ಶುಕ್ರವಾರ, ಮೇ 27, 2022
23 °C

ಹದಗೆಟ್ಟ ರಸ್ತೆ, ಚರಂಡಿ ಅವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೌರಿಬಿದನೂರು: ಪಟ್ಟಣದ ಕರೇಕಲ್ಲಹಳ್ಳಿಯ ಭಗತ್‌ಸಿಂಗ್ ರಸ್ತೆಯ ವಿದ್ಯಾನಗರದ 14ನೇ ವಾರ್ಡ್‌ನಲ್ಲಿ ಚರಂಡಿಗಳು ಮತ್ತು ರಸ್ತೆಗಳು ಸ್ವಚ್ಛತೆಯಿಲ್ಲದೆ ನಿವಾಸಿಗಳು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಚರಂಡಿಯಲ್ಲಿ ಮಲಿನ ನೀರು ನಿಂತಿದೆ. ಚರಂಡಿಯಿಂದ ಬರುವ ಗಬ್ಬು ವಾಸನೆಯಿಂದಾಗಿ ಇಲ್ಲಿ ವಾಸಿಸುವುದು ಅಸಹನೀಯ ಎಂದು ನಿವಾಸಿಗಳು ಹೇಳುತ್ತಾರೆ.`ರಸ್ತೆಗಳು ಡಾಂಬರೀಕರಣ ಕಂಡು ಹಲವು ವರ್ಷಗಳು ಕಳೆದಿವೆ. ಚರಂಡಿಯನ್ನು ಶುಚಿಗೊಳಿಸಿ ಮತ್ತು ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ~ ಎಂದು ಪಟ್ಟಣದ 14ನೇ ವಾರ್ಡ್ ನಿವಾಸಿ ನಾಗರಾಜ್ `ಪ್ರಜಾವಾಣಿ~ಗೆ ತಿಳಿಸಿದರು.`ಸಂಜೆ ವೇಳೆ ಮನೆ ಮುಂದೆ ಕೂತುಕೊಳ್ಳಲು ಆಗುವುದಿಲ್ಲ. ವಾಯುವಿಹಾರಕ್ಕೂ ಸಹ ಹೋಗುವಂತಿಲ್ಲ. ಹೊರಗಡೆ ಬಂದರೆ ಸಾಕು, ಸೊಳ್ಳೆಗಳ ಕಾಟ ಶುರುವಾಗುತ್ತದೆ. ಮನೆ ಬಾಗಿಲುಗಳನ್ನು ಹಾಕಿಕೊಳ್ಳದಿದ್ದರೆ, ಇನ್ನೂ ದೊಡ್ಡ ಸಮಸ್ಯೆಯಾಗುತ್ತದೆ. ಮನೆಯೊಳಗೆ ಬರುವ ಸೊಳ್ಳೆಗಳು ನೆಮ್ಮದಿಯಾಗಿ ನಿದ್ದೆ ಮಾಡಲು ಅವಕಾಶ ಕೊಡುವುದಿಲ್ಲ. ಗಲೀಜು ವಾತಾವರಣದಲ್ಲಿ ಆರೋಗ್ಯದಿಂದ ಜೀವಿಸುವುದಾದರೂ ಹೇಗೆ~ ಎಂದು ಅವರು ಹೇಳಿದರು.`ಪಟ್ಟಣದ ಹಲವು ಬಡಾವಣೆಗಳಲ್ಲಿ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಲಾಗಿದೆ. ಅಚ್ಚುಕಟ್ಟಾದ  ವ್ಯವಸ್ಥೆ ಮಾಡಲಾಗಿದೆ. ಆದರೆ 14ನೇ ವಾರ್ಡ್‌ನ ವಿದ್ಯಾನಗರದಲ್ಲಿ ಮಾತ್ರ ಏನನ್ನೂ ಮಾಡಲಾಗಿಲ್ಲ.

 ರಸ್ತೆ ಅಭಿವೃದ್ಧಿಪಡಿಸಿಲ್ಲ. ಮಣ್ಣಿನ ರಸ್ತೆಯನ್ನೂ ಸಹ ಸರಿಯಾಗಿ ನಿರ್ವಹಣೆ ಮಾಡಲಾಗಿಲ್ಲ~ ಎಂದು ಮತ್ತೊಬ್ಬ ನಿವಾಸಿ ಪ್ರಸಾದ್ ತಿಳಿಸಿದರು.`ಪುರಸಭೆಯವರು ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸದೆ ತಿಪ್ಪೆಗುಂಡಿಗಳು ನಿರ್ಮಾಣವಾಗಿವೆ. ತ್ಯಾಜ್ಯದ ಪ್ರಮಾಣದ ಹೆಚ್ಚಾದಂತೆ ನಾಯಿ, ಹಂದಿಗಳ ಕಾಟವೂ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆ ನಿವಾರಿಸಲು ಪುರಸಭೆಯವರು ಮುಂದಾಗಬೇಕು~ ಎಂದು ಅವರು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.