ಹದಗೆಟ್ಟ ರಸ್ತೆಗೆ ಜನರ ಹಿಡಿಶಾಪ

7

ಹದಗೆಟ್ಟ ರಸ್ತೆಗೆ ಜನರ ಹಿಡಿಶಾಪ

Published:
Updated:

ರೋಣ. ಸರ್ಕಾರ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಸಾವಿರಾರು ಕೋಟಿ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದೆ. ಇನ್ನೊಂದು ಕಡೆ  ರಸ್ತೆಗಳು ದುರಸ್ತಿ ಕಾಣದೆ ಜನರು ನಿತ್ಯ ನರಳುತ್ತಿದ್ದಾರೆ. ತಾಲ್ಲೂಕಿನ ಸೋಮನಕಟ್ಟಿಯಿಂದ ಅಸೂಟಿಯವರೆಗಿನ ರಸ್ತೆಯು ಇಂಥ ದುಸ್ಥಿತಿಗೆ ತಲುಪಿದ್ದು  ಸಂಪೂರ್ಣವಾಗಿ ಕಿತ್ತು ಹೋಗಿದೆ. ತಗ್ಗು ದಿನ್ನೆಗಳಿರುವ ಈ ರಸ್ತೆಯಲ್ಲಿ  ಜನರು ದಿನನಿತ್ಯ ಪ್ರಯಾಣಿಸಬೇಕಾದ ಅನಿವಾರ್ಯತೆ ಇದ್ದು ಲೋಕೋಪಯೋಗಿ ಅಧಿಕಾರಿಗಳಿಗೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.  ಕ್ಷೇತ್ರದ ಶಾಸಕರ ಗಮನಕ್ಕೆ ಈ ಭಾಗದ ಸಾರ್ವಜನಿಕರು ರಸ್ತೆಯ ಅಧೋಗತಿಯನ್ನು ತಿಳಿಸಿ  ಸುಧಾರಣೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಶಾಸಕರು ಲೋಕೊಪಯೋಗಿ ಇಲಾಖೆ ಅಧಿಕಾರಿ ಗಳನ್ನು ಸಂರ್ಪಕಿಸಿದರೆ  2 ಲಕ್ಷ ಅನುದಾನ ಖರ್ಚು ಮಾಡಿ ರಸ್ತೆ ರಿಪೇರಿ ಮಾಡಲಾಗಿದೆ ಎಂಬ ಉತ್ತರ ನೀಡುತ್ತಾರೆ. ಆದರೆ. ವಾಸ್ತವ ಬೇರೆಯಾಗಿದೆ. ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ ಎನ್ನುವುದು ಖುದ್ದು ಪ್ರಯಾಣ ಮಾಡಿದವರ ಆರೋಪವಾಗಿದೆ. ಅಂತರ ಕಡಿಮೆಗೊಳಿಸುವ ರಸ್ತೆ: ತಾಲ್ಲೂಕಿನ ಅಸೂಟಿ, ಮಾಳವಾಡ, ಕರಮುಡಿ ಗ್ರಾಮಗಳು ಈ ಭಾಗದ ದೊಡ್ಡ ಗ್ರಾಮಗಳಾಗಿದ್ದು. ತಾಲ್ಲೂಕು ಕೇಂದ್ರದಿಂದ ಅಸೂಟಿಗೆ ಹೋಗಲು ಹೊಳೆ ಆಲೂರ ಗ್ರಾಮದಿಂದ ಹಾಯ್ದು ಹೋದರೆ ಸುಮಾರು 30 ಕಿ.ಮೀ ದೂರ ಕ್ರಮಿಸ ಬೇಕಾಗುತ್ತದೆ. ಆದರೆ, ಈ ರಸ್ತೆಯಲ್ಲಿ ಪ್ರಯಾಣಿ ಸಿದರೆ ಸುಮಾರು 17 ಕಿ.ಮೀ ದೂರದಲ್ಲಿ ಪ್ರಯಾಣ ಮಾಡಬೇಕಾಗಿದೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಭಾಗದ ಸಾರ್ವಜನಿಕರು ನಿತ್ಯ ಪರದಾಡು ವಂತಾಗಿದೆ.ಕಲ್ಲು, ಮಣ್ಣು ಹಾಕಿ ಮಾಯವಾದರು:   ಕಾಟಾಚಾರಕ್ಕೆ ಕೆಲಸ ಎಂಬಂತೆ 2ಲಕ್ಷದಲ್ಲಿ ಕಲ್ಲು, ಮಣ್ಣು ಹಾಕಿ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಯಾರಿಗೂ ಲಾಭವಾಗಿಲ್ಲ. ಇಲಾಖೆ ಅಧಿಕಾರಿಗಳು ತಮ್ಮ ಕೆಲಸ ಮರೆತಿದ್ದಾರೆ ಎಂದು ಜಯ ಕರ್ನಾಟಕ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಮುತ್ತಣ್ಣ ಅನವಾಲರ, ಶರಣಪ್ಪ ಬರಡ್ಡಿ, ಶಂಕರಗೌಡ ದಾನರೆಡ್ಡಿ, ರಾಯಪ್ಪ ಹೊಸಳ್ಳಿ, ಬಸವರಾಜ ಅನವಾಲದ, ದೊಡ್ಡಬಸಪ್ಪ ಬರಡ್ಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ್ರಹ: ರಸ್ತೆ ದುರಸ್ತಿ ಮಾಡದಿದ್ದಲ್ಲಿ  ಮುಂಬರುವ ದಿನಗಳಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಇಲಾಖೆಯ ಕಾರ್ಯಾಲಯದ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಸಂಘಟನೆಯ ತಾಲ್ಲೂಕು ಘಟಕ ಅಧ್ಯಕ್ಷ ಮುತ್ತಣ್ಣ ಅನವಾಲದ ಹೇಳಿದರು.ಅಧಿಕಾರಿ ಅಭಿಪ್ರಾಯ: ಈ ವಿಷಯವಾಗಿ ಎಂಜಿನಿಯರ್ ಆರ್.ಡಿ ಎಲಿಗಾರ ಅವರನ್ನು ಸಂಪರ್ಕಿಸಿದಾಗ ಈ ರಸ್ತೆಯ ದುರಸ್ತಿ ಮಾಡಿದ್ದು ನಿಜ. ಆದರೆ, ಗುತ್ತಿಗೆದಾರ ಗೂಳಪ್ಪನಿಗೆ ಇನ್ನೂ ಹಣ ಸಂದಾಯ ಮಾಡಿಲ್ಲ  ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry