ಹತ್ತು ದಿನ ಪೂರೈಸಿದ ಪ್ರತಿಭಟನೆ

7

ಹತ್ತು ದಿನ ಪೂರೈಸಿದ ಪ್ರತಿಭಟನೆ

Published:
Updated:
ಹತ್ತು ದಿನ ಪೂರೈಸಿದ ಪ್ರತಿಭಟನೆ

ಕೊಪ್ಪಳ: ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾಡಿದ ತಪ್ಪಿಗಾಗಿ ತಾವಿರುವ ಮನೆಯನ್ನೇ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಜನರು ನ್ಯಾಯ ಒದಗಿಸುವಂತೆ ಧರಣಿ ನಡೆಸುತ್ತಿದ್ದಾರೆ.ಗಂಗಾವತಿ ತಾಲ್ಲೂಕಿನ ಭಟ್ಟರ ಹಂಚಿನಾಳ ಗ್ರಾಮದ ನಿವಾಸಿಗಳೇ ಇಂತಹ ಭೀತಿ ಎದುರಿಸುತ್ತಿದ್ದು, ನ್ಯಾಯ ನೀಡುವಂತೆ ಒತ್ತಾಯಿಸಿ ಇಲ್ಲಿನ ಜಿಲ್ಲಾಡಳಿತದ ಮುಂದೆ ಕೈಗೊಂಡಿರುವ ಅವರ ಧರಣಿ ಹತ್ತನೇ ದಿನಕ್ಕೆ ಕಾಲಿಟ್ಟಿದೆ.ಧರಣಾ ಸ್ಥಳದಲ್ಲಿಯೇ ಅಡುಗೆ-ಊಟ ಮಾಡುತ್ತಿರುವ ಗ್ರಾಮಸ್ಥರು, ಜಿಲ್ಲಾಡಳಿತವಾದರೂ ತಮ್ಮ ನೆರವಿಗೆ ಬರುತ್ತದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಧರಣಿ ನಿರತರ ಮುಖಂಡ ಲಿಂಗಣ್ಣ ಹಣವಾಳ, ಗ್ರಾಮದಲ್ಲಿರುವ 1 ಎಕರೆ 20 ಗುಂಟೆ ಜಮೀನಿನಲ್ಲಿ ಒಟ್ಟು 51 ಕುಟುಂಬಗಳು ವಾಸ ಮಾಡುತ್ತಿವೆ ಎಂದರು.1983ರಲ್ಲಿ ನಮಗೆ ಮನೆಗಳ ಹಕ್ಕುಪತ್ರ ನೀಡಲಾಗಿದೆ. ಕೃಷಿಯನ್ನೇ ನಂಬಿ ಬದುಕುತ್ತಿದ್ದೇವೆ. ಆದರೆ, ಖಾಜಾ ಮೈನುದ್ದೀನ್ ಹಾಗೂ ಮಾಸೂಮ್ ಸಾಬ ಎಂಬುವವರು ಸದರಿ ಜಮೀನು ತಮಗೆ ಸೇರಿದ್ದು ಹಾಗೂ ಜಮೀನನ್ನು 1979ರಲ್ಲಿಯೇ ಖರೀದಿ ಮಾಡಲಾಗಿದೆ ಎಂಬುದಾಗಿ ಕೋರ್ಟ್‌ನ ಮೊರೆ ಹೋದರು.ಆದರೆ, ಬಹುತೇಕ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಕೋರ್ಟ್‌ಗೆ ಹಾಜರಾಗದೇ, ವಾದ ಮಂಡಿಸದೇ ಇರುವುದರಿಂದ ನಮಗೆ ಹಿನ್ನೆಡೆಯಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿದಾರರ ಪರ ತೀರ್ಪು ನೀಡಿದ್ದು, ನ. 28ರಂದು ಸದರಿ ಜಮೀನನ್ನು ಅರ್ಜಿದಾರರಿಗೆ ಹಸ್ತಾಂತರಿಸುವಂತೆ ಆದೇಶಿಸಿದೆ ಎಂದು ವಿವರಿಸಿದರು.ಈಗ ದಿಕ್ಕು ತಿಳಿಯದಂತಾಗಿದೆ. ಅರ್ಜಿದಾರರಿಗೇ ಸೂಕ್ತ ಪರಿಹಾರ ನೀಡಿ, ತಮಗೆ ಅಲ್ಲಿಯೇ ವಾಸಿಸಲು ಅನುಕೂಲ ಮಾಡಿಕೊಡಬೇಕು. ಏನೂ ತಪ್ಪು ಮಾಡದ ನಮಗೆ ಸೂರು ನೀಡಬೇಕು ಎಂದು ಕೋರಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry