ಮಂಗಳವಾರ, ಏಪ್ರಿಲ್ 20, 2021
25 °C

ಹದಗೆಟ್ಟ ರಸ್ತೆ; ಗ್ರಾಮಸ್ಥರ ಪಾಡು ಹೇಳತೀರದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ರಾಜ್ಯ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿರುವ ಗೊರ್ತಪಲ್ಲಿ ಮತ್ತು ಬೋಯಿಪಲ್ಲಿ ರಸ್ತೆಗೆ ಒಮ್ಮೆ ಭೇಟಿ ನೀಡಬೇಕು. ಬಹುತೇಕ ಮಂದಿ ಮತ್ತೆ ವಾಹನಗಳಲ್ಲಿ ಅಲ್ಲಿ ಪ್ರಯಾಣಿಸಲು ಬಯಸುವುದಿಲ್ಲ.ಕಾರಣ, ಆ ರಸ್ತೆಯಲ್ಲಿ ಮತ್ತೆ ಪ್ರಯಾಣಿಸಿದರೆ ವಾಹನಗಳು ಬೇಗನೇ ಹಾಳಾಗುತ್ತವೆ ಮತ್ತು ಪ್ರಯಾಣಿಕರಲ್ಲಿ ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ರಸ್ತೆಯಲ್ಲಿನ ಹಳ್ಳ, ಗುಂಡಿ ಮತ್ತು ಜಲ್ಲಿಕಲ್ಲುಗಳು ಸುಗಮ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲ. ಈ ರಸ್ತೆಯನ್ನು ದಾಟಿಕೊಂಡು ಬರುವಷ್ಟರಲ್ಲಿ ನರಕಯಾತನೆಯ ಅನುಭವವಾಗುತ್ತದೆ.ಪಟ್ಟಣದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಗೊರ್ತಪಲ್ಲಿ, ಬೋಯಿಪಲ್ಲಿ ಮತ್ತು ಶ್ರೀರಾಮಪುರದ ಗ್ರಾಮಗಳತ್ತ ಸಾಗುವ ರಸ್ತೆಗಳು ಹಲವಾರು ವರ್ಷಗಳಿಂದ ಡಾಂಬರೀಕರಣ ಕಂಡಿಲ್ಲ. ದೂರದೂರಕ್ಕೆ ಕಣ್ಣು ಹಾಯಿಸಿದಷ್ಟು ಗುಂಡಿದಿಣ್ಣೆ, ಜಲ್ಲಿಕಲ್ಲುಗಳು, ತೆಗ್ಗುಹಳ್ಳ ಕಾಣಸಿಗುತ್ತವೆ. ಈ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಸರಿಯಾಗಿ ಚಾಲನೆ ಮಾಡಲಾಗದೇ ವಾಹನ ಸವಾರರು ಕೆಳಗಡೆ ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ. ವಾಹನಗಳ ದುರಸ್ತಿಗೆ ಹಣವನ್ನು ವ್ಯಯ ಮಾಡುತ್ತಿದ್ದಾರೆ.`ಆಂಧ್ರಪ್ರದೇಶದ ವ್ಯಾಪ್ತಿಯಲ್ಲಿರುವ ರಸ್ತೆಗಳು ಉತ್ತಮ ಗುಣಮಟ್ಟದಿಂದ ಕೂಡಿದ್ದು, ಅಲ್ಲಿ ಪ್ರಯಾಣಿಸಲು ಯಾವುದೇ ತೊಂದರೆಯಿಲ್ಲ. ಆದರೆ ನಮ್ಮ ರಾಜ್ಯದ ರಸ್ತೆಗಳೇ ಸಂಪೂರ್ಣವಾಗಿ ಹಾಳಾಗಿವೆ. ಉತ್ತಮ ರಸ್ತೆ ಮತ್ತು ಡಾಂಬರೀಕರಣಕ್ಕಾಗಿ ಹಲವಾರು ಬಾರಿ ಮನವಿಪತ್ರ ಸಲ್ಲಿಸಿದರೂ ಯಾರೂ ಸಹ ಇದರತ್ತ ಗಮನಹರಿಸಿಲ್ಲ.

 

ಚುನಾವಣೆಯಲ್ಲಿ ಮಾತ್ರ ಕಾಣಸಿಗುವ ಜನಪ್ರತಿನಿಧಿಗಳು ಮತ್ತೆ ಇಷ್ಟು ದೂರ ಬರುವುದೇ ಇಲ್ಲ. ನಮ್ಮ ಗೋಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು ಎಂಬುದು ಗೊತ್ತಾಗುತ್ತಿಲ್ಲ~ ಎಂದು ಗೊರ್ತಪಲ್ಲಿ ಗ್ರಾಮದ ನರಸಿಂಹಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು. `ಗಡಿಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಪ್ರತಿ ದಿನ ಲಕ್ಷಾಂತರ ಟನ್‌ಗಳನ್ನು ಹೊತ್ತ ಸಾವಿರಾರು ಲಾರಿಗಳು ಈ ರಸ್ತೆಯಿಂದಲೇ ಸಂಚರಿಸುತ್ತವೆ.

 

ಅವುಗಳಿಂದಾಗಿ ರಸ್ತೆಗಳು ಇನ್ನೂ ಹಾಳಾಗಿವೆ. ರಸ್ತೆಗಳು ಹಾಳಾಗುವುದು ಒಂದೆಡೆಯಾದರೆ, ಮತ್ತೊಂದೆಡೆ ಅದರಿಂದ ಎದ್ದೇಳುವ ದೂಳು ಮತ್ತು ಮಾಲಿನ್ಯ ಜನರ ಆರೋಗ್ಯವನ್ನು ಹದಗೆಡಿಸುತ್ತಿವೆ. ದ್ವಿಚಕ್ರ ವಾಹನ, ಸೈಕಲ್‌ಗಳಲ್ಲಿ ಮಾತ್ರವಲ್ಲದೇ ಪಾದಚಾರಿಗಳ ಆರೋಗ್ಯವು ಹದಗೆಡುತ್ತಿದೆ. ದುಡಿದ ಹಣವೆಲ್ಲ ಆಸ್ಪತ್ರೆಗೆ ಖರ್ಚು ಮಾಡಬೇಕು~ ಎಂದು ಅವರು ನೊಂದು ನುಡಿದರು.`ನಗರಪ್ರದೇಶಗಳತ್ತ ಹೆಚ್ಚಿನ ಗಮನ ತೋರಿಸುವ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದ ಕಡೆಗೂ ಗಮನಹರಿಸಬೇಕು. ರಸ್ತೆಗಳ ಡಾಂಬರೀಕರಣಕ್ಕೆ ಅನುದಾನ ಬಿಡುಗಡೆ ಮಾಡಿದರೆ ಸಾಲದು, ಆ ಅನುದಾನ ಸದ್ಬಳಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕು.

 

ಹಣ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಹಾಳಾಗಿರುವ ರಸ್ತೆಗಳನ್ನು ಗುರುತಿಸಿ, ಅವುಗಳ ಡಾಂಬರೀಕರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಗ್ರಾಮಸ್ಥರ ಆರೋಗ್ಯ ಹಿತದೃಷ್ಟಿಯಿಂದ ಸರ್ಕಾರ ಇದರ ಕುರಿತು ಕೂಡಲೇ ಕ್ರಮ ತೆಗೆದುಕೊಳ್ಳಬೇಕು~ ಎಂದು ಬೋಯಿಪಲ್ಲಿ ಗ್ರಾಮದ ರೈತ ರಾಮಚಂದ್ರರೆಡ್ಡಿ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.