ಬುಧವಾರ, ಮೇ 12, 2021
25 °C

ಹತ್ತಿ ವ್ಯಾಪಾರ: ಶಾಸನದ ನಿರ್ಬಂಧ ಸಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೇಂದ್ರ ಸರ್ಕಾರವು ಜಾರಿಮಾಡ ಹೊರಟಿರುವ ಹತ್ತಿ ವ್ಯಾಪಾರ-ಅಭಿವೃದ್ಧಿ ಮತ್ತು ನಿಯಂತ್ರಣ ಕುರಿತ ಮಸೂದೆಗೆ ಸಂಬಂಧಿಸಿದ ಕರಡು ಹತ್ತಿ ವ್ಯಾಪಾರಸ್ಥರು ಹಾಗೂ ಜಿನ್ನಿಂಗ್ ಉದ್ದಿಮೆದಾರರಿಗೆ ಮಾರಕವಾಗಿದ್ದು, ಈ ಕರಡನ್ನು ಕೈಬಿಡಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎನ್.ಪಿ. ಜವಳಿ ಆಗ್ರಹಿಸಿದರು.ನಗರದಲ್ಲಿ ಬುಧವಾರ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಕರ್ನಾಟಕ ಕಾಟನ್ ಅಸೋಸಿಯೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹತ್ತಿ ವ್ಯಾಪಾರ ಅಭಿವೃದ್ಧಿ ಮತ್ತು ನಿಯಂತ್ರಣ ಮಸೂದೆ ಕುರಿತ ತಿಳಿವಳಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈ ಕರಡು ಸಾಕಷ್ಟು ನ್ಯೂನತೆಯಿಂದ ಕೂಡಿದ್ದು, ಅಭಿವೃದ್ಧಿಗೆ ಬದಲಾಗಿ ದಂಡ ಹಾಗೂ ಶಿಕ್ಷೆಯ ವಿಷಯವನ್ನೇ ಹೆಚ್ಚು ಒಳಗೊಂಡಿದೆ. ಇದರಿಂದ  ಹತ್ತಿ ವ್ಯಾಪಾರಸ್ತರು ಹಾಗೂ ಜಿನ್ನಿಂಗ್, ಪ್ರೆಸಿಂಗ್ ಉದ್ದಿಮೆದಾರರು ಸಾಕಷ್ಟು ನಿಬಂಧನೆಗಳಿಗೆ ಒಳಪಟ್ಟು ವ್ಯಾಪಾರ ಮಾಡಬೇಕಾಗುತ್ತದೆ. ಹೀಗಾಗಿ ಈ ಕರಡನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.ಲೆಕ್ಕ ಪರಿಶೋಧಕ ಜಿ.ಬಿ. ಮೋದಿ ಮಾತನಾಡಿ, ಯಾವುದೇ ಶಾಸನವು ವ್ಯಾಪಾರದ ಅಭಿವೃದ್ಧಿಗೆ ಪೂರಕವಾಗಿ ಇರಬೇಕು. ಆದರೆ ಉದ್ದೇಶಿತ ಶಾಸನವು ಅಭಿವೃದ್ಧಿಗೆ ಮಾರಕವಾಗಿದ್ದು, ಈ ಕುರಿತು ಚರ್ಚೆ ಅವಶ್ಯ ಎಂದು ಅಭಿಪ್ರಾಯಪಟ್ಟರು.ಕಾಟನ್ ಅಸೋಸಿಯೇಶನ್ ಅಧ್ಯಕ್ಷ ಪೂನಮ್‌ಚಂದ ಓಸ್ತವಾಲ, ಉಪಾಧ್ಯಕ್ಷ ಸರ್ವಶ್ರೀ ವಸಂತ ಲದವಾ, ಅಂದಾನಪ್ಪ ಸಜ್ಜನರ,  ಮಹೇಂದ್ರ ಲದ್ದಡ, ಗೌರವ ಕಾರ್ಯದರ್ಶಿ ವಿಶ್ವನಾಥ ಎಸ್. ಗಿಣಿಮಾವ, ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಪಿ. ಲಿಂಗನಗೌಡರ ಹಾಗೂ ಇತರರು ಈ ಸಂದರ್ಭ ಹಾಜರಿದ್ದರು. ಉತ್ತರ ಕರ್ನಾಟಕ ಭಾಗದ ನೂರಾರು ವರ್ತಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.