ಗುರುವಾರ , ಮೇ 6, 2021
27 °C

ಹತ್ತು ಹಲವು ಸಮಸ್ಯೆ: ಪರಿಹಾರದ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಾರದ ಪಿಂಚಣಿ; ಆಶ್ರಯ ಮನೆಗಳ ಹಂಚಿಕೆಯಲ್ಲಿ ತಾರತಮ್ಯ, ಪಹಣಿಯಲ್ಲಿ ಮಾಯವಾದ ಹೆಸರು, ಸರ್ಕಾರಿ ಭೂಮಿ ಅತಿಕ್ರಮಣ, ಕೋಟ್‌ಆದೇಶವಿದ್ದರೂ ಸಿಗದ ನೇಮಕಾತಿ ಪತ್ರ, ದೊರಕದ ಸಹಾಯಧನ, ನಿಯಮ ಮೀರಿ ನೇಮಕಾತಿ ಆದೇಶ, ನಡೆಯದ ಕಾಮಗಾರಿ...ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸೋಮವಾರ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ನಡೆಸಿದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮಂಡಿಸಲಾದ ಕುಂದುಕೊರತೆಗಳಿಗೆ ಲೆಕ್ಕವಿಲ್ಲ!ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ನಾಗರಿಕರು ಬಗೆಬಗೆಯ ಕುಂದುಕೊರತೆಗಳನ್ನು ನ್ಯಾಯಮೂರ್ತಿಗಳ ಮುಂದಿಟ್ಟರು. ಎಲ್ಲವನ್ನೂ ಸಾವಧಾನದಿಂದ ಆಲಿಸಿದ ನ್ಯಾಯಮೂರ್ತಿ ಶಿವರಾಜ ಪಾಟೀಲ, ಪರಿಹಾರ ಕೊಡಿಸುವ ಭರವಸೆ ನೀಡಿದರು.ಪ್ರಾಸ್ತಾವಿಕ ಮಾತನಾಡಿದ ನ್ಯಾ. ಪಾಟೀಲ ಅವರು ರಂಗಮಂದಿರ ಭರ್ತಿಯಾಗಿರುವುದನ್ನು ಗಮನಿಸಿ , “ಸಭಾಂಗಣ ತುಂಬಿರುವುದೇ ಲೋಕಾಯುಕ್ತರ ಮೇಲೆ ಜನತೆ ಇಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ” ಎಂದು ನುಡಿದರು.“ಲೋಕಾಯುಕ್ತನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಒಂದು ತಿಂಗಳು ಸಂಸ್ಥೆಯ ಬಗ್ಗೆ ಎಲ್ಲ ಮಾಹಿತಿ ಪಡೆದುಕೊಂಡೆ. ಜನರ ಮನೆ ಬಾಗಿಲಿಗೆ ಲೋಕಾಯುಕ್ತ ವ್ಯವಸ್ಥೆ ತಲುಪಬೇಕು ಎಂಬ ಉದ್ದೇಶದಿಂದ ಜಿಲ್ಲಾ ಕೇಂದ್ರಗಳಲ್ಲಿ ಅಹವಾಲು ಸ್ವೀಕಾರವನ್ನು ನಡೆಸಲು ನಿರ್ಧರಿಸಿದೆ. ಇದನ್ನು ಎಲ್ಲಿಂದ ಆರಂಭಿಸಬೇಕು ಎಂಬ ಪ್ರಶ್ನೆ ಮೂಡಿದಾಗ, ಮನಸ್ಸಿನಲ್ಲಿ ಮೊದಲಿಗೆ ಮೂಡಿದ್ದೇ ಗುಲ್ಬರ್ಗ” ಎಂದು ಲೋಕಾಯುಕ್ತರು ಹೇಳಿದಾಗ ಸಭಾಂಗಣದಲ್ಲಿ ಚಪ್ಪಾಳೆ ಮಾರ್ದನಿಸಿತು.ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಷಣ, ಚರ್ಚೆ ನಡೆಯುವುದಕ್ಕಿಂತ ಕೆಲಸ ಆಗಬೇಕು. ಆಗ ಮಾತ್ರ ತಮಗೆ ಖುಷಿಯಾಗುತ್ತದೆ ಎಂದು ಹೇಳಿದ ನ್ಯಾಯಮೂರ್ತಿಗಳು, “ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದು ಮಾತ್ರವಲ್ಲ; ಉತ್ತಮ ಆಡಳಿತ ನಡೆಯುವಂತೆ ಮಾಡುವುದು ಸಹ ಲೋಕಾಯುಕ್ತದ ಗುರಿಯಾಗಿದೆ” ಎಂದು ಸ್ಪಷ್ಟಪಡಿಸಿದರು.ತಾಳ್ಮೆಯಿಂದ ಆಲಿಸಿದರು: ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಭೂಸೇನಾ ನಿಗಮ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಇಲಾಖೆ, ನೀರಾವರಿ ಇಲಾಖೆ, ಅರಣ್ಯ ವಿಭಾಗ, ಅಬಕಾರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಜನರು ಲೋಕಾಯುಕ್ತರ ಮುಂದಿಟ್ಟರು. ಸಮಸ್ಯೆಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ಸಂಬಂಪಟ್ಟ ಇಲಾಖೆಗಳ ಅಧಿಕಾರಿಗಳಿಂದ ವಿವರಣೆ ಪಡೆದರು.ಕೆಲವು ಪ್ರಕರಣಗಳಲ್ಲಿ ಹಿರಿಯ ಅಧಿಕಾರಿಗಳಿಗೆ ನಿಖರ ಕಾಲಾವಕಾಶ ನೀಡಿದ ಲೋಕಾಯುಕ್ತರು, ನಿಗದಿತ ದಿನದಲ್ಲಿ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ತಮ್ಮನ್ನು ಸಂಪರ್ಕಿಸುವಂತೆ ಅರ್ಜಿದಾರರಿಗೆ ಸೂಚಿಸಿದರು. ಬೆಳಿಗ್ಗೆ 11.30ರಿಂದ ನಡೆದ ಕಾರ್ಯಕ್ರಮದಲ್ಲಿ ಲೋಕಾಯುಕ್ತರು ತಾಳ್ಮೆಯಿಂದ ಪ್ರತಿಯೊಬ್ಬ ಅರ್ಜಿದಾರನ ಸಮಸ್ಯೆಯನ್ನೂ ಸಾವಧಾನದಿಂದ ಆಲಿಸಿದ್ದು ವಿಶೇಷವಾಗಿತ್ತು.ಮಧ್ಯಾಹ್ನ 4ರವರೆಗೆ ನಡೆದ ಕಾರ್ಯಕ್ರಮದಲ್ಲಿ ಸುಮಾರು ನೂರು ಕುಂದುಕೊರತೆ ಅರ್ಜಿ ಸ್ವೀಕರಿಸಲಾಯಿತು. ನಂತರ ಸಂಜೆ ಮುಂದುವರಿದ ಸಭೆಯಲ್ಲಿ, ಈ ಹಿಂದಿನ ದೂರುಗಳ ವಿಚಾರಣೆ ಯಾವ ಹಂತದಲ್ಲಿದೆ? ಎಂಬುದರ ಬಗ್ಗೆ ಪರಿಶೀಲನೆ ನಡೆಯಿತು.ಲೋಕಾಯುಕ್ತ ಎಸ್‌ಪಿ ಬಿ.ಎನ್.ನೀಲಗಾರ್, ಇನ್‌ಸ್ಪೆಕ್ಟರ್ ಮಹೇಶ್ವರಗೌಡ, ರವಿ ಪಾಟೀಲ, ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಸೇರಿದಂತೆ ಇತರ ಅಧಿಕಾರಿಗಳು ಇದ್ದರು. ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.