ಶುಕ್ರವಾರ, ಡಿಸೆಂಬರ್ 13, 2019
20 °C

ಹತ್ತು ಲಕ್ಷ ನಕಲಿ ಜಾಬ್ ಕಾರ್ಡ್ ರದ್ದು - ಜಗದೀಶ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹತ್ತು ಲಕ್ಷ ನಕಲಿ ಜಾಬ್ ಕಾರ್ಡ್ ರದ್ದು - ಜಗದೀಶ ಶೆಟ್ಟರ್

ಬೆಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇದುವರೆಗೆ 52.98 ಲಕ್ಷ `ಜಾಬ್‌ಕಾರ್ಡ್~ಗಳನ್ನು ನೀಡಲಾಗಿದ್ದು, ಈ ಪೈಕಿ ನಕಲಿ ಎಂದು ಕಂಡುಬಂದ ಹತ್ತು ಲಕ್ಷ `ಜಾಬ್ ಕಾರ್ಡ್~ಗಳನ್ನು ರದ್ದುಪಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.2009-10ರಲ್ಲಿ ಈ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸರಿಯಾಗಿ ಕಾಮಗಾರಿಗಳು ನಡೆದಿಲ್ಲ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸತ್ಯಾಂಶ ಇರುವುದು ಕಂಡುಬಂತು. ಆದ್ದರಿಂದ ಕಳೆದ ಸಾಲಿನಲ್ಲಿ ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ನು ಬದಲಾಯಿಸಲಾಯಿತು ಎಂದು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಮೊದಲಿನ ಹಾಗೆ ಒಮ್ಮೆಗೆ 15-20 ಕಾಮಗಾರಿಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು 5-6 ಕಾಮಗಾರಿಗಳನ್ನು ಮಾತ್ರ ತೆಗೆದುಕೊಳ್ಳಬೇಕು. ವಿಡಿಯೊ ರೆಕಾರ್ಡ್ ಮಾಡಬೇಕು ಎಂದು ಸೂಚಿಸಲಾಯಿತು. ಇದರ ಪರಿಣಾಮ ಯೋಜನೆ ಅನುಷ್ಠಾನದಲ್ಲಿ ಸ್ಥಿರತೆ ಕಂಡುಬಂದಿದೆ. ಒಂದೇ ಹೆಸರಿನಲ್ಲಿ ಎರಡು ಕಾರ್ಡ್ ಪಡೆದಿರುವುದು ಹಾಗೂ ನಕಲಿ ಕಾರ್ಡ್‌ಗಳನ್ನು ಪತ್ತೆಹಚ್ಚಿ ಅವುಗಳನ್ನು ರದ್ದುಪಡಿಸಲಾಗಿದೆ ಎಂದರು.ನಕಲಿ ಕಾರ್ಡ್‌ಗಳ ವಿತರಣೆಗೆ ಕಾರಣರಾದ 300 ಸಿಬ್ಬಂದಿಯನ್ನು ಅಮಾನತುಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. 2006-07ರಲ್ಲಿ 7.96 ಲಕ್ಷ (ರೂ 251.89 ಕೋಟಿ), 2007-08ರಲ್ಲಿ 15.23 ಲಕ್ಷ (ರೂ 232.05 ಕೋಟಿ), 2008-09ರಲ್ಲಿ 34.02 ಲಕ್ಷ (ರೂ 352.87ಕೋಟಿ), 2009-10ರಲ್ಲಿ 62 ಲಕ್ಷ (ರೂ 2216 ಕೋಟಿ) ಜಾಬ್ ಕಾರ್ಡ್‌ಗಳಿದ್ದವು. ಆಯಾ ವರ್ಷ ವೆಚ್ಚ ಮಾಡಿರುವ ಹಣದ ಮಾಹಿತಿ ಆವರಣದಲ್ಲಿದೆ. ಈ ಪೈಕಿ 2010-11ರಲ್ಲಿ ಹತ್ತು ಲಕ್ಷ ನಕಲಿ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.ಪ್ರಸಕ್ತ ಸಾಲಿನಲ್ಲಿ ಕಳೆದ ಡಿಸೆಂಬರ್‌ವರೆಗೆ 1120 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಒಟ್ಟು ಎರಡು ಸಾವಿರ ಕೋಟಿ ರೂಪಾಯಿ ಹಣ ಇದಕ್ಕಾಗಿ ಮೀಸಲಿದ್ದು, ಶೇ 50ಕ್ಕಿಂತ ಹೆಚ್ಚು ಹಣ ಖರ್ಚಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮೊದಲಾದ ಕಡೆ ಕಾರ್ಮಿಕರು ಲಭ್ಯವಿಲ್ಲ. ಹೀಗಾಗಿ ಹಣ ವೆಚ್ಚವಾಗಿಲ್ಲ ಎಂಬುದಾಗಿ ಹೇಳಿದರು.

ಉದ್ಯೋಗ ಖಾತರಿ ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ನು ಬದಲಾಯಿಸಿ ಸಿಮೆಂಟ್ ರಸ್ತೆ ನಿರ್ಮಾಣಕ್ಕೂ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿಗಳ ಗ್ರಾಮ ಸಡಕ್ ಯೋಜನೆಯಡಿ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲಿ ತಲಾ 20 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದಲ್ಲದೆ ಇನ್ನೂ 30 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಪ್ರತಿ ಕಿ.ಮೀ.ಗೆ 28 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತದೆ ಎಂದರು.ಸುವರ್ಣ ಗ್ರಾಮ ಯೋಜನೆಗೆ ಇದುವರೆಗೆ 3381 ಗ್ರಾಮಗಳನ್ನು ಆಯ್ಕೆ ಮಾಡಿದ್ದು, 1293 ಗ್ರಾಮಗಳಲ್ಲಿ ಕೆಲಸಗಳು ಪೂರ್ಣಗೊಂಡಿವೆ. 1489 ಕೋಟಿ ರೂಪಾಯಿ ವೆಚ್ಚವಾಗಿದೆ. ಇನ್ನೂ ಒಂದು ಸಾವಿರ ಗ್ರಾಮಗಳಿಗೆ ಈ ಯೋಜನೆಯನ್ನು ವಿಸ್ತರಿಸುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದು ಉತ್ತರಿಸಿದರು.ಕುಡಿಯುವ ನೀರಿಗೆ 40ಕೋಟಿ

ಬೆಂಗಳೂರು:
ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಸಮರ್ಪಕವಾಗಿ ನೀರಿನ ಪೂರೈಕೆ ವ್ಯವಸ್ಥೆ ಮಾಡಲು 40 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಜಗದೀಶ ಶೆಟ್ಟರ್ ಮಂಗಳವಾರ ಇಲ್ಲಿ ಹೇಳಿದರು.ಹಿಂದೆ ಹತ್ತು ಕೋಟಿ ರೂಪಾಯಿ ನೀಡಲಾಗಿತ್ತು. ಮೂರು ದಿನಗಳ ಹಿಂದೆ 30 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಕೊಳವೆಬಾವಿಗಳನ್ನು ಕೊರೆಯುವುದು, ದುರಸ್ತಿ ಇತ್ಯಾದಿಗಳಿಗೆ ಹಣ ಬಳಕೆ ಮಾಡಬಹುದಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)