನುಭವಿಗಳಿಗೆ ಸರ್ಕಾರದಿಂದ ₹5 ಲಕ್ಷ ಪರಿಹಾರ ಘೋಷಿಸಲಾಗಿದೆ. ಹಂತ ಹಂತವಾಗಿ ಪರಿಹಾರ ನೀಡುವ ಪ್ರಕ್ರಿಯೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಮೀನು ಇದ್ದ ರೈತರು ಆತ್ಮಹತ್ಯೆ ಮಾಡಿಕೊಂಡರೆ ಮಾತ್ರ ಪರಿಹಾರ ಎಂದು ಈ ಹಿಂದೆ ಮಾಡಿದ್ದ ತೀರ್ಮಾನವನ್ನು ಬದಲಿಸಿದ್ದು, ಜಮೀನು ಇಲ್ಲದ ರೈತರು ಆತ್ಮಹತ್ಯೆ ಮಾಡಿಕೊಂಡರೂ ಪರಿಹಾರ ಸಿಗುವ ಹಾಗೆ ಮಾಡಲಾಗಿದೆ. ಜಮೀನನ್ನು ಭೋಗ್ಯಕ್ಕೆ ಪಡೆದು ಕೃಷಿ ಮಾಡುವ ರೈತರು ನಷ್ಟದಿಂದ ಸತ್ತರೂ ಪರಿಹಾರ ಲಭ್ಯವಾಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.