ಭಾನುವಾರ, ಏಪ್ರಿಲ್ 11, 2021
25 °C

ಹದಗೆಟ್ಟ ರಸ್ತೆಗಳೇ ಈ ವಾರ್ಡ್ ವಿಶೇಷ

ಪ್ರಜಾವಾಣಿ ವಾರ್ತೆ/ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಹದಗೆಟ್ಟ ರಸ್ತೆಗಳೇ ಈ ವಾರ್ಡ್ ವಿಶೇಷ

ಚಿಕ್ಕಬಳ್ಳಾಪುರ: ಹದಗೆಟ್ಟ ರಸ್ತೆ, ಅಲ್ಲಲ್ಲಿ ಕಾಣಸಿಗುವ ತಿಪ್ಪೆಗುಂಡಿ, ದುರ್ನಾತ ಬೀರುವ ಚರಂಡಿ, ಹಸಿರಿನಿಂದ ಕೂಡಿರುವ ತೋಟಗಳು, ಖಾಲಿ ನಿವೇಶನಗಳು ಮತ್ತು ಪುರಾತನ ಮನೆಗಳು ಇವೆಲ್ಲವೂ     ಮೆಳೈಸಿದಾಗ ಕಂದವಾರಪೇಟೆ ವಾರ್ಡ್‌ನ ಸಮಗ್ರ ಚಿತ್ರಣ ಕಾಣಸಿಗುತ್ತದೆ. ನಗರದ ನಗರಸಭೆ ವೃತ್ತದಿಂದ ಆರಂಭಗೊಳ್ಳುವ ಈ ವಾರ್ಡ್‌ನ ವ್ಯಾಪ್ತಿ ಕಂದವಾರದ ಗಡಿಭಾಗದಲ್ಲಿ ಕೊನೆಗೊಳ್ಳುತ್ತದೆ. ಪ್ರಮುಖ ಕೇಂದ್ರಗಳು, ಸ್ಥಳಗಳು ಇಲ್ಲದ ಈ ಪ್ರದೇಶ ಒಂದರ್ಥದಲ್ಲಿ ಕಿರಿದಾದ ವಾರ್ಡ್. ಉದ್ಯಾನ, ವಿಶ್ರಾಂತಿ ಸ್ಥಳ ಇದ್ಯಾವುದನ್ನು ಹೊಂದಿರದ ಈ ವಾರ್ಡ್ ಆಮೆ ವೇಗದ ಅಭಿವೃದ್ಧಿ ಕಾಣುತ್ತಿದೆ. ಪ್ರಥಮ ನೋಟಕ್ಕೆ ಹಳ್ಳಿಯಂತೆ ಕಂಡುಬರುವ ಈ ವಾರ್ಡ್‌ನಲ್ಲಿ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ.ವಾರಕ್ಕೊಮ್ಮೆ ಪೂರೈಸಲಾಗುತ್ತಿದ್ದ ನೀರು ಈಗ ನಾಲ್ಕು ದಿನಗಳಿಗೊಮ್ಮೆ ಪೂರೈಕೆ  ಆಗುತ್ತಿದೆ ಎಂಬುದೇ ಈ ವಾರ್ಡ್‌ನ ಪ್ರಮುಖ ಸಂಗತಿ. ಕೆಲ ಕಡೆ ಸಾರ್ವಜನಿಕ ನಲ್ಲಿಗಳ ಸೌಲಭ್ಯವಿದ್ದು, ಇನ್ನೂ ಕೆಲವು ಕಡೆ ಮನೆಗಳಲ್ಲಿಯೇ ನಲ್ಲಿಯ ಸೌಕರ್ಯ ಕಲ್ಪಿಸಲಾಗಿದೆ. ಮುಖ್ಯರಸ್ತೆಯಲ್ಲಿ ಮಾತ್ರವೇ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದ್ದು, ಅಡ್ಡರಸ್ತೆಗಳಲ್ಲಿ ಇನ್ನೂ ಕಾಮಗಾರಿ ಕೈಗೊಳ್ಳಲಾಗಿಲ್ಲ. ಒಳಚರಂಡಿ ಮತ್ತು ಡಾಂಬರೀಕರಣ ಕಾಣದ ಪರಿಣಾಮ ಮುಖ್ಯರಸ್ತೆ ಹದಗೆಟ್ಟಿದ್ದು, ವಾಹನ ಸವಾರರು ಇಲ್ಲಿ ಸಂಚರಿಸಲು ಪ್ರಯಾಸಪಡಬೇಕು. ಕಿರಿದಾದ ಅಡ್ಡರಸ್ತೆಗಳಲ್ಲಿ ಸಂಚರಿಸುವುದಂತೂ ಇನ್ನೂ ಕಷ್ಟ.ಇಲ್ಲಿ ಪುರಾತನ ಆಂಜನೇಯ ದೇವಾಲಯ, ಕಾಳಮ್ಮನ ದೇವಾಲಯ ಮತ್ತು ಚೆನ್ನಮ್ಮ ಬಾವಿ ಇರುವುದು ವಿಶೇಷ. ಕಂದವಾರಪೇಟೆಯ ಹೆಬ್ಬಾಗಿಲುನಂತಿರುವ ಆಂಜನೇಯ ದೇವಾಲಯದ ಎದುರು ಚೆನ್ನಮ್ಮ ಬಾವಿಯಿದ್ದು, ಗಿಡಗಂಟಿಗಳಿಂದ ಆವರಿಸಿಕೊಂಡಿದೆ. ಹಸಿರು ಪಾಚಿಗಟ್ಟಿದ ನೀರಿನಿಂದ ಬಾವಿ ಮಲಿನಗೊಂಡಿದ್ದು, ಸುತ್ತಮುತ್ತಲ ವಾತಾವರಣ ಸಹ ಕಲುಷಿತಗೊಳ್ಳುತ್ತಿದೆ.ಆಂಜನೇಯ ದೇವಾಲಯಕ್ಕೆ ಭೇಟಿ ನೀಡುವವರು ಈ ಬಾವಿಯನ್ನು ನಿತ್ಯ ನೋಡುತ್ತಾರೆ, ಚರ್ಚಿಸುತ್ತಾರೆ. ಆದರೆ ಬಾವಿಯ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.ನಗರಸಭೆ ಮತ್ತು ಮುಖ್ಯಮಂತ್ರಿಯವರ ಕಲ್ಯಾಣ ನಿಧಿಯನ್ನು ಅಲ್ಲಲ್ಲಿ ಬಳಕೆ ಮಾಡಲಾಗಿದೆಯಾದರೂ ಇನ್ನೂ ಕೆಲ ರಸ್ತೆಗಳ ಡಾಂಬರೀಕರಣ ಆಗಬೇಕಿದೆ. ಅಡ್ಡರಸ್ತೆಗಳು ಮಣ್ಣಿನಿಂದ ಆವರಿಸಿದ್ದು, ಓಡಾಡುವವರು  ಧೂಳು ಶಪಿಸುವುದು ಸಾಮಾನ್ಯ.ರಸ್ತೆಯ ಎರಡು ಬದಿಗಳಲ್ಲಿ ಮನೆಗಳಿದ್ದು, ದೂಳು-ಮಣ್ಣು ಮನೆಯೊಳಗೆ ಹೊಕ್ಕುತ್ತದೆ. ರಸ್ತೆಯನ್ನು ಡಾಂಬರೀಕರಣಗೊಳಿಸುವುದರ ಜೊತೆಗೆ ಸ್ವಚ್ಛತಾ ಕಾರ್ಯವನ್ನು ಸಹ ಕೈಗೊಂಡರೆ ಹೆಚ್ಚು ಅನುಕೂಲವಾಗುತ್ತದೆ ಎಂದು ನಿವಾಸಿಗಳು ಅಭಿಪ್ರಾಯಪಡುತ್ತಾರೆ.ರಸ್ತೆಬದಿಗಳಲ್ಲಿ ಚರಂಡಿಗಳಿದ್ದು, ನಿತ್ಯವೂ ಸ್ವಚ್ಛತಾ ಕಾರ್ಯವನ್ನು ತೆಗೆದುಕೊಂಡರೆ ಉತ್ತಮ. ಚರಂಡಿಯಲ್ಲಿ ನೀರು ಸುಗಮವಾಗಿ ಹರಿಯುವುದರ ಬದಲು ಅಲ್ಲಲ್ಲಿ ನಿಂತುಕೊಳ್ಳುವ ಸೊಳ್ಳೆ ಮತ್ತು ಇತರ ಕೀಟಾಣುಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ, ಚರಂಡಿ ಬಳಿಯೇ ಮನೆಗಳಿರುವ ಕಾರಣ ಮಕ್ಕಳು ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಹೆಚ್ಚಿರುತ್ತದೆ.ಮುಖ್ಯರಸ್ತೆಗೆ ನೀಡಲಾಗುವ ಆದ್ಯತೆಯನ್ನು ಅಡ್ಡರಸ್ತೆಗಳಿಗೂ ಸಹ ನೀಡಬೇಕು. ಮಾಲಿನ್ಯ ಸಮಸ್ಯೆ ಸ್ವಲ್ಪ ನಿವಾರಣೆಯಾಗುತ್ತದೆ’ ಎಂದು ಸಾರ್ವಜನಿಕರು ಹೇಳುತ್ತಾರೆ.

ಈ ವಾರ್ಡ್‌ನಲ್ಲಿ ಬರುವ ಬಡಾವಣೆಗಳು ವಿಶೇಷ ಹೆಸರುಗಳಿಂದ ಕೂಡಿವೆ. ಆಯಾ ಗಲ್ಲಿಗಳಲ್ಲಿನ ಪ್ರಮುಖ ವ್ಯಕ್ತಿಯ ಹೆಸರುಗಳನ್ನೇ ಗಲ್ಲಿಗಳಿಗೆ ಇಡಲಾಗಿದೆ.

ಉದಾಹರಣೆಗೆ, ಡೇರಿ ಪ್ರಕಾಶ್ ಗಲ್ಲಿ, ಹಾಲು ಹನುಮಂತರಾಯಪ್ಪ ಗಲ್ಲಿ, ವಾಚ್‌ಮೇಕರ್ ಚಂದ್ರಣ್ಣ ಗಲ್ಲಿ, ದಾಸರವರ ಗಲ್ಲಿ, ಕೃಷ್ಣಪ್ಪ ಗಲ್ಲಿ ಮುಂತಾದ ಗಲ್ಲಿಗಳಿವೆ. ಈ ಗಲ್ಲಿಗಳಲ್ಲಿ ಇರುವ ಕೆಲ ಮನೆಗಳು ಹಳೆಯದಾಗಿದ್ದು, ಅವು ತಮ್ಮವೇ ಆದ        ವೈಶಿಷ್ಠ್ಯತೆಯಿಂದ ಕೂಡಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.