ಹದಗೆಟ್ಟ ರಸ್ತೆ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಯಾದಗಿರಿ: ಜಿಲ್ಲಾ ಕೇಂದ್ರದಿಂದ ಕೇವಲ 18 ಕಿ.ಮೀ. ದೂರದಲ್ಲಿರುವ ವಡಗೇರಾ ಗ್ರಾಮಕ್ಕೆ ತಲುಪಬೇಕಾದರೆ ಹೆಚ್ಚೆಂದರೆ ಅರ್ಧ ಗಂಟೆ ಸಮಯ ಸಾಕು. ಆದರೆ ಯಾದಗಿರಿಯಿಂದ ವಡಗೇರಾಕ್ಕೆ ಹೋಗಿ ಸೇರಬೇಕಾದರೆ, ಒಂದು ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತಿದೆ. ವಾಹನಗಳು ಹೊಯ್ದಾಡುತ್ತ ಸಾಗಿ ಬರುವುದರಲ್ಲಿ ಪ್ರಯಾಣಿಕರೂ ಪ್ರಯಾಸಪಡಬೇಕು.
ಅಂತರ ಜಿಲ್ಲಾ ಮುಖ್ಯ ರಸ್ತೆಯಾಗಿರುವ ವಡಗೇರಾ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು, ಬಸ್ ಚಾಲಕರು ಹಾಗೂ ಪ್ರಯಾಣಿಕರು ಹಿಡಿ ಶಾಪ ಹಾಕುತ್ತ ಈ ರಸ್ತೆಯ ಮೇಲೆ ವಾಹನ ಓಡಿಸುತ್ತಾರೆ.
ಯಾದಗಿರಿಯಿಂದ ರಾಯಚೂರಿಗೆ ಸಂಕರ್ಪ ಕಲ್ಪಿಸುವ ಈ ರಸ್ತೆಯಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಈ ಭಾಗದ ಪ್ರಸಿದ್ಧ ದೇವಾಲಯಗಳಾದ ಗೂಗಲ್ ಅಲ್ಲಮಪ್ರಭು, ಸಂಗಮದಲ್ಲಿರುವ ಸಂಗಮನಾಥ ದೇವಾಲಯ, ಪಕ್ಕದಲ್ಲಿರುವ ಇರುವ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಗೆ ಹೋಗಬೇಕಾದರೆ ಈ ಮುಖ್ಯ ರಸ್ತೆಯ ಮೂಲಕವೇ ಸಂಚರಿಸಬೇಕು.
ವಿದ್ಯಾರ್ಥಿಗಳಿಗೂ ತೊಂದರೆ: ಶಹಾಪುರ ತಾಲ್ಲೂಕಿನ ಬೆಂಡೆಬೆಂಬಳಿ, ಕದರಾಪುರ, ತುಮಕೂರ, ರೋಟ್ನಡಗಿ, ಹಾಲಗೇರಾ, ಗಡ್ಡೆಸೂಗುರ ಹಾಗೂ ಇನ್ನಿತರ ಗ್ರಾಮದ ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರದ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ.
ರಸ್ತೆ ಹಾಳಾಗಿರುವುದರಿಂದ ಬೆಳಗಿನ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರುತ್ತಾರೆ.
ಇನ್ನೊಂದೆಡೆ ವಡಗೇರಾ ಹೋಬಳಿಯ ಸುಮಾರು 40 ಹಳ್ಳಿಗಳ ವ್ಯಾಪ್ತಿಯ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಹೋಗಬೇಕಾಗುತ್ತದೆ. ರಸ್ತೆ ಹದಗೆಟ್ಟಿರುವುದರಿಂದ ಸಕಾಲದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯದಂತಾಗಿದೆ.
ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಒಂದು ವೇಳೆ ಮೈಮರೆತು ಕುಳಿತರೆ, ಮೈಗೆ ಪೆಟ್ಟು ಬೀಳುವುದು ನಿಶ್ಚಿತ. `ಈ ರಸ್ತ್ಯಾಗ ಬಸ್ನ್ಯಾಗ ಎಚ್ಚರ ತಪ್ಪಿ ಕುಳಿತರ್ ಹಲ್ಲು ಮುರಿತ್ಯಾವ್' ಎನ್ನುತ್ತಾರೆ ಬಸ್ನಲ್ಲಿ ಸಂಚರಿಸುವ ಮರೆಮ್ಮ.
ಮಳೆ ಬಂದರೆ ಕೆಸರು ಗದ್ದೆಯಂತಾಗುವ ಈ ರಸ್ತೆಯ ಮೇಲೆ ಎದುರಿನಿಂದ ವಾಹನ ಬಂದರೆ, ಪಕ್ಕದಲ್ಲಿ ಹಾದು ಹೋಗುವವರಿಗೆ ರಾಡಿಯ ನೀರು ಸಿಡಿಯುವುದು ಗ್ಯಾರಂಟಿ. ವಾಹನ ಹೋದ ರಭಸಕ್ಕೆ ಗುಂಡಿಯಲ್ಲಿ ನಿಂತ ನೀರು ಚೆಲ್ಲಾಪಿಲ್ಲಿ ಆಗುತ್ತದೆ. ಜೊತೆಗೆ ನಿತ್ಯ ಅನೇಕ ವಾಹನಗಳು ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ.
ರಸ್ತೆಯ ನಿರ್ಮಾಣ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವುದಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಕರವೇ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶರಣು ಇಟಗಿ ಹೇಳುತ್ತಾರೆ.
ಕ್ಷೇತ್ರದ ಶಾಸಕರು ಇತ್ತ ಗಮನ ಹರಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.