ಹತ್ತಿ ಹೊಲಕ್ಕೆ ಅಧಿಕಾರಿ ಭೇಟಿ

7
ಪ್ರಜಾವಾಣಿ ಫಲಶ್ರುತಿ

ಹತ್ತಿ ಹೊಲಕ್ಕೆ ಅಧಿಕಾರಿ ಭೇಟಿ

Published:
Updated:

ಲಕ್ಷ್ಮೇಶ್ವರ: ಸಮೀಪದ ದೊಡ್ಡೂರು ಲಂಬಾಣಿ ತಾಂಡಾದಲ್ಲಿ ಹತ್ತಾರು ರೈತರು ನೂರಾರು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿರುವ ಕನಕ ಬಿಟಿ ಹತ್ತಿ ಗಿಡದಲ್ಲಿ ಅತ್ಯಲ್ಪ ಕಾಯಿ ಬಿಟ್ಟಿದ್ದು, ಇದರಿಂದಾಗಿ ಇಳುವರಿ ಮೇಲೆ ಗಂಭೀರ ಪರಿಣಾಮ ಬೀರುವ  ಕುರಿತು ಬುಧವಾರ ಪ್ರಜಾವಾಣಿಯಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಕೆ.ಎ. ನದಾಫ್‌ ಅವರು ಗುರುವಾರ ತಾಂಡಾದ ರೈತ ಟೋಪಣ್ಣ ಲಮಾಣಿ ಅವರ ಹೊಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಹಾಜರಿದ್ದ ರೈತರಾದ ಟೋಪಣ್ಣ ಲಮಾ­ಣಿ, ಮಾರುತಿ ಲಮಾಣಿ, ಶಂಕ್ರಪ್ಪ ಲಮಾಣಿ ಅವರು ‘ಗಿಡಾ ಬೆಳೆದಿರೋ ಹಂಗ ಅದರಾಗ ಕಾಯಿ ಬಿಟ್ಟಿಲ್ರೀ.. ಹಿಂಗಾಗಿ ಹತ್ತಿ ಪೀಕು ಈ ವರ್ಷ ನಮ್ಮ ಪಾಲಿಗೆ ಮುಳುವು ಆಗೇತಿ. ಸಾಲ ಸೋಲ ಮಾಡಿ ಹತ್ತಿ ಬಿತ್ತೇವೆ. ಭಾಳ ಕಡಿಮಿ ಕಾಯಿ ಬಿಟ್ಟಾವು.ಅಲ್ಲದ ಬಿಟ್ಟಿರೋ ಕಾಯಿ ಸೈತ ಕರ್ರಗಾಗಿ ಉದುರಿ ಬೀಳಾಕತ್ತಾವು. ಮಾಲ ಬರದಿದ್ರ ಸಾಲ ತೀರಸೋದು ಹ್ಯಾಂಗಪಾ ಅನ್ನೋ ಚಿಂತಿ ಶುರುವಾಗೈತಿ. ಸರ್ಕಾರ ನಮ್ಮ ಕೈ ಹಿಡಿದಿದ್ರ ನಮ್ಗ ಸಾವ ಗತಿ’ ಎಂದು ಅಧಿಕಾರಿಗಳ ಎದುರು ತಮ್ಮ ಅಳಲು ತೋಡಿ­ಕೊಂಡರು.ರೈತರ ಸಮಸ್ಯೆ ಆಲಿಸಿದ ಕೃಷಿ ಅಧಿಕಾರಿ ಕೆ.ಎ. ನದಾಫ್‌, ‘ಗಿಡದಲ್ಲಿ ಕಾಯಿ ಬಿಡ­ದಿರಲು ಕಳಪೆ ಬೀಜವೂ ಒಂದು ಮುಖ್ಯ ಕಾರಣ. ಈ ಕುರಿತು ಹಿರಿಯ ಅಧಿಕಾರಿ­ಗಳಿಗೆ ವರದಿ ಒಪ್ಪಿಸಲಾಗುವುದು’ ಎಂದು ತಿಳಿಸಿದರು. ಕಳಪೆ ಬೀಜ ತಯಾರಿಸಿ ಮುಗ್ಧ ರೈತರನ್ನು ಮೋಸ ಮಾಡುತ್ತಿರುವ ಮಹಿಕೋ ಕಂಪೆನಿಯ ವಿರುದ್ಧ ದಾವೆ ಹೂಡುವುದಾಗಿ ರೈತ ಟೋಪಣ್ಣ ಲಮಾಣಿ ಇದೇ ಸಂದರ್ಭ­ದಲ್ಲಿ ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry