ಹದಗೆಟ್ಟ ಆಸ್ಪತ್ರೆ ರಸ್ತೆ: ತಪ್ಪದ ಸಂಕಟ

7

ಹದಗೆಟ್ಟ ಆಸ್ಪತ್ರೆ ರಸ್ತೆ: ತಪ್ಪದ ಸಂಕಟ

Published:
Updated:
ಹದಗೆಟ್ಟ ಆಸ್ಪತ್ರೆ ರಸ್ತೆ: ತಪ್ಪದ ಸಂಕಟ

ಬಸವಕಲ್ಯಾಣ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ರಸ್ತೆ ಇಕ್ಕಟ್ಟಾಗಿದ್ದರಿಂದ ರೋಗಿಗಳನ್ನು ಸಾಗಿಸುವ ಅಂಬ್ಯುಲನ್ಸ್ ಹಾಗೂ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದ್ದು ರೋಗಿಗಳು ಸಂಕಟಪಡುವಂತಾಗಿದೆ.ಈ ರಸ್ತೆಯಲ್ಲಿ ನಾಮಫಲಕ ಸಹ ಇಲ್ಲ. ರಸ್ತೆ ಅಕ್ಕಪಕ್ಕ ವಿವಿಧ ಇಲಾಖೆಗಳ ಕಚೇರಿಗಳು ಮತ್ತು ನ್ಯಾಯಾಲಯ ಇರುವುದರಿಂದ ಯಾರಿಗೂ ತಕ್ಷಣ ಆಸ್ಪತ್ರೆ ಸಿಗುವುದಿಲ್ಲ. ಹೊಸಬರು `ಏ ತಮ್ಮಾ ದವಾಖಾನಿಗ ಹ್ಯಾಂಗ್ ಹೋಗ್ಬೇಕು~ ಎಂದು ಯಾರಿಗಾದರೂ ಕೇಳಿಯೇ ಹೋಗಬೇಕಾಗುತ್ತದೆ. ಇಲ್ಲಿ ನಾಮಫಲಕ ಹಾಕಬೇಕು ಎಂದು ನಾಗರಿಕರು ಒತ್ತಾಯಿಸಿದರೂ ಸಮಸ್ಯೆ ಬಗೆಹರಿದಿಲ್ಲ.ರಸ್ತೆಯಲ್ಲಿ ಅಲ್ಲಲ್ಲಿ ತಗ್ಗುಗಳು ಸಹ ಬಿದ್ದಿವೆ. ಅಲ್ಲದೆ ಇಲ್ಲಿನ ವಿವಿಧ ಇಲಾಖೆಗಳ ಕಚೇರಿಗೆ ಆಗಮಿಸುವ ಜನರು ಈ ರಸ್ತೆಯಲ್ಲಿಯೇ ತಿರುಗಾಡುವುದರಿಂದ ಜನಜಂಗುಳಿ ಹೆಚ್ಚಾಗಿರುತ್ತದೆ. ಹೀಗಾಗಿ ಇಲ್ಲಿ ನಡೆದುಕೊಂಡು ಹೋಗುವುದೇ ಕಷ್ಟಕರವಾದದ್ದು. ಇಂಥದರಲ್ಲಿ ವಾಹನಗಳನ್ನು ಒಯ್ಯುವುದೆಂದರೆ ಮತ್ತಷ್ಟು ತೊಂದರೆದಾಯಕವಾದದ್ದು.ಅಂಬ್ಯುಲನ್ಸ್ ವಾಹನ ಸಹ ಬೇರೆಡೆ ವೇಗವಾಗಿ ಹೋದರೂ ಇಲ್ಲಿಂದ ನಿಧಾನವಾಗಿ ಚಲಿಸುತ್ತವೆ. ರಸ್ತೆಯಲ್ಲಿ ತಗ್ಗುಗಳಿರುವುದರಿಂದ ವಾಹನವನ್ನು ಎಷ್ಟೇ ಜಾಗರೂಕತೆಯಿಂದ ತೆಗೆದುಕೊಂಡು ಹೋದರೂ ಒಮ್ಮಮ್ಮೆ ರೋಗಿಗಳು ಸೀಟಿನಿಂದ ಕೆಳಕೆ ಬೀಳುತ್ತಾರೆ. ಅವರಿಗೆ ಹಚ್ಚಿದ ಸಲಾಯಿನ್‌ನ ಸೂಜಿ ಕಿತ್ತು ಹೋಗುತ್ತದೆ. ಗರ್ಭೀಣಿ ಮಹಿಳೆಯರ ಪಾಡು ಹೇಳತೀರದಂಥದ್ದು ಎಂದು ವಾಹನ ಚಾಲಕರು ಹೇಳುತ್ತಾರೆ.ಈ ರಸ್ತೆ ಬಿಟ್ಟರೆ ಹರಳಯ್ಯ ವೃತ್ತದಿಂದ ಆಸ್ಪತ್ರೆಗೆ ಹೋಗಬಹುದು. ಆದರೆ ಆ ರಸ್ತೆಯೂ ಹದಗೆಟ್ಟಿದ್ದು ಡಾಂಬರು ರಸ್ತೆ ಮೇಲೆ ಮಣ್ಣು ಹಾಕಿದ್ದರಿಂದ ಕೆಸರು ನಿರ್ಮಾಣವಾಗಿದೆ. ಅಲ್ಲದೆ ವೃತ್ತದ ಸಮೀಪದಲ್ಲಿ ರಸ್ತೆಯಲ್ಲಿಯೇ ಮಳೆ ನೀರು ಸಂಗ್ರಹಗೊಳ್ಳುತ್ತಿದೆ. ಆದ್ದರಿಂದ ಹಳೆಯ ತಹಸೀಲ ಕಚೇರಿ ಪಕ್ಕದಿಂದ ಹೋಗುವ ರಸ್ತೆಯ ಸುಧಾರಣೆ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.ಈ ರಸ್ತೆಯ ಡಾಂಬರೀಕರಣಕ್ಕೆ ಶಾಸಕರ ನಿಧಿಯಲ್ಲಿ 5 ಲಕ್ಷ ರೂಪಾಯಿ ಮಂಜೂರಾಗಿವೆ. ನಾಮಫಲಕ ಅಳವಡಿಸಲು ಸಹ ಹಣ ಬಿಡುಗಡೆಯಾಗಿದೆ. ಆದರೂ ಕೆಲಸಕ್ಕೆ ವಿಳಂಬ ಏಕೆ ಮಾಡಲಾಗ್ತುತಿದೆ ಎಂದು ಜನರು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry