ಶುಕ್ರವಾರ, ಜೂನ್ 18, 2021
27 °C

ಹತ್ಯೆ: ನ್ಯಾಯಾಂಗ ತನಿಖೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭೋಪಾಲ್/ ಗ್ವಾಲಿಯರ್  (ಪಿಟಿಐ): ಗಣಿ ಮಾಫಿಯಾಕ್ಕೆ ಬಲಿಯಾದ ಯುವ ಐಪಿಎಸ್ ಅಧಿಕಾರಿ ನರೇಂದ್ರ ಕುಮಾರ್ ಸಿಂಗ್ ಹತ್ಯೆ ಘಟನೆಯನ್ನು ಮಧ್ಯ ಪ್ರದೇಶ ಸರ್ಕಾರ ಶುಕ್ರವಾರ ನ್ಯಾಯಾಂಗ ತನಿಖೆಗೆ ಒಪ್ಪಿಸಿದೆ. ಘಟನೆ ಪೂರ್ವಯೋಜಿತ ಸಂಚಿನ ಭಾಗವಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.`ಪೂರ್ವಯೋಜಿತ ಒಳಸಂಚಿನ ಮೂಲಕ ತಮ್ಮ ಪುತ್ರನ ಹತ್ಯೆ ಮಾಡಲಾಗಿದೆ. ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳ ಸಹಕಾರ ಆತನಿಗಿರಲಿಲ್ಲ ಎಂದು ನರೇಂದ್ರ ಅವರ ತಂದೆ ಕೇಶವ್ ದೇವ್ ಅವರು ಆರೋಪಿಸಿರುವ ಹಿನ್ನೆಲೆಯಲ್ಲಿ, ಘಟನೆಯ ತನಿಖೆಗೆ ಕ್ರಮ ಕೈಗೊಳ್ಳಲಾಗಿದೆ~ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.ಸಿಬಿಐ ತನಿಖೆಗೆ ಆಗ್ರಹ

ಗಣಿಯಿಂದ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ಹಲವು ಟ್ರಕ್ ಮತ್ತು ಟ್ರ್ಯಾಕ್ಟರ್‌ಗಳನ್ನು ನರೇಂದ್ರ ವಶಕ್ಕೆ ತೆಗೆದುಕೊಂಡಿದ್ದರು, ಇದರಿಂದಾಗಿ ಗಣಿ ಮಾಫಿಯಾ ಅವರನ್ನು ಮುಗಿಸಿದೆ ಎಂದಿರುವ ವಿರೋಧ ಪಕ್ಷ ಕಾಂಗ್ರೆಸ್, ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದೆ. ಅಲ್ಲದೆ ಆಡಳಿತಾರೂಢ ಬಿಜೆಪಿ ಸರ್ಕಾರ ಗಣಿ ಮಾಫಿಯಾದ ರಕ್ಷಣೆಯಲ್ಲಿ ತೊಡಗಿದೆ ಎಂದು ಗಂಭೀರ ಆರೋಪ ಮಾಡಿದೆ.ಟ್ರ್ಯಾಕ್ಟರ್ ತಡೆಯಲು ಬಂದ ನರೇಂದ್ರ ಅವರ ಮೇಲೆ ಅದೇ ವಾಹನವನ್ನು ಹರಿಸಿ ಅವರನ್ನು ಕೊಂದ ಚಾಲಕ ಮನೋಜ್ ಗುರ್ಜರ್‌ನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.ಅಂತ್ಯಸಂಸ್ಕಾರ

ನರೇಂದ್ರ ಅವರ ಸಾವಿನಿಂದ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಮಥುರಾದಿಂದ 50 ಕಿ.ಮೀ ದೂರದ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ನರೇಂದ್ರ ಅವರ ಅಂತ್ಯಸಂಸ್ಕಾರದ ವೇಳೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಐಎಎಸ್ ಅಧಿಕಾರಿಯಾದ ನರೇಂದ್ರ ಅವರ ಪತ್ನಿ ಮಧುರಾಣಿ ತೆವಾಟಿಯ ಪತಿಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.ತೀವ್ರ ಖಂಡನೆ

ನರೇಂದ್ರ ಅವರ ಹತ್ಯೆಯನ್ನು ಅಣ್ಣಾ ತಂಡದ ಸದಸ್ಯ ಅರವಿಂದ ಕೇಜ್ರಿವಾಲ್ ತೀವ್ರವಾಗಿ ಖಂಡಿಸಿದ್ದಾರೆ. ಅಕ್ರಮ ಬಯಲಿಗೆ ಎಳೆಯುವವರ ಸುರಕ್ಷತಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.